ADVERTISEMENT

ರೈತರ ಪ್ರೋತ್ಸಾಹ ಧನ ತಡೆದ ಕಾಂಗ್ರೆಸ್‌: ಸರ್ಕಾರದ ನಡೆ ಖಂಡಿಸಿದ ಕೇಂದ್ರ ಸಚಿವ ಖೂಬಾ

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 15:29 IST
Last Updated 19 ಜುಲೈ 2023, 15:29 IST
ಭಗವಂತ ಖೂಬಾ
ಭಗವಂತ ಖೂಬಾ   

ಬೀದರ್‌: ‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದ ಪ್ರೋತ್ಸಾಹ ಧನದ ಜೊತೆಗೆ ರಾಜ್ಯದಿಂದ ನೀಡುತ್ತಿದ್ದ ₹4 ಸಾವಿರ ಹೆಚ್ಚುವರಿ ಪ್ರೋತ್ಸಾಹ ಧನವನ್ನು ನಿಲ್ಲಿಸಿರುವ ರಾಜ್ಯದ ಕಾಂಗ್ರೆಸ್‌ ಸರ್ಕಾರದ ತೀರ್ಮಾನ ರೈತ ವಿರೋಧಿಯಾಗಿದ್ದು, ಇದನ್ನು ಖಂಡಿಸುತ್ತೇನೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

‘ಈ ವಿಷಯವಾಗಿ ಮಂಗಳವಾರ ವಿಧಾನಸಭೆ ಅಧಿವೇಶನದಲ್ಲೂ ಚರ್ಚೆ ನಡೆದಿದೆ. ಈ ಕುರಿತು ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದಾಗ, ಅವರು ಸಮರ್ಪಕವಾದ ಉತ್ತರ ನೀಡಲಿಲ್ಲ. ಪ್ರೋತ್ಸಾಹ ಧನ ನಿಲ್ಲಿಸುವುದರಿಂದ ರಾಜ್ಯದ ಲಕ್ಷಾಂತರ ರೈತರಿಗೆ ಅನ್ಯಾಯವಾಗಲಿದೆ’ ಎಂದು ಖೂಬಾ ಅಭಿಪ್ರಾಯ ಪಟ್ಟಿದ್ದಾರೆ.

ಪ್ರತಿ ವರ್ಷ ಕೇಂದ್ರದ ₹6 ಸಾವಿರ ಜೊತೆಗೆ ರಾಜ್ಯ ಸರ್ಕಾರ ₹4 ಸಾವಿರ ಸೇರಿಸಿ ಪ್ರತಿ ರೈತನಿಗೆ  ₹10 ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ರಾಜ್ಯದ ಒಟ್ಟು 57 ಲಕ್ಷ ರೈತರಿಗೆ ₹5,900 ಕೋಟಿ ಪಾವತಿಸಲಾಗುತ್ತಿದೆ. ಬೀದರ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 2,62,392 ರೈತರಿಗೆ ಒಟ್ಟು ₹220.60 ಕೋಟಿ ಪ್ರೋತ್ಸಾಹ ಧನ ರೈತರ ಖಾತೆಗೆ ನೇರ ಜಮೆ ಆಗುತ್ತದೆ. ಇದು ಮುಂದುವರೆಯಬೇಕು. ಜಿಲ್ಲೆಯ ಇಬ್ಬರು ಸಚಿವರು ಏನು ಮಾಡುತ್ತಿದ್ದಾರೆ? ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ರೈತರ ಪರವಾಗಿ ನಿಲ್ಲಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರು ನಿಮಗೆ ಜಿಲ್ಲೆಗೆ ಬರಲು ಬಿಡುವುದಿಲ್ಲ. ಪ್ರತಿ ಜಿಲ್ಲೆಯಲ್ಲೂ ಇದರ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

‘ತುಘಲಕ್‌ ಆಡಳಿತ ಪ್ರಾರಂಭದ ಸೂಚನೆ’

‘ರಾಜ್ಯದಲ್ಲಿ ತುಘಲಕ್‌ ಆಡಳಿತ ಪ್ರಾರಂಭವಾಗಿರುವ ಸೂಚನೆ ಸಿಕ್ಕಿದೆ. ಅದಕ್ಕೆ ಸಾಕ್ಷಿ ಬಿಜೆಪಿಯ ಹತ್ತು ಜನ ಶಾಸಕರನ್ನು ಸದನದಿಂದ ಅಮಾನತು ಮಾಡಿರುವುದು. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಶಾಸಕರನ್ನು ಸೇಡಿನ ಭಾಗವಾಗಿ ಸದನದಿಂದ ಅಮಾನತು ಮಾಡಿರುವುದು ಖಂಡನಾರ್ಹ. ಜನರಿಗೆ ಸುಳ್ಳು ಭರವಸೆಗಳನ್ನು ಕೊಟ್ಟು ಅಧಿಕಾರ ಹಿಡಿದು ಜನರಿಗೆ ಕಾಂಗ್ರೆಸ್‌ ಮೋಸ ಮಾಡಿದೆ. ಈಗ ಪ್ರಜಾಪ್ರಭುತ್ವ ವಿರೋಧಿ ಹೆಜ್ಜೆ ಇಡುತ್ತಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವ ಸ್ಪೀಕರ್, ಕಾಂಗ್ರೆಸ್‌ ಏಜೆಂಟ್ ಆಗಿ ಕೆಲಸ ಮಾಡುತ್ತಿರುವುದು ಸರಿಯಲ್ಲ’ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.