ADVERTISEMENT

ಬೀದರ್‌: ಹಿಂದುಳಿದ ಹಣೆಪಟ್ಟಿಗೆ ಖಂಡ್ರೆ ಪರಿವಾರ ಕಾರಣ

ಮತ್ತೆ ಖಂಡ್ರೆ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಭಗವಂತ ಖೂಬಾ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 16:06 IST
Last Updated 15 ಏಪ್ರಿಲ್ 2024, 16:06 IST
ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೀದರ್‌ನಲ್ಲಿ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿ ಪಕ್ಷದ ಮುಖಂಡರೊಂದಿಗೆ ಹೊರಬಂದರು
ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೀದರ್‌ನಲ್ಲಿ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿ ಪಕ್ಷದ ಮುಖಂಡರೊಂದಿಗೆ ಹೊರಬಂದರು   

ಬೀದರ್‌: ‘ರಾಜ್ಯದಲ್ಲಿ ಬೀದರ್‌ ಜಿಲ್ಲೆಗೆ ಹಿಂದುಳಿದ ಹಣೆಪಟ್ಟಿ ಬರಲು ಖಂಡ್ರೆ ಪರಿವಾರದವರೇ ಕಾರಣ’ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಅವರು ಗಂಭೀರ ಆರೋಪ ಮಾಡಿದರು.

ಬೀದರ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಗರದಲ್ಲಿ ಸೋಮವಾರ ಚುನಾವಣಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ನಾಮಪತ್ರ ಸಲ್ಲಿಸಿ ಹೊರಬಂದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

ಅಭಿವೃದ್ಧಿ ವಿಷಯಗಳ ಕುರಿತು ಬಹಿರಂಗ ಚರ್ಚೆ ನಡೆಸಲು ನಾಲ್ಕು ವರ್ಷಗಳ ಹಿಂದೆ ಸಚಿವ ಈಶ್ವರ ಬಿ.ಖಂಡ್ರೆಯವರಿಗೆ ನಗರದ ಗಣೇಶ ಮೈದಾನಕ್ಕೆ ಕರೆದಿದ್ದೆ. ಆದರೆ, ಅವರು ಬಂದಿರಲಿಲ್ಲ. ಈಗ ಅವರ ಮಗ ಸಾಗರ್ ಖಂಡ್ರೆ ಮತ್ತೇನೂ ಬಹಿರಂಗ ಚರ್ಚೆಗೆ ಕರೆಯುತ್ತಾರೆ. 65 ವರ್ಷಗಳಿಂದ ಖಂಡ್ರೆ ಕುಟುಂಬ ಜಿಲ್ಲೆಯಲ್ಲಿ ರಾಜಕಾರಣ ಮಾಡುತ್ತಿದೆ. ಕರ್ನಾಟಕದಲ್ಲಿ ಬೀದರ್‌ಗೆ ಅತಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಬರಲು ಖಂಡ್ರೆಯವರೇ ಕಾರಣ. ಹೀಗಿರುವಾಗ ಅನವಶ್ಯಕವಾಗಿ ಬಹಿರಂಗ ಚರ್ಚೆಗೆ ಕರೆದರೆ ಏನು ಪ್ರಯೋಜನ ಎಂದು ಹೇಳಿದರು.

ADVERTISEMENT

ಸಾಗರ್‌ ಖಂಡ್ರೆಯವರ ವಯಸ್ಸು ಚಿಕ್ಕದಿರುವುದು ಇಡೀ ಕ್ಷೇತ್ರದ ಜನತೆಗೆ ಗೊತ್ತಿದೆ. ಅವರಿಗೆ ಬುದ್ಧಿ ಇದೆಯೋ ಇಲ್ಲವೋ ಎನ್ನುವುದು ಅವರು ಕ್ಷೇತ್ರದ ಜನರಿಗೆ ತೋರಿಸಿಕೊಳ್ಳಬೇಕಿತ್ತು ಎಂದರು.

ಲೋಕಸಭಾ ಚುನಾವಣೆಯಲ್ಲಿ ಈ ಸಲ 3 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಜಯ ಸಾಧಿಸಲಿದೆ. ಏ.18ರಂದು ನಗರದ ಗಣೇಶ ಮೈದಾನದಲ್ಲಿ ಪ್ರಚಾರ ಸಭೆ ನಡೆಸಿ, ಮತ್ತೊಮ್ಮೆ ನಾಮಪತ್ರ ಸಲ್ಲಿಸುವೆ. ಅಂದಿನ ಕಾರ್ಯಕ್ರಮದಲ್ಲಿ 25 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳುವರು. ಜೆಡಿಎಸ್‌ ಮೈತ್ರಿಯಿಂದ ಪ್ರಯೋಜನವಾಗಲಿದೆ. ಜೆಡಿಎಸ್ ಮುಖಂಡರು, ಕಾರ್ಯಕರ್ತರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಮತಗಳು ಮೈತ್ರಿಯಿಂದ ಬರಲಿವೆ ಎಂದು ಭರವಸೆ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳು ಬೋಗಸ್‌ ಆಗಿವೆ. ಕಾಂಗ್ರೆಸ್‌ನವರೇ ಇದರ ಬಗ್ಗೆ ಸರ್ವೆ ನಡೆಸಿದ್ದಾರೆ. ಆ ಪಕ್ಷಕ್ಕೆ ಗ್ಯಾರಂಟಿಗಳು ಮುಳುವಾಗಿವೆ. ಬಿಜೆಪಿಯ ಗ್ಯಾರಂಟಿ ಬೋಗಸ್‌ ಅಲ್ಲ. 81 ಕೋಟಿ ಜನ ಕೇಂದ್ರದ ಯೋಜನೆಗಳ ಲಾಭ ಪಡೆದಿದ್ದಾರೆ. ಕೋವಿಡ್‌ ವ್ಯಾಕ್ಸಿನ್‌ ತೆಗೆದುಕೊಂಡರೆ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಈಶ್ವರ ಬಿ.ಖಂಡ್ರೆ, ಸಾಗರ್‌ ಖಂಡ್ರೆ ಅವರೆಲ್ಲ ಕೇಂದ್ರ ಯೋಜನೆಗಳ ಲಾಭಾರ್ಥಿಗಳೇ ಆಗಿದ್ದಾರೆ.

ಚುನಾವಣೆ ನಂತರ ಕಾಂಗ್ರೆಸ್‌ ಗ್ಯಾರಂಟಿಯೂ ಇರುವುದಿಲ್ಲ. ಸರ್ಕಾರವೂ ಇರುವುದಿಲ್ಲ. ಅವರ ಪಕ್ಷ ಒಡೆದು ಹೋಳಾಗುತ್ತದೆ ಎಂದು ಭವಿಷ್ಯ ನುಡಿದರು.

ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಕುಮಾರಸ್ವಾಮಿ ಯಾವ ಸಂದರ್ಭದಲ್ಲಿ, ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಬಿಜೆಪಿ ಜನರ ಮಧ್ಯೆ ಹೋಗಿ ಅವರ ಅಭಿಪ್ರಾಯ ಪಡೆದು ಅದರ ಆಧಾರದ ಮೇಲೆ ಪ್ರಣಾಳಿಕೆ ರೂಪಿಸಿದೆ. ಕಾಂಗ್ರೆಸ್‌ ಪ್ರಣಾಳಿಕೆ ನೋಡಿಕೊಂಡು ನಾವು ಕಾಪಿ ಮಾಡಿಲ್ಲ. ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಏನೂ ಇಲ್ಲ. ಬಿಟ್ಟಿ ಭಾಗ್ಯಗಳು, ಮೋಸ ಮಾಡುವ ಅಂಶಗಳಿವೆ ಎಂದು ಟೀಕಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ, ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್‌ ಮಲ್ಕಾಪುರೆ, ಮುಖಂಡರಾದ ಎಂ.ಜಿ.ಮುಳೆ, ಬಸವರಾಜ ಆರ್ಯ ಹಾಗೂ ಮತ್ತಿತರರು ಹಾಜರಿದ್ದರು.

‘ಪರಿವಾರ ಅಂದರೆ ಪ್ರಧಾನಿ ಹುಡುಗ ಅಂದರೆ ಅಭ್ಯರ್ಥಿ’

‘ಯಾರಿಗಾದರೂ ಹೆಣ್ಣು ಕೊಡಬೇಕಾದರೆ ಪರಿವಾರ ಅಪ್ಪ–ಅಮ್ಮನನ್ನು ನೋಡುತ್ತಾರೆ. ರಾಜಕೀಯದಲ್ಲಿ ಪಕ್ಷ ನೋಡುತ್ತಾರೆ. ರಾಜಕೀಯದಲ್ಲಿ ಪರಿವಾರ ಅಂದರೆ ಪ್ರಧಾನಿ ಅಭ್ಯರ್ಥಿ ಯಾರು ಅಂತ ನೋಡುತ್ತಾರೆ. ಹುಡುಗ ಅಂದರೆ ಆ ಪಕ್ಷದ ಅಭ್ಯರ್ಥಿ ಯಾರೆಂದು ನೋಡುತ್ತಾರೆ’ ಎಂದು ಸಚಿವ ಭಗವಂತ ಖೂಬಾ ವ್ಯಾಖ್ಯಾನ ಮಾಡಿದರು.

ಕಾಂಗ್ರೆಸ್ಸಿನ ಅಭ್ಯರ್ಥಿ (ಸಾಗರ್‌ ಖಂಡ್ರೆ) ತಂದೆಯ ಹೆಸರಲ್ಲಿ ಲೊಟಂಗಿ ಹೊಡೆಯುವವರಿದ್ದಾರೆ. ರಾಜಕೀಯ ಸಾಮಾಜಿಕ ಜೀವನದಲ್ಲಿ ಅವರ ಕೊಡುಗೆ ಶೂನ್ಯ. ಪಕ್ಷಕ್ಕೆ 30 ವರ್ಷ ಸಂಸದನಾಗಿ ಹತ್ತು ವರ್ಷ ನಾನು ಕೊಟ್ಟಿರುವ ಕೊಡುಗೆಗಳನ್ನು ನೋಡಿ ಜನ ನನಗೆ ಮತ ಕೊಡುತ್ತಾರೆ ಎಂಬರ್ಥದಲ್ಲಿ ಹೇಳಿದ್ದೇನೆ. ಹೆಣ್ಣು ಕೊಡಲ್ಲ ಎಂದು ಬೇರೆ ರೀತಿ ವ್ಯಾಖ್ಯಾನಿಸಬೇಕಿಲ್ಲ ಎಂದು ಈ ಹಿಂದೆ ಅವರು ಕೊಟ್ಟಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.