ಬೀದರ್: ‘ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳುವ ಹುದ್ದೆಗಳನ್ನು ನನ್ನ ಗಮನಕ್ಕೆ ತಂದು ನೇಮಕಾತಿ ಮಾಡಿಕೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಪತ್ರ ಬರೆದಿರುವ ಪರಿಸರ ಖಾತೆ ಸಚಿವ ಈಶ್ವರ ಬಿ. ಖಂಡ್ರೆ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು’ ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ರಾಜ್ಯಪಾಲ ಥಾವರಚಂದ ಗೆಹಲೋತ್, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಈ ಸಂಬಂಧ ಅವರು ಆ. 21ರಂದು ಇಬ್ಬರಿಗೆ ಪತ್ರ ಬರೆದಿದ್ದು, ಬುಧವಾರ ಆ ಪತ್ರಗಳನ್ನು ಪ್ರಕಟಣೆ ಮೂಲಕ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
ಹುದ್ದೆಗಳ ನೇಮಕಾತಿ ಬಗ್ಗೆ ಖಂಡ್ರೆ ಅವರು ಜಿಪಂ ಸಿಇಒ ಅವರಿಗೆ ಪತ್ರ ಬರೆದು, ಅವರ ಮೂಲಕ ಎಲ್ಲಾ ಇಲಾಖೆಗಳಿಗೆ ಪತ್ರ ಕಳಿಸಿದ್ದಾರೆ. ಖಂಡ್ರೆಯವರು ಅಧಿಕಾರಿಗಳ ಮೇಲೆ ನಡೆಸುತ್ತಿರುವ ದಬ್ಬಾಳಿಕೆ ಇದು. ಸರ್ಕಾರದಲ್ಲಿ ಯಾವುದೇ ನೇಮಕಾತಿಗಳು ಪಾರದರ್ಶಕ ಮತ್ತು ನ್ಯಾಯಯುತವಾಗಿ ನಡೆಯಬೇಕು. ನಿಯಮಾವಳಿ ಹಾಗೂ ಅರ್ಹತೆ ಮೇಲೆ ಆಯ್ಕೆ ಆಯಾ ಹುದ್ದೆಗಳಿಗೆ ನೇಮಕ ಮಾಡುವುದು ಸರ್ಕಾರದ ನಿಯಮ. ಆದರೆ, ಒಬ್ಬ ಉಸ್ತುವಾರಿ ಸಚಿವರಾಗಿ ಬಡವರಿಗೆ ಮತು ನಿಜವಾದ ಅರ್ಹರಿಗೆ ನ್ಯಾಯ ಕೊಡಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ತಮ್ಮದೆ ಆದ ಒಂದು ಸ್ವತಂತ್ರ ನಿಯಮವನ್ನು ರೂಪಿಸಿ ತಾವು ಹೇಳಿದಂತೆ ನಡೆಯಬೇಕೆಂಬುದು ಅವರ ಪತ್ರದ ಸಾರಾಂಶವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಭ್ರಷ್ಟಾಚಾರದ ಮೂಲಕ ತಾವು ಹೇಳಿದವರನ್ನೆ ನೇಮಕ ಮಾಡಿ ಎನ್ನುವ ಭಯದ ವಾತಾವರಣ ನಿರ್ಮಾಣ ಮಾಡಿ ಅಧಿಕಾರಿಗಳ ಮೂಲಕ ಹಣ ಸಂಗ್ರಹಿಸಲು ಸಂಚು ರೂಪಿಸುತ್ತಿರುವುದು ಕಂಡು ಬರುತ್ತಿದೆ. ಮುಖ್ಯಮಂತ್ರಿ ಸಂವಿಧಾನ, ಹಿಂದುಳಿದ ವರ್ಗದವರ ಬಗ್ಗೆ ಮಾತನಾಡುತ್ತಾರೆ. ಆದರೆ, ಸ್ವತಂತ್ರ ನಿಯಮವನ್ನು ರಚಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಖಂಡ್ರೆ ಬುಡಮೇಲೂ ಮಾಡಿದ್ದಾರೆ. ಇದು ತಾನಾಷಾಹಿ ಸಂಸ್ಕೃತಿ. ಖಂಡ್ರೆಯವರಿಗೆ ಸಂವಿಧಾನ ಹಾಗೂ ಆಡಳಿತ ಯಂತ್ರದ ಮೇಲೆ ನಂಬಿಕೆಯಿಲ್ಲ. ವಿಶೇಷವಾಗಿ ಸರ್ಕಾರಿ ನೌಕರರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಇಂತಹ ಪತ್ರ ಬರೆದು ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಸಂವಿಧಾನ ಬದ್ದ ಹಕ್ಕನ್ನು ಚಲಾಯಿಸಿ, ರಾಜ್ಯ ಸಚಿವ ಸಂಪುಟದಿಂದ ತಕ್ಷಣವೇ ಖಂಡ್ರೆ ಅವರನ್ನು ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.