ADVERTISEMENT

ಬೀದರ್‌ | 'ಸಿಪೆಟ್‌' ಕೇಂದ್ರ ಕಾಮಗಾರಿ ಸಂಬಂಧ ಎಂ.ಬಿ.ಪಾಟೀಲ್‌ ಭೇಟಿಯಾದ ಭಗವಂತ ಖೂಬಾ

​ಪ್ರಜಾವಾಣಿ ವಾರ್ತೆ
Published 12 ಜುಲೈ 2023, 12:58 IST
Last Updated 12 ಜುಲೈ 2023, 12:58 IST
ಎಂ.ಬಿ.ಪಾಟೀಲ್‌ ಭೇಟಿಯಾದ ಭಗವಂತ ಖೂಬಾ
ಎಂ.ಬಿ.ಪಾಟೀಲ್‌ ಭೇಟಿಯಾದ ಭಗವಂತ ಖೂಬಾ   

ಬೀದರ್‌: ಔರಾದ್‌ ತಾಲ್ಲೂಕಿನ ಬಲ್ಲೂರ (ಜೆ) ಗ್ರಾಮದ ಸಮೀಪ ‘ಸಿಪೆಟ್’ (ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ) ಕೇಂದ್ರದ ಕಟ್ಟಡ ಕಾಮಗಾರಿ ಸಂಬಂಧ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಬೆಂಗಳೂರಿನಲ್ಲಿ ಬುಧವಾರ ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರನ್ನು ಭೇಟಿಯಾಗಿ ಸಹಕಾರ ಕೋರಿದರು.

ಬೀದರ್‌ ಜಿಲ್ಲೆಯಲ್ಲಿ ಯಾವುದೇ ಬೃಹತ್‌ ಕೈಗಾರಿಕೆಗಳಿಲ್ಲ. ನಿರುದ್ಯೋಗ ದೂರ ಮಾಡಲು ಕೇಂದ್ರ ಸರ್ಕಾರವು ಜಿಲ್ಲೆಗೆ ಸಿಪೆಟ್‌ ಕೇಂದ್ರ ಮಂಜೂರಾತಿ ಮಾಡಿ ತನ್ನ ಪಾಲಿನ ಶೇ. 50ರಷ್ಟು ಅನುದಾನ ಕೂಡ ಬಿಡುಗಡೆಗೊಳಿಸಿದೆ. ಜಿಲ್ಲಾಡಳಿತವು ಕೇಂದ್ರದ ಕಟ್ಟಡ ಕಾಮಗಾರಿಗಾಗಿ ಬಲ್ಲೂರ (ಜೆ) ಗ್ರಾಮದ ಹತ್ತಿರ 10 ಎಕರೆ ಜಮೀನು ಮಂಜೂರು ಮಾಡಿದೆ. ಹೋದ ವರ್ಷ ಅದಕ್ಕೆ ಭೂಮಿ ಪೂಜೆಯೂ ಆಗಿದೆ. ರಾಜ್ಯ ಸರ್ಕಾರ ತನ್ನ ಪಾಲಿನ ಶೇ. 50ರಷ್ಟು ಅನುದಾನ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಬೀದರ್‌ ಜಿಲ್ಲೆಯೂ ಮೂರನೇ ಹಂತದ ನಗರವಾಗಿದೆ. ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳಿಲ್ಲದ ಕಾರಣ ಯುವಕರು ತೆಲಂಗಾಣ ಹಾಗೂ ಮಹಾರಾಷ್ಟ್ರದ ಕಡೆಗೆ ಮುಖ ಮಾಡುತ್ತಿದ್ದಾರೆ. ಕೈಗಾರಿಕೋದ್ಯಮಕ್ಕೆ ಅವಶ್ಯಕವಾಗಿರುವ ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ವಿಮಾನಯಾನ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಕೇಂದ್ರದಿಂದ ಅನುದಾನ ತಂದು ಜಿಲ್ಲೆಯಲ್ಲಿ ಮಾಡಿಸಿರುವೆ. ಹಿಂದಿನ ಸರ್ಕಾರದಲ್ಲಿ ಇನ್ವೆಸ್ಟ್ ಕರ್ನಾಟಕ ಬೆಂಗಳೂರು, ಹುಬ್ಬಳ್ಳಿ ಹಾಗೂ ಹೈದ್ರಾಬಾದ್‌ನಲ್ಲಿ ನಡೆದ ಬಂಡವಾಳ ಹೂಡಿಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವೆ. ಹೂಡಿಕೆಗೆ ಮನವಿ ಮಾಡಿಕೊಂಡಾಗ ಕೆಲವು ಕಂಪನಿಗಳು ಮುಂದೆ ಬಂದಿದ್ದವು. ಒಪ್ಪಂದ ಕೂಡ ಆಗಿತ್ತು. ಕೋವಿಡ್‌ನಿಂದಾಗಿ ಎಲ್ಲ ಪ್ರಕ್ರಿಯೆಗಳು ನಿಂತು ಹೋಗಿದ್ದವು. ಆ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ಕೊಡಬೇಕು ಎಂದು ಕೋರಿದರು. ಅದಕ್ಕೆ ಎಂ.ಬಿ. ಪಾಟೀಲರು ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಖುಬಾ ತಿಳಿಸಿದರು.

ADVERTISEMENT

ಶಾಸಕರಾದ ಶರಣು ಸಲಗರ, ಡಾ.ಶೈಲೇಂದ್ರ ಬೆಲ್ದಾಳೆ, ಡಾ. ಸಿದ್ದಲಿಂಗಪ್ಪ ಪಾಟೀಲ, ಎನ್.ಎಸ್.ಎಸ್.ಕೆ ಅಧ್ಯಕ್ಷ ಡಿ.ಕೆ.ಸಿದ್ರಾಮ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪದ್ಮಾಕರ ಪಾಟೀಲ, ಬಿಜೆಪಿ ಮುಖಂಡ ಬಸವರಾಜ ಆರ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.