ಭಾಲ್ಕಿ: ವಿದ್ಯಾರ್ಥಿಗಳು ತಮ್ಮ ಜ್ಞಾನದ ಹರಿವನ್ನು ಹೆಚ್ಚಿಸಿಕೊಂಡು ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ಗ್ರಂಥಾಲಯ ಸಹಕಾರಿಯಾಗಿವೆ ಎಂದು ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.
ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಚಿಣ್ಣರ ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಯಶಸ್ಸಿನಲ್ಲಿ ಗ್ರಂಥಾಲಯ ಹೆಚ್ಚಿನ ಪಾತ್ರ ವಹಿಸುತ್ತಿದೆ. ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಕಾಲಹರಣ ಮಾಡುವ ಬದಲು ಗ್ರಂಥ, ಕವನ, ನಾಟಕ, ಪುಸ್ತಕಗಳನ್ನು ಓದಿದರೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಮಾಜಿ ಸಚಿವ ಭೀಮಣ್ಣಾ ಖಂಡ್ರೆ ಮಾತನಾಡಿ, ಬಸವಲಿಂಗ ಪಟ್ಟದ್ದೇವರು ತಮ್ಮ ಇಚ್ಛಾಶಕ್ತಿ, ಅವಿರತ ಶ್ರಮದಿಂದ ಬಂಜರೂ ಭೂಮಿಯನ್ನು ಜ್ಞಾನದ ದೇವಾಲಯವನ್ನಾಗಿಸಿ ಶೈಕ್ಷಣಿಕ ಕ್ರಾಂತಿಗೈದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಸವರಾಜ ನರಗುಂದ ಪ್ರಾಸ್ತಾವಿಕ ಮಾತನಾಡಿ, ಮಕ್ಕಳ ಕಲ್ಯಾಣ, ಸಾಹಿತ್ಯ ಕಲ್ಯಾಣ, ಸಾಹಿತಿಗಳ ಕಲ್ಯಾಣ ಚಿಣ್ಣರ ಗ್ರಂಥಾಲಯದ ಉದ್ದೇಶವಾಗಿದ್ದು, ಈ ಗ್ರಂಥಾಲಯವನ್ನು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವ ಗ್ರಂಥಾಲಯವನ್ನಾಗಿ ರೂಪಿಸಲಾಗುವುದು ಎಂದರು.
ಸಾಹಿತಿ ಸುವರ್ಣ ಹುರೆಕಡ್ಲಿ ರಚಿಸಿದ ಮೇಘ ಮಂದಾರ ಕಾವ್ಯ ಸಂಕಲನವನ್ನು ಬಿಡುಗಡೆ ಗೊಳಿಸಲಾಯಿತು.
ಗುರುಬಸವ ಪಟ್ಟದ್ದೇವರು, ಮಹಾಲಿಂಗ ಸ್ವಾಮೀಜಿ, ಸಾಹಿತಿಗಳಾದ ಸೋಮಲಿಂಗ ಬೆಡರ್, ಅಶೋಕ ಬುಳ್ಳಾ, ಕಸಾಪ ಅಧ್ಯಕ್ಷ ಶಶಿಧರ ಕೋಸಂಬೆ, ಮಹೇಶ ಘಾಳೆ, ಪತ್ರಕರ್ತ ಸುರೇಶ ಕನಶೆಟ್ಟೆ ಇದ್ದರು.
ಆಡಳಿತಾಧಿಕಾರಿ ಮೋಹನರೆಡ್ಡಿ ಸ್ವಾಗತಿಸಿದರು. ಮುಖ್ಯಶಿಕ್ಷಕ ಲಕ್ಷ್ಮಣ ಮೇತ್ರೆ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.