ADVERTISEMENT

ಬೀದರ್‌ | ಅಪಾರ ಜನಸ್ತೋಮದ ನಡುವೆ ಭೀಮಣ್ಣ ಖಂಡ್ರೆ ಜನ್ಮ ಶತಮಾನೋತ್ಸವ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2023, 13:54 IST
Last Updated 2 ಡಿಸೆಂಬರ್ 2023, 13:54 IST
   

ಬೀದರ್‌: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಮಾಜಿ ಅಧ್ಯಕ್ಷರೂ ಆದ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಜನ್ಮ ಶತಮಾನೋತ್ಸವ ಸಮಾರಂಭ ಭಾಲ್ಕಿಯಲ್ಲಿ ಶನಿವಾರ ಅಪಾರ ಜನಸ್ತೋಮದ ನಡುವೆ ಜರುಗಿತು.

ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭೆ, ಭೀಮಣ್ಣ ಖಂಡ್ರೆ ಜನ್ಮ ಶತಮಾನೋತ್ಸವ ಸಮಿತಿ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸುತ್ತೂರು, ಶ್ರೀಶೈಲ, ಸಿದ್ದಗಂಗಾ, ಸಿರಿಗೆರೆ, ಕಾಗಿನೆಲೆ, ಕೂಡಲಸಂಗಮ, ಹರಿಹರ ಸೇರಿದಂತೆ ನಾಡಿನ ಪ್ರಮುಖ ಮಠಾಧೀಶರು, ರಾಜಕೀಯ ಪಕ್ಷಗಳ ಮುಖಂಡರು, ಮಾಜಿ ಮುಖ್ಯಮಂತ್ರಿಗಳು, ಹಾಲಿ ಹಾಗೂ ಮಾಜಿ ಶಾಸಕರು, ವೀರಶೈವ ಮಹಾಸಭೆಯ ಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ನಿಜಾಮರ ವಿರುದ್ಧ ಹೋರಾಟ, ಕರ್ನಾಟಕದ ಏಕೀಕರಣ, ಬಸವತತ್ವದ ಪ್ರಸಾರಕ್ಕಾಗಿ ಖಂಡ್ರೆಯವರು ಮಾಡಿದ ಕೆಲಸಗಳನ್ನು ಸ್ಮರಿಸಿ ಗುಣಗಾನ ಮಾಡಿದರು. 

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಯಕ್ರಮ ಉದ್ಘಾಟಿಸಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ‘ಲೋಕನಾಯಕ’ ಅಭಿನಂದನ ಗ್ರಂಥ ಬಿಡುಗಡೆಗೊಳಿಸಿದರು. ಮಹಾಸಭೆ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು. 

ADVERTISEMENT

‘ಭೀಮಣ್ಣ ಖಂಡ್ರೆ ಹಾಗೂ ನಮ್ಮ ನಡುವೆ ವೈಚಾರಿಕ ಮತಭೇದಗಳಿದ್ದವು. ಆದರೆ, ನಮ್ಮಿಬ್ಬರ ಕೊನೆಯ ಗುರಿ ಒಂದೇ ಆಗಿದೆ. ಅವರು ಕಾಂಗ್ರೆಸ್‌ ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಬಸವತತ್ವದ ಎಲ್ಲಾ ಪ್ರಸಾರಕರನ್ನು ಒಗ್ಗೂಡಿಸಿದ್ದಾರೆ. ಖಂಡ್ರೆ ಛಲವಾದಿ, ಹೋರಾಟಗಾರ. ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ’ ಎಂದು ಖರ್ಗೆ ಹೇಳಿದರು.

ಸಿದ್ದರಾಮಯ್ಯ ಮಾತನಾಡಿ, 'ಭೀಮಣ್ಣ ಖಂಡ್ರೆಯವರೊಬ್ಬ ಹುಟ್ಟು ಹೋರಾಟಗಾರರು. ಅವರ ಹೋರಾಟದಿಂದ ಗಡಿ ಜಿಲ್ಲೆ ಬೀದರ್‌ ಕರ್ನಾಟಕದಲ್ಲಿ ಉಳಿದಿದೆ. ವಚನ ಸಾಹಿತ್ಯದ ಪ್ರಸಾರಕ್ಕಾಗಿ ಖಂಡ್ರೆಯವರು ಸಾಕಷ್ಟು ಶ್ರಮಿಸಿದ್ದಾರೆ. ಸಾಮಾಜಿಕವಾಗಿಯೂ ಕೆಲಸ ಮಾಡಿದ್ದಾರೆ. ಯುವಜನರಿಗೆ ಅವರು ಸ್ಫೂರ್ತಿ" ಎಂದರು.

ಶಾಮನೂರು ಶಿವಶಂಕರಪ್ಪ ಮಾತನಾಡಿ, 'ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಎಂಬ ಸಂಸ್ಥೆಯೊಂದು ಇದೆ ಎಂದು ತೋರಿಸಿಕೊಟ್ಟವರು ಭೀಮಣ್ಣ ಖಂಡ್ರೆ" ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.