ADVERTISEMENT

ಬೀದರ್‌: 38 ಬೈಕ್‌ ಜಪ್ತಿ, 17 ಜನರ ಬಂಧನ

26 ಕಳ್ಳತನ ಪ್ರಕರಣ ಭೇದಿಸಿರುವ ಬೀದರ್‌ ಜಿಲ್ಲಾ ಪೊಲೀಸರು

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 12:58 IST
Last Updated 25 ಜುಲೈ 2024, 12:58 IST
ವಿವಿಧ ಕಳುವು ಪ್ರಕರಣಗಳಲ್ಲಿ ಜಪ್ತಿ ಮಾಡಿರುವ ಬೈಕ್‌, ಮೋಟಾರ್‌ಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ಅವರು ಬೀದರ್‌ನಲ್ಲಿ ಗುರುವಾರ ಪರಿಶೀಲಿಸಿದರು
–ಪ್ರಜಾವಾಣಿ ಚಿತ್ರ
ವಿವಿಧ ಕಳುವು ಪ್ರಕರಣಗಳಲ್ಲಿ ಜಪ್ತಿ ಮಾಡಿರುವ ಬೈಕ್‌, ಮೋಟಾರ್‌ಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ಅವರು ಬೀದರ್‌ನಲ್ಲಿ ಗುರುವಾರ ಪರಿಶೀಲಿಸಿದರು –ಪ್ರಜಾವಾಣಿ ಚಿತ್ರ   

ಬೀದರ್‌: ಬೀದರ್‌ ಜಿಲ್ಲಾ ಪೊಲೀಸರು ಒಟ್ಟು 26 ಕಳ್ಳತನದ ಪ್ರಕರಣಗಳನ್ನು ಭೇದಿಸಿ 38 ದ್ವಿಚಕ್ರ ವಾಹನ, ಒಂದು ಕೆ.ಜಿ ಗಾಂಜಾ, 2,500 ಕೆ.ಜಿ ಪಡಿತರ ಅಕ್ಕಿ, ಗೂಡ್ಸ್‌ ವಾಹನ ಸೇರಿದಂತೆ ಒಟ್ಟು ₹38.29 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. 17 ಜನರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬೇಮಳಖೇಡಾ ಪೊಲೀಸ್‌ ಠಾಣೆಯಲ್ಲಿ ₹9.40 ಲಕ್ಷ ಮೌಲ್ಯದ 11 ಬೈಕ್‌ಗಳನ್ನು ಜಪ್ತಿ ಮಾಡಿ ಮೂವರನ್ನು ಬಂಧಿಸಿದ್ದಾರೆ. ಭಾಲ್ಕಿ ಗ್ರಾಮೀಣ ಪೊಲೀಸರು ₹4.68 ಲಕ್ಷ ಮೌಲ್ಯದ 11 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿ ಒಬ್ಬನ ಬಂಧಿಸಿದ್ದಾರೆ. ಇದೇ ಠಾಣೆ ಪೊಲೀಸರು ₹1.84 ಲಕ್ಷ ಬೆಲೆಬಾಳುವ ವಿವಿಧ ಕಂಪನಿಯ 11 ನೀರಿನ ಮೋಟಾರ್‌ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಮನ್ನಾಏಖೇಳ್ಳಿ ಠಾಣೆ ವ್ಯಾಪ್ತಿಯಲ್ಲಿ ಕಳುವಾಗಿದ್ದ ₹9 ಲಕ್ಷ ಮೌಲ್ಯದ 9 ದ್ವಿಚಕ್ರ ವಾಹನಗಳನ್ನು ಪತ್ತೆ ಮಾಡಿ ವ್ಯಕ್ತಿಯೊಬ್ಬನನ್ನು ದಸ್ತಗಿರಿ ಮಾಡಿದ್ದಾರೆ. ಜನವಾಡ ಪೊಲೀಸ್‌ ಠಾಣೆಯವರು ಮೂವರನ್ನು ಬಂಧಿಸಿ, ಅವರಿಂದ ₹3.85 ಲಕ್ಷ ಮೌಲ್ಯದ 2,500 ಕೆ.ಜಿ ಪಡಿತರ ಅಕ್ಕಿ, ಮಹೀಂದ್ರಾ ಗೂಡ್ಸ್‌ ವಾಹನ ಜಪ್ತಿ ಮಾಡಿದ್ದಾರೆ.

ADVERTISEMENT

ಭಾಲ್ಕಿ ನಗರ ಠಾಣೆ ಪೊಲೀಸರು ₹1.05 ಲಕ್ಷ ಮೌಲ್ಯದ ಮೂರು ಬೈಕ್‌ಗಳನ್ನು ಜಪ್ತಿ ಮಾಡಿ ಒಬ್ಬನನ್ನು ಬಂಧಿಸಿದ್ದಾರೆ. ಬಸವಕಲ್ಯಾಣ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ₹1.60 ಲಕ್ಷ ಮೌಲ್ಯದ 1 ಕೆ.ಜಿ ಗಾಂಜಾ, ಕೃತ್ಯಕ್ಕೆ ಬಳಸಿದ ಕಪ್ಪು ಬಣ್ಣದ ಸ್ಕೂಟಿ ಜಪ್ತಿ ಮಾಡಿ, ಇಬ್ಬರನ್ನು ಬಂಧಿಸಿದ್ದಾರೆ. ಇದೇ ಠಾಣೆ ಪೊಲೀಸರು ಇನ್ನಿಬ್ಬರನ್ನು ಬಂಧಿಸಿ, ₹3.60 ಲಕ್ಷ ಬೆಲೆಬಾಳುವ ಮೂರು ಪಲ್ಸರ್‌ ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.

ಹುಮನಾಬಾದ್‌ ಠಾಣೆ ಪೊಲೀಸರು ₹3.27 ಲಕ್ಷ ಸಿಗರೇಟ್‌ ಜಪ್ತಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ. ಈ ಪೈಕಿ ಒಬ್ಬ ಆರೋಪಿ ರಾಜಸ್ತಾನದವನು. ನೆರೆಯ ತೆಲಂಗಾಣದ ಜಹೀರಾಬಾದ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ನಾಲ್ಕು ಸ್ವತ್ತಿನ ಕಳವು ಪ್ರಕರಣಗಳನ್ನು ಕೂಡ ಭೇದಿಸಿದ್ದಾರೆ.

‘ಬೈಕ್‌ ಕಳುವು ಪ್ರಕರಣಗಳಲ್ಲಿ ಕೆಲವರು ಅಂತರರಾಜ್ಯ ಕಳ್ಳರು ಕೂಡ ಇದ್ದಾರೆ. ಎಲ್ಲರೂ 18ರಿಂದ 30 ವರ್ಷ ವಯಸ್ಸಿನೊಳಗಿನವರು ಸೇರಿದ್ದಾರೆ. ಕೆಲವರು ಬೈಕ್‌ ಕಳುವು ಮಾಡುವುದನ್ನು ಚಾಳಿ ಮಾಡಿಕೊಂಡಿದ್ದು, ಅಂತಹವರನ್ನು ಗುರುತಿಸಿ, ಅವರನ್ನು ಗಡೀಪಾರು ಮಾಡಲಾಗುವುದು. ಜಾಮೀನು ಪಡೆದು ಹೊರಗೆ ಇರುವವರ ಚಲನವಲನದ ಮೇಲೆ ನಿಗಾ ಇಡಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ಅವರು ನಗರದ ಪೊಲೀಸ್‌ ಹೆಡ್‌ ಕ್ವಾರ್ಟರ್ಸ್‌ನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

‘ಓಮಿನಿ, ಆಟೊಗಳಲ್ಲಿ ನಿಗದಿಗಿಂತ ಹೆಚ್ಚಿಗೆ ಶಾಲಾ ಮಕ್ಕಳನ್ನು ಕೊಂಡೊಯ್ಯುವುದು ನಿಯಮಕ್ಕೆ ವಿರುದ್ಧವಾದುದು. ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ, ಡಿವೈಎಸ್ಪಿಗಳಾದ ಶಿವನಗೌಡ ಪಾಟೀಲ, ಶಿವಾನಂದ ಪವಾಡಶೆಟ್ಟಿ, ಜೆ.ಎಸ್.ನ್ಯಾಮಗೌಡರ್ ಹಾಜರಿದ್ದರು.

ಜಪ್ತಿ ಮಾಡಿದ ಸ್ವತ್ತಿನ ವಿವರ

* ₹38.29 ಲಕ್ಷ ಒಟ್ಟು ಸ್ವತ್ತು

* 38 ದ್ವಿಚಕ್ರ ವಾಹನಗಳು ಪತ್ತೆ

* ಒಂದು ಕೆ.ಜಿ ಗಾಂಜಾ

* ₹3.27 ಲಕ್ಷ ಮೌಲ್ಯದ ಸಿಗರೇಟ್‌

* 11 ವಿವಿಧ ಕಂಪನಿಯ ನೀರಿನ ಮೋಟಾರ್‌ಗಳು

* 2500 ಕೆ.ಜಿ ಪಡಿತರ ಅಕ್ಕಿ ಮಹೀಂದ್ರಾ ಗೂಡ್ಸ್‌ ವಾಹನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.