ADVERTISEMENT

ಬೀದರ್‌‌ | ಕಾಸು ತಂದ ಚೆಂಡು ಹೂವು: ಮಿಶ್ರ ಬೇಸಾಯದಿಂದ ಲಾಭ ಗಳಿಸಿದ ಶೇಕ್ ಮುಸ್ತಫಾ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 4:34 IST
Last Updated 27 ಅಕ್ಟೋಬರ್ 2024, 4:34 IST
ಚೆಂಡು ಹೂವು ಬೆಳೆದಿರುವ ಕಮಲನಗರ ತಾಲ್ಲೂಕಿನ ಸಾವಳಗಿ ಗ್ರಾಮದ ರೈತ ಶೇಕ್ ಮುಸ್ತಫಾ 
ಚೆಂಡು ಹೂವು ಬೆಳೆದಿರುವ ಕಮಲನಗರ ತಾಲ್ಲೂಕಿನ ಸಾವಳಗಿ ಗ್ರಾಮದ ರೈತ ಶೇಕ್ ಮುಸ್ತಫಾ    

ಕಮಲನಗರ: ತಾಲ್ಲೂಕಿನ ಸಾವಳಗಿ ಗ್ರಾಮದ ರೈತ ಶೇಕ್ ಮುಸ್ತಫಾ ಹಾಗೂ ಅವರ ಪತ್ನಿ ನಜ್ಮಾಬೀ ಮೊಗದಲ್ಲಿ ಚೆಂಡು ಹೂವು ದೀಪಾವಳಿಯ ಬೆಳಕು ಮೂಡಿಸಿದೆ.

ಆರು ಎಕರೆ ಜಮೀನು ಹೊಂದಿರುವ ದಂಪತಿ ಜಮೀನಿನಲ್ಲಿ ಎರಡು ಕೊಳವೆ ಬಾವಿ ಕೊರೆಯಿಸಿದ್ದಾರೆ. ಅದರಲ್ಲಿ ಎರಡು ಎಕರೆ ಹನಿ ನೀರಾವರಿ ಮಾಡಿದ್ದು, ಪ್ರತಿ ವರ್ಷ ಖರ್ಚೆಲ್ಲಾ ಕನಿಷ್ಠ ₹9 ಲಕ್ಷದಿಂದ ₹10 ಲಕ್ಷದವರೆಗೆ ಆದಾಯ ಪಡೆಯುತ್ತಿರುವುದಾಗಿ ರೈತ ಶೇಕ್ ಮುಸ್ತಫಾ ಹೇಳುತ್ತಾರೆ.

‘ಒಂದು ಎಕರೆಯಲ್ಲಿ ಕಲ್ಲಂಗಡಿ ಬೆಳೆಸಿದ್ದೇನೆ. ₹3.50ಪೈಸೆಗೆ ಒಂದರಂತೆ 800 ಸಸಿಗಳನ್ನು ಭಾಲ್ಕಿ ತಾಲ್ಲೂಕಿನ ಕುಂಟೆ ಸಿರ್ಸಿ ಗ್ರಾಮದಿಂದ ತಂದು ನಾಟಿ ಮಾಡಿದ್ದೆವೆ. ಮೂರು ತಿಂಗಳಿಗೆ ಬರುವ ಈ ಕಲ್ಲಂಗಡಿಗೆ ಬೇಸಿಗೆಯಲ್ಲಿ ಬಹಳ ಬೇಡಿಕೆ ಇತ್ತು. ಹಾಗಾಗಿ ನಾವು ಮೂರು ತಿಂಗಳಿಗೆ ಎಲ್ಲಾ ಖರ್ಚು ವೆಚ್ಚ ತೆಗೆದು ₹2.50 ಲಕ್ಷ ವ್ಯಾಪಾರ ಮಾಡಿದ್ದೆವೆ. ಅದರಲ್ಲಿ ಎರಡು ಲಕ್ಷ ಲಾಭ ಬಂದಿತ್ತು. ಇದರ ನಡುವೆ ಬೆಂಡೆಕಾಯಿ, ಹೀರೆಕಾಯಿ, ಮೆಂತೆ, ಈರುಳ್ಳಿ, ಸೌತೇಕಾಯಿ, ಮೆಣಸಿನಕಾಯಿ, ನಿಂಬೆ ಹಣ್ಣು, ಕರಿಬೇವು, ನುಗ್ಗೆ ಮರ ಹೀಗೆ ಹಲವು ಬಗೆಯ ತರಕಾರಿ ಬೆಳೆದಿದ್ದರಿಂದ, ವ್ಯಾಪಾರ ಚೆನ್ನಾಗಿ ಆಗಿದೆ ಎನ್ನುತ್ತಾರೆ ಶೇಕ್ ಮುಸ್ತಫಾ.

ADVERTISEMENT

‘ಈಗ ಮೂರು ತಿಂಗಳಾಯಿತು. ಚೆಂಡು ಹೂವಿನ ಸಸಿಗಳು ಹಚ್ಚಿದ್ದೇವೆ. ಸುಮಾರು 8000 ಸಸಿಗಳನ್ನು ತಂದು ಹಚ್ಚಿದ್ದೆವೆ. ಈಗಾಗಲೆ ವಿಜಯ ದಶಮಿ ಹಬ್ಬದಲ್ಲಿ ₹1.75 ಲಕ್ಷ ಮೊತ್ತದ ಹೂವು ಮಾರಿದ್ದೇವೆ. ಇನ್ನು ದೀಪಾವಳಿ ಹಬ್ಬದಲ್ಲಿ ಕನಿಷ್ಟ ₹2 ಲಕ್ಷದ ಹೂವು ಮಾರಾಟ ಮಾಡುತ್ತೆವೆ’ ಎನ್ನುತ್ತಾರೆ ದಂಪತಿ.

ನಾವು ಹೂವು, ತರಕಾರಿ, ಕಲ್ಲಂಗಡಿಯನ್ನು  ಹೈದರಾಬಾದ್ ಮಾರುಕಟ್ಟೆಗೆ ಕಳಿಸುತ್ತೇವೆ. ಜತೆಗೆ ಹೊಲದಲ್ಲಿ ಹುಲ್ಲು ಇದ್ದುದರಿಂದ ಮುರ್‍ರಾ ತಳಿಯ ಎರಡು ಎಮ್ಮೆ ಸಾಕಿದ್ದೇವೆ. ಅವುಗಳು ಬೆಳಿಗ್ಗೆ 8 ಲೀಟರ್ ಹಾಗೂ ರಾತ್ರಿ 8 ಲೀಟರ್ ಹಾಲು ಕೊಡುತ್ತವೆ. ಅದರಲ್ಲಿ 7 ಲೀಟರ್ ಹಾಲನ್ನು ಪ್ರತಿ ಒಂದು ಲೀಟರ್‌ಗೆ ₹70 ರಂತೆ ಡೈರಿಗೆ ಕೊಡುತ್ತೇವೆ. ಅದರಿಂದ ಪ್ರತಿ ತಿಂಗಳಿಗೆ ₹21 ಸಾವಿರ ಬರುತ್ತಿದೆ ಎಂದು ಶೇಕ್ ಮುಸ್ತಫಾ  ಪತ್ನಿ ನಜ್ಮಾಬೀ ಹೇಳುತ್ತಾರೆ. 

ಚೆಂಡು ಹೂವು ಬೆಳೆದಿರುವ ಕಮಲನಗರ ತಾಲ್ಲೂಕಿನ ಸಾವಳಗಿ ಗ್ರಾಮದ ರೈತ ಶೇಕ್ ಮುಸ್ತಫಾ 
ರೈತ ಶೇಕ್‌ ಮುಸ್ತಫಾ ರಸಗೊಬ್ಬರ ಕ್ರಿಮಿನಾಶಕ ಔಷಧದ ಬಗ್ಗೆ ತಿಳಿದಿದ್ದರೆ ಇನ್ನೂ ಹೆಚ್ಚು ಉತ್ಪಾದನೆ ಆಗುವ ನಿರೀಕ್ಷೆ ಇತ್ತು
ಲಕ್ಷ್ಮಿ ಪಾಟೀಲ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ
ಭೂಮಿ ತಾಯಿ ಯಾವತ್ತೂ ರೈತರ ಕೈಬಿಡುವುದಿಲ್ಲ. ಆದರೆ ಭಕ್ತಿಯಿಂದ ಕೆಲಸ ಮಾಡಬೇಕು. ಮುಸ್ತಫಾ ದಂಪತಿಯಂತೆ ಬೇರೆ ರೈತರಿಗೆ ಮಾದರಿ ಆಗಿದ್ದಾರೆ
ದೀಲಿಪ ಎನ್. ಮುಧಾಳೆ ಸ್ಥಳೀಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.