ADVERTISEMENT

ರೇಕುಳಗಿ: ಬುದ್ಧ ಅನುಯಾಯಿಗಳ ಪವಿತ್ರ ತಾಣ ರೇಕುಳಗಿ ಮೌಂಟ್ ಬುದ್ಧ ವಿಹಾರ

ಕಣ್ಮನ ಸೆಳೆಯುವ ಗೌತಮ ಬುದ್ಧರ ಪಂಚಧಾತು ಪ್ರತಿಮೆ, ಬೋಧಿ ವೃಕ್ಷ

ನಾಗೇಶ ಪ್ರಭಾ
Published 10 ಅಕ್ಟೋಬರ್ 2024, 4:58 IST
Last Updated 10 ಅಕ್ಟೋಬರ್ 2024, 4:58 IST
ಬೀದರ್ ತಾಲ್ಲೂಕಿನ ರೇಕುಳಗಿ ಮೌಂಟ್‍ನಲ್ಲಿ ಇರುವ ಅನಾಥ ಪಿಂಡಕ ಬುದ್ಧ ವಿಹಾರ
ಬೀದರ್ ತಾಲ್ಲೂಕಿನ ರೇಕುಳಗಿ ಮೌಂಟ್‍ನಲ್ಲಿ ಇರುವ ಅನಾಥ ಪಿಂಡಕ ಬುದ್ಧ ವಿಹಾರ   

ರೇಕುಳಗಿ(ಜನವಾಡ): ಬೀದರ್ ತಾಲ್ಲೂಕಿನ ರೇಕುಳಗಿ ಮೌಂಟ್‍ನಲ್ಲಿ ಇರುವ ಅನಾಥ ಪಿಂಡಕ ಬುದ್ಧ ವಿಹಾರ ಬುದ್ಧ ಅನುಯಾಯಿಗಳ ಪವಿತ್ರ ತಾಣವಾಗಿದೆ.

ಹಸಿರು ಸಿರಿಯ ಬೆಟ್ಟದ ಮೇಲೆ ಇರುವ ಕಾರಣಕ್ಕೆ ‘ರೇಕುಳಗಿ ಮೌಂಟ್ ಬುದ್ಧ ವಿಹಾರ’ ಎಂದೇ ಪ್ರಸಿದ್ಧಿ ಪಡೆದಿದೆ.
ನಿತ್ಯ ವಿವಿಧೆಡೆಯ ನೂರಾರು ಬುದ್ಧ ಅನುಯಾಯಿಗಳು ಹಾಗೂ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರಶಾಂತ ವಾತಾವರಣದಲ್ಲಿ ಕೆಲ ಹೊತ್ತು ನೆಮ್ಮದಿಯಿಂದ ಕಳೆಯುತ್ತಾರೆ.

ಗೌತಮ ಬುದ್ಧರ ನಯನ ಮನೋಹರ ಪ್ರತಿಮೆ ಇಲ್ಲಿಯ ಪ್ರಮುಖ ಆಕರ್ಷಣೆಯಾಗಿದೆ. 5.5 ಅಡಿ ಎತ್ತರ ಹಾಗೂ 3 ಕ್ವಿಂಟಲ್ ತೂಕದ ಪಂಚಧಾತುವಿನ ಪ್ರತಿಮೆಯನ್ನು ಥೈಲ್ಯಾಂಡ್‍ನ ಪಾವುಲ್ ಶಿಲ್ಪಾ ಕೊಡುಗೆಯಾಗಿ ನೀಡಿದ್ದಾರೆ. ವಿಹಾರದ ಸ್ಥಾಪಕ ಭಿಕ್ಕು ಮಹಾ ಕಶ್ಯಪ್ ಮಹಾಥೆರೋ ಅವರ ಸ್ತೂಪ ಇನ್ನೊಂದು ವಿಶೇಷವಾಗಿದೆ.

ADVERTISEMENT

ಬೋಧಿ ವೃಕ್ಷ, ಧ್ಯಾನ ಮಂದಿರ ಇಲ್ಲಿವೆ. ಮೇಲಿಂದ ಮೇಲೆ ವಿವಿಧ ಧಾರ್ಮಿಕ ಕಾರ್ಯಕ್ರಮ, ಧ್ಯಾನ ಶಿಬಿರ ನಡೆಯುತ್ತಿರುತ್ತವೆ. 1988ರಲ್ಲಿ ಭಿಕ್ಕು ಮಹಾ ಕಶ್ಯಪ್ ಮಹಾಥೆರೋ ಅವರು ಸ್ಥಾಪಿಸಿದ ಬುದ್ಧ ವಿಹಾರ ಈಗ ಮಾದರಿ ವಿಹಾರಗಳಲ್ಲಿ ಒಂದಾಗಿದೆ. ಪ್ರವಾಸಿ ತಾಣಗಳಲ್ಲಿ ಗುರುತಿಸಿಕೊಂಡಿದೆ. ಎರಡನೇ ನಾಗಪುರ ಎಂತಲೂ ಭಕ್ತರಿಂದ ಕರೆಯಿಸಿಕೊಳ್ಳುತ್ತಿದೆ ಎಂದು ವಿಹಾರದ ಭಿಕ್ಕು ರೇವತ್ ತಿಳಿಸಿದರು.

ನಿತ್ಯ ಬೆಳಿಗ್ಗೆ, ಸಂಜೆ ಪ್ರಾರ್ಥನೆ, ಹುಣ್ಣಿಮೆ ದಿನ ವಿಶೇಷ ಪ್ರಾರ್ಥನೆ ಮೊದಲಾದ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಹೇಳಿದರು.

‘ಸಾಮ್ರಾಟ್ ಅಶೋಕ್ ಕಳಿಂಗ ಯುದ್ಧದಲ್ಲಿ ಉಂಟಾದ ಅಪಾರ ಸಾವು, ನೋವುಗಳಿಂದ ದುಃಖಿತನಾಗಿ ಗೌತಮ ಬುದ್ಧರ ಶಾಂತಿಯ ಮಾರ್ಗ ಅನುಸರಿಸಿದ್ದರು. 1956ರ ಅಕ್ಟೋಬರ್ 14 ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಅಪಾರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದ್ದರು. ಈ ಸ್ಮರಣಾರ್ಥ ಬುದ್ಧ ವಿಹಾರದಲ್ಲಿ ಪ್ರತಿ ವರ್ಷ ಅಶೋಕ ವಿಜಯದಶಮಿ ಹಾಗೂ ಧಮ್ಮ ಚಕ್ರ ಪರಿವರ್ತನ ದಿನ ಆಚರಿಸಲಾಗುತ್ತದೆ’ ಎಂದು ಭಿಕ್ಕು ಧರ್ಮಪಾಲ್ ತಿಳಿಸಿದರು.

ಅನಾಥ ಪಿಂಡಕ ಬುದ್ಧ ವಿಹಾರದಲ್ಲಿ ಇರುವ ಗೌತಮ ಬುದ್ಧರ ಪಂಚಧಾತುವಿನ ಸುಂದರ ಪ್ರತಿಮೆ
ಅನಾಥ ಪಿಂಡಕ ಬುದ್ಧ ವಿಹಾರದಲ್ಲಿನ ಬೋಧಿ ವೃಕ್ಷ
25 ಎಕರೆ ಪ್ರದೇಶದಲ್ಲಿ ವಿಹಾರ ನಿತ್ಯ ಭಕ್ತರು, ಪ್ರವಾಸಿಗರ ಭೇಟಿ ಭಕ್ತರ ಧ್ಯಾನಕ್ಕೆ ಧ್ಯಾನ ಮಂದಿರ
ವಿಶಾಲ ಪ್ರದೇಶದಲ್ಲಿ ಇರುವ ಬುದ್ಧ ವಿಹಾರದಲ್ಲಿ ಜನಪ್ರತಿನಿಧಿಗಳು ಹಾಗೂ ಭಕ್ತರ ಸಹಕಾರದಿಂದ ಅನೇಕ ಅಭಿವೃದ್ಧಿ ಕೆಲಸಗಳು ಆಗಿವೆ
ಭಂತೆ ರೇವತ್ ಬುದ್ಧ ವಚನ ಧಾರ್ಮಿಕ ಅಧ್ಯಯನ ಕೇಂದ್ರದ ಅಧ್ಯಕ್ಷ
ಬುದ್ಧ ವಿಹಾರದಲ್ಲಿ ಅಕ್ಟೋಬರ್ 12 ರಂದು ನಡೆಯಲಿರುವ ಅಶೋಕ ವಿಜಯದಶಮಿ ಹಾಗೂ ಧಮ್ಮ ಚಕ್ರ ಪರಿವರ್ತನ ದಿನಾಚರಣೆಗೆ ಭರದ ಸಿದ್ಧತೆಗಳು ನಡೆದಿವೆ.
ಭಂತೆ ಧರ್ಮಪಾಲ್ ಬುದ್ಧ ವಚನ ಧಾರ್ಮಿಕ ಅಧ್ಯಯನ ಕೇಂದ್ರದ ಉಪಾಧ್ಯಕ್ಷ

12 ರಂದು ಅಶೋಕ ವಿಜಯದಶಮಿ

ಅನಾಥ ಪಿಂಡಕ ಬುದ್ಧ ವಿಹಾರದಲ್ಲಿ ಅಕ್ಟೋಬರ್ 12 ರಂದು ಅಶೋಕ ವಿಜಯದಶಮಿ ಹಾಗೂ ಧಮ್ಮ ಚಕ್ರ ಪರಿವರ್ತನ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ಭಿಕ್ಕು ಸಂಘದ ವತಿಯಿಂದ ಅಂದು ಬೆಳಿಗ್ಗೆ 6ಕ್ಕೆ ಬುದ್ಧ ಪೂಜೆ ಬೆಳಿಗ್ಗೆ 7ಕ್ಕೆ ಧಮ್ಮ ಧ್ವಜಾರೋಹಣ ಜರುಗಲಿದೆ. ಮಧ್ಯಾಹ್ನ 12ಕ್ಕೆ ನಡೆಯುವ ಸಾಮೂಹಿಕ ಬುದ್ಧ ವಂದನೆ ಹಾಗೂ ಪ್ರವಚನ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಮುಳವಾದ ಭಿಕ್ಕು ಖೇಮ ಧಮ್ಮೋ ಮಹಾಥೆರೋ ಜಾಲ್ನಾದ ಭಿಕ್ಕು ಧಮ್ಮಧರ ಲಾತೂರಿನ ಭಿಕ್ಕು ಪಯ್ಯಾನಂದ ಬಸವಕಲ್ಯಾಣದ ಹತ್ಯಾಳದ ಭಿಕ್ಕು ಧಮ್ಮನಾಗ ಹೈದರಾಬಾದ್‍ನ ಮಹಾಬೋಧಿ ಬುದ್ಧ ವಿಹಾರದ ಭಿಕ್ಕು ಬುದ್ಧಪಾಲ್ ಬರ್ಮಾದ ಭಿಕ್ಕು ಆಯುಪಾಲ್ ತ್ರಿಪುರಾದ ಭಿಕ್ಕು ಸಂಘತಿಲೋಕ ಚುನಾಯಿತ ಪ್ರತಿನಿಧಿಗಳು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಬುದ್ಧ ವಿಹಾರದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.