ADVERTISEMENT

ಬೀದರ್ | 'ಬುಡಾ' ಮಾಜಿ ಅಧ್ಯಕ್ಷ, ಆಯುಕ್ತರಿಗೆ ಬಂಧನದ ಭೀತಿ

‘ಬುಡಾ’ದಲ್ಲಿ ನಿಯಮ ಉಲ್ಲಂಘಿಸಿ ಆರ್ಥಿಕ ನಷ್ಟ ಉಂಟು ಮಾಡಿದ ಪ್ರಕರಣ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 26 ಜುಲೈ 2024, 0:23 IST
Last Updated 26 ಜುಲೈ 2024, 0:23 IST
ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ
-ಸಾಂದರ್ಭಿಕ ಚಿತ್ರ
ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ -ಸಾಂದರ್ಭಿಕ ಚಿತ್ರ   

ಬೀದರ್‌: ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಬುಡಾ) ನಿಯಮಗಳನ್ನು ಉಲ್ಲಂಘಿಸಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಡಾ ಮಾಜಿ ಅಧ್ಯಕ್ಷ ಬಾಬುವಾಲಿ, ಹಿಂದಿನ ಆಯುಕ್ತ ಅಭಯ್‌ ಕುಮಾರ್‌ ಹಾಗೂ ಇತರೆ ಮೂವರ ವಿರುದ್ಧ ನಗರದ ನ್ಯೂಟೌನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧನದ ಭೀತಿ ಎದುರಾಗಿದೆ.

ಸರ್ಕಾರದ ಸೂಚನೆ ಅನ್ವಯ, ಬುಡಾ ಹಾಲಿ ಆಯುಕ್ತ ಶ್ರೀಕಾಂತ ಚಿಮಕೋಡೆ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಪತ್ರ ಬರೆದ ನಂತರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜುಲೈ 11ರಂದೇ ಆಯುಕ್ತರು ಎಸ್ಪಿಗೆ ಪತ್ರ ಬರೆದಿದ್ದಾರೆ. ಆದರೆ, ಜುಲೈ 24ರಂದು ಪ್ರಕರಣ ದಾಖಲಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ರಾಜಕೀಯ ಹಸ್ತಕ್ಷೇಪದಿಂದ ಪೊಲೀಸರು ವಿಳಂಬ ಮಾಡಿದ್ದಾರೆ. ಬಂಧನಕ್ಕೂ ಮುಂದಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

ಬುಡಾದಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಎರಡೂ ತನಿಖಾ ತಂಡಗಳು ವರದಿ ಸಲ್ಲಿಸಿ ಹಲವು ತಿಂಗಳಾಗಿವೆ. ಆದರೆ, ತ್ವರಿತ ಗತಿಯಲ್ಲಿ ಕ್ರಮಗಳಾಗುತ್ತಿಲ್ಲ. ಈ ಸಂಬಂಧ ದೂರುದಾರ, ವಿಧಾನ ಪರಿಷತ್‌ ಮಾಜಿ ಸದಸ್ಯ ಅರವಿಂದಕುಮಾರ ಅರಳಿ ಅವರು ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವ ತಮ್ಮದೇ ಸರ್ಕಾರದ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿದ್ದರು. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರಿಗೂ ಮನವಿ ಸಲ್ಲಿಸಿದ್ದರು. ಮುಖ್ಯಮಂತ್ರಿಯವರಿಗೂ ಮನವಿ ಸಲ್ಲಿಸುವುದಾಗಿ ತಿಳಿಸಿದ್ದರು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ADVERTISEMENT

2020ರ ನವೆಂಬರ್‌ 27ರಿಂದ 2023ರ ಮೇ 23ರ ಅವಧಿಯಲ್ಲಿ ನಿವೇಶನಗಳ ಹಂಚಿಕೆಯಲ್ಲಿ ‘ಬುಡಾ’ದಲ್ಲಿ ನಿಯಮಗಳನ್ನು ಅನುಸರಿಸಿಲ್ಲ. ಇದರಿಂದ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗಿದೆ ಎಂದು ಅರವಿಂದಕುಮಾರ ಅರಳಿ ಅವರು ನಗರಾಭಿವೃದ್ಧಿ ಇಲಾಖೆಗೆ ದೂರು ಸಲ್ಲಿಸಿದ್ದರು. ಅವರ ದೂರು ಆಧರಿಸಿ ಇಲಾಖೆಯು ಕಲಬುರಗಿ ವಿಭಾಗೀಯ ಕಚೇರಿಯ ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕ ಎ.ಎಸ್‌. ಕಾಂಬಳೆ, ಜಂಟಿ ನಿರ್ದೇಶಕಿ ಶಾಂತಲಾ ಎಂ.ಎಸ್‌. ಹಾಗೂ ಧಾರವಾಡ ವಲಯ ಕಚೇರಿಯ ನಗರ ಮತ್ತು ಗ್ರಾಮಾಂತರ ಯೋಜನಾ ಹೆಚ್ಚುವರಿ ನಿರ್ದೇಶಕ ವಿವೇಕ ಎನ್‌. ಕಾರೇಕರ್‌ ಅವರನ್ನು ಒಳಗೊಂಡ ಜಂಟಿ ಪರಿವೀಕ್ಷಣಾ ತಂಡ ರಚಿಸಿತ್ತು.

ಜಂಟಿ ಪರಿವೀಕ್ಷಣಾ ತಂಡದ ಮೂವರು ಅಧಿಕಾರಿಗಳ ತಂಡವು 2023ರ ಸೆಪ್ಟೆಂಬರ್‌ 13ರಿಂದ ಸೆಪ್ಟೆಂಬರ್‌ 15ರ ವರೆಗೆ ಬುಡಾದಲ್ಲಿ ದಾಖಲೆಗಳ ಪರಿಶೀಲನೆ ನಡೆಸಿ, ಲೇಔಟ್‌ಗಳಿಗೆ ಭೇಟಿ ನೀಡಿ ನಿವೇಶನಗಳನ್ನು ಪರಿಶೀಲಿಸಿ ವರದಿ ಸಲ್ಲಿಸಿತ್ತು. ನಿಯಮಗಳನ್ನು ಪಾಲಿಸದೆ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಿತ್ತು. ಅದರ ಪ್ರಕಾರ ಅಂದಿನ ಬುಡಾ ಆಯುಕ್ತ ಅಭಯ್‌ ಕುಮಾರ್‌ ಅವರನ್ನು ನಗರಾಭಿವೃದ್ಧಿ ಇಲಾಖೆಯು 2023ರ ಫೆ. 14ರಂದು ಸೇವೆಯಿಂದ ಅಮಾನತುಗೊಳಿಸಿತ್ತು. ಆದರೆ, ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳಲು ಏಕೆ ಹಿಂದೇಟು ಹಾಕಲಾಗುತ್ತಿದೆ ಎಂದು ದೂರುದಾರರು ಆಕ್ಷೇಪ ಎತ್ತಿದ್ದರು. ಪ್ರಕರಣ ಸಂಬಂಧ ಬಾಬುವಾಲಿ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

‘ಬುಡಾದಲ್ಲಿ ನಿಯಮ ಉಲ್ಲಂಘನೆ; ಸರ್ಕಾರಕ್ಕೆ ಆರ್ಥಿಕ ನಷ್ಟ’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ 2024ರ ಫೆಬ್ರುವರಿ 20ರಂದು ವರದಿ ಪ್ರಕಟಿಸಿತ್ತು.

‘ಪೊಲೀಸರು ದಿಕ್ಕು ತಪ್ಪಿಸುತ್ತಿದ್ದಾರೆ’

‘ಬುಡಾ ಅಕ್ರಮದ ಕುರಿತು ಹಾಲಿ ಬುಡಾ ಆಯುಕ್ತರು ಜುಲೈ 11ರಂದು ಪೊಲೀಸ್‌ ಠಾಣೆಗೆ ದೂರು ಕೊಟ್ಟಿದ್ದಾರೆ. ಆದರೆ ಪೊಲೀಸರು ಜು. 24ರಂದು ಪ್ರಕರಣ ದಾಖಲಿಸಿದ್ದಾರೆ. ಹಿಂದಿನ ಬುಡಾ ಅಧ್ಯಕ್ಷ ಆಯುಕ್ತರಲ್ಲದೇ ಇನ್ನಿತರೆ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಪ್ರಕರಣವನ್ನು ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ದೂರದಾರ ಹಾಗೂ ವಿಧಾನ ಪರಿಷತ್‌ ಮಾಜಿ ಸದಸ್ಯ ಅರವಿಂದಕುಮಾರ ಅರಳಿ ತಿಳಿಸಿದ್ದಾರೆ.

ರಾಜಕೀಯ ಒತ್ತಡ ಇಲ್ಲ–ಎಸ್ಪಿ

‘ಬುಡಾ ಮಾಜಿ ಅಧ್ಯಕ್ಷ ಆಯುಕ್ತರ ವಿರುದ್ಧ ಐಪಿಸಿ ಕಲಂ 409ರ ಅಡಿ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ. ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ. ಶೀಘ್ರ ಸಾಕ್ಷ್ಯಗಳನ್ನು ಸಂಗ್ರಹಿಸಿ ಕಾನೂನು ಕ್ರಮ ಜರುಗಿಸಲಾಗುವುದು. ಪ್ರಕರಣದ ತನಿಖೆಯಲ್ಲಿ ಯಾವುದೇ ರೀತಿಯ ರಾಜಕೀಯ ಒತ್ತಡ ಇಲ್ಲ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ಪ್ರತಿಕ್ರಿಯಿಸಿದ್ದಾರೆ.

ಏನೆಲ್ಲ ಉಲ್ಲಂಘನೆ?

* ಬೀದರ್‌ ನಗರದ ಸಿದ್ರಾಮಯ್ಯ ಬಡಾವಣೆಯಲ್ಲಿನ ಒಟ್ಟು 33ಎ–12 ಗುಂಟೆ ವಿಸ್ತೀರ್ಣದ ಜಮೀನಿನ ಪರಿಷ್ಕೃತ ವಿನ್ಯಾಸಕ್ಕೆ ಸರ್ಕಾರದಿಂದ ಅನುಮೋದನೆ ಪಡೆದಿಲ್ಲ. ನೌಬಾದ್‌ ಸರ್ವೇ ನಂಬರ್‌ 8ರ ಅನುಮೋದಿತ ವಿನ್ಯಾಸದ ನಕ್ಷೆ ಇಲ್ಲ.

* ಚಿದ್ರಿ ಗ್ರಾಮದ ಸರ್ವೇ ನಂಬರ್‌ 125ರ ಅಭಿವೃದ್ಧಿಯಾಗಿರುವ ವಸತಿ ಯೋಜನೆ ಪ್ರದೇಶವನ್ನು ಇಟಿಎಸ್‌ ಸರ್ವೇ ಕೈಗೊಂಡು ಸದರಿ ಸರ್ವೇಯಲ್ಲಿ ಉದ್ಯಾನವನ/ ಬಯಲು ಜಾಗೆ ಹಾಗೂ ನಾಗರಿಕ ಸೌಲಭ್ಯ ಪ್ರದೇಶಗಳ ವಿಸ್ತೀರ್ಣವು ನಿಯಮಾನುಸಾರ ಇಲ್ಲ. ಜಾಗ ಕೂಡ ಕಡಿಮೆಯಾಗಿದೆ. ಈ ಬಗ್ಗೆ ಪರಿಶೀಲಿಸದೆ ಸರ್ಕಾರದಿಂದ ಅನುಮೋದನೆ ಪಡೆಯದೆ ವಸತಿ ಉದ್ದೇಶಕ್ಕೆ ಕಾಯ್ದಿರಿಸಿದ ವಿಸ್ತೀರ್ಣದಲ್ಲಿ ಹೆಚ್ಚುವರಿಯಾಗಿ ದೊರೆತ ಪ್ರದೇಶದಲ್ಲಿ ಮಧ್ಯಂತರ ನಿವೇಶನಗಳನ್ನು ಗುರುತಿಸುವುದು ನಿಯಮಬಾಹಿರ.

* ಚಿದ್ರಿ ಗ್ರಾಮದ ಸರ್ವೇ ನಂಬರ್‌ 125ರ ಪರಿಷ್ಕೃತ ವಿನ್ಯಾಸ ಅನೆಕ್ಷರ್‌–4 ನಕ್ಷೆಯೊಂದಿಗೆ ಸ್ಥಳ ಪರಿಶೀಲಿಸಲಾಗಿ ನಕ್ಷೆಯಲ್ಲಿನ ರಸ್ತೆಗಳು ಹಾಗೂ ನಿವೇಶನಗಳ ಅಳತೆಗಳಿಗೂ ವ್ಯತ್ಯಾಸ ಇರುವುದು ಕಂಡು ಬಂದಿದೆ.

* ಬಿಡಿ ನಿವೇಶನಗಳನ್ನು ಹರಾಜು ಮಾಡುವಾಗ ಸರ್ಕಾರದ ಸುತ್ತೋಲೆ (ಶೇ 75–ಶೇ 25) ವರ್ಗವಾರು ಮೀಸಲಾತಿ ಪರಿಗಣಿಸಿಲ್ಲ.

* ಮೂಲೆ (ಕಾರ್ನರ್‌) ನಿವೇಶನ ದರಗಳನ್ನು ನಿಗದಿಪಡಿಸುವಾಗ ಆಯಾ ಪ್ರದೇಶದ ನಿವೇಶನಗಳ ದರಗಳ ಶೇ 10ರಷ್ಟು ಹೆಚ್ಚಿಗೆ ದರ ನಿಗದಿಪಡಿಸಿಲ್ಲ.

* ಒಟ್ಟು 11 ನಿವೇಶನಗಳಿಗೆ ‘ಸಿಂಗಲ್‌ ಬಿಡ್‌’ ಆಗಿದ್ದು ಹರಾಜಿನಲ್ಲಿ ಸ್ಪರ್ಧೆ ಆಗಿರುವುದಿಲ್ಲ. ಆಯುಕ್ತರು ಈ ಬಗ್ಗೆ ಅಧ್ಯಕ್ಷರಿಗೆ ಟಿಪ್ಪಣಿ ಮಂಡಿಸಿರುವುದು ಇದೆ. ಆದರೆ ಈ ಬಗ್ಗೆ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸದೆ ತೀರ್ಮಾನ ಕೈಗೊಳ್ಳಲಾಗಿದೆ.

* ನೌಬಾದ್‌ ಸರ್ವೇ ನಂಬರ್‌ 4ರಲ್ಲಿನ ನಿವೇಶನಗಳನ್ನು ಈಗಾಗಲೇ ಹಂಚಿಕೆ ಆಗಿರುವುದರಿಂದ ನಿಯಮಾನುಸಾರ ಹಂಚಿಕೆಯಾದವರ ಹಂಚಿಕೆಯನ್ನು ರದ್ದುಪಡಿಸದೆ ಪುನಃ ಹರಾಜಿಗೆ ಪರಿಗಣಿಸಲಾಗಿದೆ.

* ನೋಂದಣಿ ಶುಲ್ಕ ಪಾವತಿಸಿರುವ ಬ್ಯಾಂಕ್‌ ಚಲನ್‌ಗಳಲ್ಲಿ ಬೇರೆ ಬೇರೆ ಹೆಸರುಗಳಿವೆ. ಆದರೆ ಸಹಿ ಒಂದೇ ತರಹ ಇದೆ. ಖರೀದಿ ಪತ್ರದಲ್ಲಿ ಬೇರೆ ಸಹಿಗಳು ಇವೆ. ಸದರಿ ಚಲನ್‌ಗಳನ್ನು ಒಂದೇ ದಿನ ಪಾವತಿಸಲಾಗಿದೆ. ಈ ಪೈಕಿ ಎರಡು ಚಲನ್‌ಗಳನ್ನು ತಿದ್ದುಪಡಿ ಮಾಡಿ ಬೇರೆ ಹೆಸರು ಬರೆದಿರುವುದನ್ನು ಗಮನಿಸಿ ಬ್ಯಾಂಕಿನಿಂದ ಚಲನ್‌ಗಳನ್ನು ತರಿಸಿ ಪರಿಶೀಲಿಸಿದಾಗ ತಿದ್ದುಪಡಿ ಇಲ್ಲದೇ ಬೇರೆಯವರ ಹೆಸರಿಗೆ ಇರುವುದು ಗಮನಕ್ಕೆ ಬಂದಿದೆ.

* ಪ್ರಾಧಿಕಾರದಿಂದ ಇ–ಪ್ರೊಕ್ಯೂರ್‌ಮೆಂಟ್‌ ಮೂಲಕ ಹರಾಜು ಮಾಡಲು ಬೀದರ್‌ ನಗರದ ‘ಬೀದರ್‌ ಕ್ರಾಂತಿ’ ಹಾಗೂ ‘ಬೀದರ್‌ ಸಂದೇಶ’ ದಿನಪತ್ರಿಕೆಗಳಲ್ಲಿ 2022ರ ಮಾರ್ಚ್‌ 26 27ರ ಪ್ರಕಟಣೆಯಲ್ಲಿ ಕ್ರಮ ಸಂಖ್ಯೆ: 3 4ರಲ್ಲಿ ದಿನಾಂಕಗಳನ್ನು ತಪ್ಪಾಗಿ ನಮೂದಿಸಲಾಗಿದೆ. ಮಾರ್ಚ್‌ 26ರ ‘ಬೀದರ್‌ ಕ್ರಾಂತಿ’ ದಿನಪತ್ರಿಕೆಯ ಪುಟ ಸಂಖ್ಯೆ 4ರಲ್ಲಿ ಪ್ರಾಧಿಕಾರದ ಹರಾಜು ಪ್ರಕಟಣೆ ಇರುವುದಿಲ್ಲ. ಆದರೆ ಕಚೇರಿ ಕಡತದಲ್ಲಿರುವ ಇದೇ ದಿನಾಂಕದ ಇದೇ ಪತ್ರಿಕೆಯ ಪುಟ ಸಂಖ್ಯೆ: 4ರಲ್ಲಿ ಪ್ರಕಟಣೆ ಹೊರಡಿಸಿರುವ ಬಗ್ಗೆ ಮುದ್ರಿತ ಪ್ರತಿ ಇರುತ್ತದೆ.

* ಸಾಕಷ್ಟು ನ್ಯೂನತೆಗಳು ತನಿಖಾ ಸಂದರ್ಭದಲ್ಲಿ ಕಂಡು ಬಂದಿದೆ. ನಿಯಮಗಳನ್ನು ಅನುಸರಿಸಿಲ್ಲ. ಇದರಿಂದ ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಷ್ಟ ಉಂಟಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.