ADVERTISEMENT

ಮರೆಯಾಗುತ್ತಿರುವ ಗ್ರಾಮೀಣ ಆಟಗಳು

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 6:53 IST
Last Updated 30 ಜೂನ್ 2024, 6:53 IST
<div class="paragraphs"><p>ಚಿಟಗುಪ್ಪ ತಾಲ್ಲೂಕಿನ ಭವಾನಿ ನಗರದಲ್ಲಿ ಪುಟ್ಟ ಮಕ್ಕಳು ಗ್ರಾಮೀಣ ಆಟದಲ್ಲಿ ನಿರತರಾಗಿರುವುದು</p></div>

ಚಿಟಗುಪ್ಪ ತಾಲ್ಲೂಕಿನ ಭವಾನಿ ನಗರದಲ್ಲಿ ಪುಟ್ಟ ಮಕ್ಕಳು ಗ್ರಾಮೀಣ ಆಟದಲ್ಲಿ ನಿರತರಾಗಿರುವುದು

   

ಚಿಟಗುಪ್ಪ: ಅಧುನಿಕತೆ ಹಾಗೂ ತಂತ್ರಜ್ಞಾನ ಬೆಳೆದಂತೆ ಗ್ರಾಮೀಣ ದೇಶಿ ಆಟಗಳು ಒಂದೊಂದಾಗಿ ಕಣ್ಮರೆಯಾಗುತ್ತಿವೆ.

ದೇಶೀಯ ಆಟಗಳಾದ ಬುಗರಿ, ಚೆಂಡುದಾಂಡು, ಹಗ್ಗದಾಟ, ಗಿಲ್ಲಿದಾಂಡು, ಚಿನ್ನಿ ದಾಂಡು, ಲಗೋರಿ, ಸಾಲುಚೆಂಡು, ಹಗ್ಗ ಜಗ್ಗಾಟ, ಕುಂಟಬಿಲ್ಲೆ, ಕಪ್ಪೆ ಓಟ, ಮರಕೋತಿಯಂತಹ ಇತರ ಕ್ರೀಡೆಗಳು ನಮ್ಮ ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅಪ್ಪಟ ದೇಶೀಯ ಆಟಗಳು.

ADVERTISEMENT

ಕುಟುಂಬದ ಸದಸ್ಯರೆಲ್ಲರೂ ಒಟ್ಟುಗೂಡಿ ಆಟಗಳಲ್ಲಿ ಪಾಲ್ಗೊಳ್ಳುತ್ತಿದ್ದರಿಂದ ಕೌಟುಂಬಿಕ ಬಾಂಧವ್ಯ ಹಾಗೂ ಮಾನಸಿಕ ನೆಮ್ಮದಿ ನೀಡುತ್ತಿದ್ದವು. ಆದರೆ ದಿನದಿಂದ ದಿನಕ್ಕೆ ಆಟಗಳು ಮರೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇತಿಹಾಸದ ಪುಟ ಸೇರುವ ದಿನಗಳು ದೂರ ಉಳಿದಿಲ್ಲ.

ದೇಶೀಯ ಆಟಗಳಿಗೆ ಮನಸ್ಸು ಅರಳಿಸುವ ಶಕ್ತಿಯಿದೆ. ಅನುಭವಿಸುವ ಸಂತೋಷ, ಆನಂದ ಬೇರೊಂದರಲ್ಲಿ ಸಿಗುವುದಿಲ್ಲ. ಮನೆಯಲ್ಲಿ ಮಕ್ಕಳ ಜೊತೆಗೆ ಆಟವಾಡುವ ಸಮಯದಲ್ಲಿ ನಮ್ಮ ಬಾಲ್ಯದ ನೆನಪುಗಳು ಮರುಕಳಿಸುತ್ತವೆ. ಬುದ್ಧಿ ಚುರುಕುಗೊಳಿಸುವ ಕಲೆ ದೇಶೀಯ ಆಟಗಳಲ್ಲಿ ಕಾಣುತ್ತೇವೆ. ಅಧುನಿಕ ಜೀವನ ಶೈಲಿ ಎಂಬ ಧಾವಂತದಲ್ಲಿ ಮನುಷ್ಯ ಮುನ್ನಗ್ಗುತ್ತಿರುವುದರಿಂದ ದೇಸಿ ಆಟಗಳು ಮಾಯವಾಗುತ್ತಿವೆ.

ಕ್ರಿಕೆಟ್‌, ಫುಟ್‌ಬಾಲ್‌ ಸೇರಿದಂತೆ ಅಧುನಿಕ ಕ್ರೀಡೆಗಳು, ದೇಶೀಯ ಆಟಗಳನ್ನು ಒಂದೊಂದಾಗಿ ನುಂಗಿ ಹಾಕುತ್ತಿವೆ. ಇತ್ತೀಚಿನ ದಿನಗಳಲ್ಲಿ ನಮ್ಮ ಪೋಷಕರಲ್ಲೂ ಕೂಡ ಗ್ರಾಮೀಣ ಕ್ರೀಡೆಗಳ ಬಗ್ಗೆ ನಿರುತ್ಸಾಹ ತುಂಬಿದೆ. ಕೇವಲ ಮಕ್ಕಳ ಓದು ಬರಹದ ಬಗ್ಗೆ ಆಸಕ್ತಿ ವಹಿಸುವ ಪರಿಪಾಠ ಹೆಚ್ಚಾಗಿದೆ. ಇದು ಗ್ರಾಮೀಣ ಕ್ರೀಡೆಗಳು ಕಣ್ಮರೆ ಆಗುವುದಕ್ಕೆ ಪ್ರಮುಖ ಕಾರಣವಾಗಿದೆ.

ಯುವಜನ ಸೇವೆ ಮತ್ತು ಕ್ರೀಡೆ ಇಲಾಖೆಯವರು ಕೇವಲ ದಸರಾ ಹಬ್ಬದ ಸಂದರ್ಭದಲ್ಲಿ ಮಾತ್ರ ತಾಲ್ಲೂಕು ಮಟ್ಟದಲ್ಲಿ ಹೆಚ್ಚಿನ ಪ್ರಚಾರ ನೀಡದೇ ಬೇಕಾಬಿಟ್ಟಿಯಾಗಿ ಗ್ರಾಮೀಣ ದೇಶೀಯ ಆಟಗಳನ್ನು ಆಯೋಜಿಸುತ್ತಿದ್ದಾರೆ. ಬದಲಿಗೆ ವರ್ಷದಲ್ಲಿ ನಾಲ್ಕೈದು ಬಾರಿ ಹೋಬಳಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಿದರೆ ಮಾತ್ರ ಜೀವಂತವಾಗಿಡಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೇಶೀಯ ಆಟಗಳ ಬಗ್ಗೆ ನಮ್ಮ ಮಕ್ಕಳಿಗೆ ಚಿತ್ರ ತೋರಿಸಿ ವಿವರಿಸುವ ಸಂದರ್ಭ ಬರುವುದರಲ್ಲಿ ಸಂಶಯ ಇರುವುದಿಲ್ಲ.

ಗ್ರಾಮೀಣ ಕ್ರೀಡೆಗಳನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಸಂಘ, ಸಂಸ್ಥೆಗಳು ಕಾರ್ಯಕ್ರಮಗಳನ್ನು ರೂಪಿಸುವ ಅವಶ್ಯಕತೆ ಇದೆ

–ದಿಲೀಪಕುಮಾರ್‌ ಬಗ್ದಲಕರ್‌, ಚಿಟಗುಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.