ADVERTISEMENT

ಚಿಟಗುಪ್ಪ | ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2024, 15:57 IST
Last Updated 18 ಮಾರ್ಚ್ 2024, 15:57 IST
ಚಿಟಗುಪ್ಪ ತಾಲ್ಲೂಕಿನ ನಿರ್ಣಾದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಗುಡಾಳ್ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಚಿಟಗುಪ್ಪ ತಾಲ್ಲೂಕಿನ ನಿರ್ಣಾದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಗುಡಾಳ್ ಭೇಟಿ ನೀಡಿ ಪರಿಶೀಲನೆ ನಡೆಸಿದರು    

ಚಿಟಗುಪ್ಪ: ‘ಈ ಬಾರಿ ಹುಮನಾಬಾದ್, ಚಿಟಗುಪ್ಪ ತಾಲ್ಲೂಕಿನಲ್ಲಿ ಒಟ್ಟು 6559 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಪರೀಕ್ಷೆ ಬರೆಯಲಿದ್ದಾರೆʼ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಗುಡಾಳ್ ಹೇಳಿದರು.

ತಾಲ್ಲೂಕಿನ ನಿರ್ಣಾ ಗ್ರಾಮದ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಸಿದ್ಧತಾ ವ್ಯವಸ್ಥೆ ಪರಿಶೀಲಿಸಿ ಮಾತನಾಡಿದರು. ‘ಹುಮನಾಬಾದ್ ತಾಲ್ಲೂಕಿನಲ್ಲಿ 11, ಚಿಟಗುಪ್ಪ ತಾಲ್ಲೂಕಿನಲ್ಲಿ 7 ಸೇರಿದಂತೆ ಒಟ್ಟು 18 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ.

‘ಇವುಗಳಲ್ಲಿ ಸರ್ಕಾರಿ ಪ್ರೌಢಶಾಲೆ ನಿರ್ಣಾ, ಸರ್ಕಾರಿ ಪ್ರೌಢಶಾಲೆ ಮನ್ನಾಎಖ್ಖೇಳಿ, ಸರ್ಕಾರಿ ಪ್ರೌಢಶಾಲೆ(ಬಾಲಕರ) ಹುಮನಾಬಾದ್ ಸೂಕ್ಷ್ಮ ಕೇಂದ್ರಗಳಾಗಿ, ಸರ್ಕಾರಿ ಪ್ರೌಢಶಾಲೆ ಹಳ್ಳಿಖೇಡ (ಬಿ) ಅತಿ ಸೂಕ್ಷ್ಮ ಕೇಂದ್ರವನ್ನಾಗಿ ಗುರುತಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ಪ್ರತಿ ಕೇಂದ್ರದ ಎಲ್ಲ ಕೋಣೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಸೂಕ್ತ ಪೊಲೀಸ್‌ ಬಂದೋಬಸ್ತ್‌ನಲ್ಲಿ ಪರೀಕ್ಷೆ ನಡೆಯಲಿವೆ. ಪ್ರತಿಶತ 90ರಷ್ಟು ಕೇಂದ್ರಗಳಲ್ಲಿ ಹೊರಗಡೆಯ ಶಿಕ್ಷಕರು ಪರೀಕ್ಷಾ ಮೇಲುಸ್ತುವಾರಿ ವಹಿಸಲಿದ್ದಾರೆ. ಯಾವುದೇ ಅವ್ಯವಹಾರಕ್ಕೆ ಅವಕಾಶ ಇರುವುದಿಲ್ಲ, ಅಚ್ಚುಕಟ್ಟಾಗಿ ಪರೀಕ್ಷೆ ನಡೆಸಲಾಗುತ್ತದೆ. ಅಭ್ಯರ್ಥಿಗಳಿಗೆ ಕೊಠಡಿಗಳಲ್ಲಿ ಕುಡಿಯುವ ನೀರು, ಗಡಿಯಾರದ ವ್ಯವಸ್ಥೆ ಮಾಡಲಾಗಿದೆ ಎಂದರು.

ನಂತರ ಮನ್ನಾಎಖ್ಖೇಳಿ, ಬೇಮಳಖೇಡಾ, ಚಿಟಗುಪ್ಪಗಳಲ್ಲಿಯ ಪರೀಕ್ಷಾ ಕೇಂದ್ರಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಿಕ್ಷಣ ಸಂಯೋಜಕ ಮಹಾದೇವ್, ಮುಖ್ಯಶಿಕ್ಷಕ ವಿಷ್ಣುವರ್ಧನ್, ಶಿಕ್ಷಕರಾದ ರಾಮಕೃಷ್ಣ, ಚೇತನ್, ಕುಪೇಂದ್ರನಾಥ, ಉಲ್ಲಾಸ್, ವಿದ್ಯಾವತಿ, ಶ್ವೇತಾ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.