ADVERTISEMENT

ಮುನ್ಸಿಪಲ್‌ ಮಿನಿಸ್ಟರ್‌ ಅವರ ಸಿಟಿ ಕ್ಲೀನ್‌ ಇಲ್ಲ: ಸದಸ್ಯರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 16:25 IST
Last Updated 6 ಜುಲೈ 2024, 16:25 IST
ಬೀದರ್‌ ನಗರಸಭೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಉಲ್ಲಾಸಿನಿ, ಶಶಿಧರ ಹೊಸಳ್ಳಿ, ಮುನ್ನಾ ಅವರು ಮಾತನಾಡಿದರು
ಬೀದರ್‌ ನಗರಸಭೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಉಲ್ಲಾಸಿನಿ, ಶಶಿಧರ ಹೊಸಳ್ಳಿ, ಮುನ್ನಾ ಅವರು ಮಾತನಾಡಿದರು   

ಬೀದರ್‌: ‘ಮುನ್ಸಿಪಲ್‌ ಮಿನಿಸ್ಟರ್‌ ನಮ್ಮವರು ಇದ್ದಾರೆ. ಆದರೆ, ಬೀದರ್‌ ಸಿಟಿ ಕ್ಲೀನ್‌ ಇಲ್ಲ’

ಇದು ನಗರಸಭೆ ಸದಸ್ಯೆ ಉಲ್ಲಾಸಿನಿ ಅವರ ಮಾತು. ಇಲ್ಲಿನ ನಗರಸಭೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮೇಲಿನಂತೆ ಹೇಳಿದರು. ಅವರ ಮಾತಿಗೆ ಪಕ್ಷಭೇದ ಮರೆತು ಎಲ್ಲ ಸದಸ್ಯರು ದನಿಗೂಡಿಸಿದರು. ‘ನಗರದಲ್ಲಿ ಸಮರ್ಪಕವಾಗಿ ಕಸ ವಿಲೇವಾರಿಗೊಳಿಸಿ, ನಗರವನ್ನು ಸ್ವಚ್ಛವಾಗಿಡಬೇಕು’ ಎಂದು ಆಗ್ರಹಿಸಿದರು.

‘ಬೀದರ್‌ ಸಿಟಿ ಪಾಶ್‌ ಆಗಿರಬೇಕು. ಆದರೆ, ಪಾಶ್‌ ಆಗಿಲ್ಲ. ಯಾರಾದರೂ ಬೀದರ್‌ ನಗರಕ್ಕೆ ಬಂದು ಹೋದರೆ, ಸಿಟಿ ಹೀಗಿರಬೇಕಪ್ಪ ಎಂದು ಮಾತಾಡಿಕೊಳ್ಳಬೇಕು. ಚರಂಡಿ ಹೊಲಸು ತೆಗೆದು ರಸ್ತೆ ಬದಿ ಹಾಕಿ ಹೋಗುತ್ತಾರೆ. ವಾರಗಟ್ಟಲೇ ಅದನ್ನು ವಿಲೇವಾರಿ ಮಾಡುವುದಿಲ್ಲ. ಎಲ್ಲೆಡೆ ದುರ್ಗಂಧ ಹರಡುತ್ತದೆ. ನಗರದಲ್ಲೂ ವ್ಯಾಪಕವಾಗಿ ಡೆಂಗಿ ಹರಡುತ್ತಿದೆ. ಹೀಗಿದ್ದರೂ ತ್ಯಾಜ್ಯ ವಿಲೇವಾರಿಗೆ ನಿರ್ಲಕ್ಷ್ಯವೇಕೆ’ ಎಂದು ಉಲ್ಲಾಸಿನಿ ಪ್ರಶ್ನಿಸಿದರು.

ADVERTISEMENT

‘ಇನ್‌ಫುಲೆಯೆನ್ಸ್‌’ ಮೇಲೆ ನಗರಸಭೆಯಲ್ಲಿ ಅನೇಕರನ್ನು ಕೆಲಸಕ್ಕೆ ತೆಗೆದುಕೊಂಡಿದ್ದೀರಿ. ಹೀಗಿರುವಾಗ ಅವರೇಕೆ ಕಸ ವಿಲೇವಾರಿ ಮಾಡುತ್ತಾರೆ. ‘ಡ್ರೇನೇಜ್‌ ಕ್ಲೀನ್‌’ ಮಾಡುತ್ತಾರೆ. ಚರಂಡಿಗಳನ್ನು ಎಲ್ಲೂ ಸ್ವಚ್ಛಗೊಳಿಸುತ್ತಿಲ್ಲ. ನನ್ನ ವಾರ್ಡಿನಲ್ಲಿ ನಾನೇ ಹಣ ಕೊಟ್ಟು ಚರಂಡಿಗಳನ್ನು ಸ್ವಚ್ಛಗೊಳಿಸಿದ್ದೇನೆ. ನಗರಸಭೆ ಯಾಕಿರಬೇಕು’ ಎಂದು ಸದಸ್ಯ ಶಶಿಧರ ಹೊಸಳ್ಳಿ ಪ್ರಶ್ನಿಸಿದರು. 

ಹೊಸಳ್ಳಿ ಮಾತಿಗೆ ದನಿಗೂಡಿಸಿದ ಉಲ್ಲಾಸಿನಿ, ‘ಯಾವುದೇ ಸಮಸ್ಯೆ ಬಗ್ಗೆ ಕರೆ ಮಾಡಿದರೆ ನಗರಸಭೆಯ ಅಧಿಕಾರಿಗಳು, ಸಿಬ್ಬಂದಿ ಕರೆ ಸ್ವೀಕರಿಸುವುದಿಲ್ಲ. 24X7 ನಿರಂತರವಾಗಿ ನೀರು ಬಿಡುತ್ತಿಲ್ಲ. ಇದರಿಂದಾಗಿ ಜನರಿಗೆ ಸಮಸ್ಯೆಯಾಗುತ್ತಿದೆ’ ಎಂದು ಹೇಳಿದರು.

ಸದಸ್ಯರಾದ ಶಿವಕುಮಾರ, ಪ್ರಭು ಪಾಟೀಲ, ಮುನ್ನಾ ಮಾತನಾಡಿ, ಒಂದು ಸಲವೂ ನಗರಸಭೆಯ ಸಿಬ್ಬಂದಿ ನಮ್ಮ ವಾರ್ಡ್‌ಗೆ ಬಂದು ಸ್ವಚ್ಛತಾ ಕಾರ್ಯ ಕೈಗೊಂಡಿಲ್ಲ. ಮತದಾರರಿಗೆ ನಾವು ಏನಂತ ಉತ್ತರ ಕೊಡಬೇಕು ಎಂದು ಕೇಳಿದರು.

‘ನಾನು ಪ್ರತಿನಿಧಿಸುವ ವಾರ್ಡ್‌ ‘ಎಕ್ಸ್‌ಟೆನ್ಶನ್‌ ಏರಿಯಾ’ ಒಳಗೊಂಡಿದೆ. ಅಲ್ಲಿ ಯಾವುದೇ ರೀತಿಯ ಸ್ವಚ್ಛತಾ ಕಾರ್ಯ ನಡೆಯುತ್ತಿಲ್ಲ’ ಎಂದು ಸದಸ್ಯ ಪ್ರಶಾಂತ್‌ ದೊಡ್ಡಿ ಹೇಳಿದರು. ಸದಸ್ಯ ರಾಜು ಚಿಂತಾಮಣಿ ಮಾತನಾಡಿ, ನಗರದಲ್ಲಿ ಪ್ಲಾಸ್ಟಿಕ್‌ ಬಳಸುವುದರ ಮೇಲೆ ನಿಷೇಧವಿಲ್ಲ. ಹೀಗಾಗಿಯೇ ಎಲ್ಲೆಡೆ ಅದು ಹರಿದಾಡುತ್ತಿದೆ. ಚರಂಡಿಗಳಲ್ಲಿ ಸೇರಿಕೊಂಡು ಸ್ವಚ್ಛತೆಗೆ ಸಮಸ್ಯೆಯಾಗುತ್ತಿದೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಮುನ್ನಾ, ‘ಬ್ರ್ಯಾಂಡೆಡ್‌ ಕಂಪನಿಗಳ ಪ್ಲಾಸ್ಟಿಕ್‌ ಮೊದಲು ನಿಷೇಧಿಸಬೇಕು. ಆನಂತರ ಹೂ, ಹಣ್ಣು, ತರಕಾರಿ ಮಾರುವವರದ್ದು ನಿಷೇಧಿಸಬೇಕು. ಬಡವರ ಮೇಲೆ ಮುಗಿಬೀಳುವುದು ಸರಿಯಲ್ಲ. ಮೊದಲು ದೊಡ್ಡವರ ಮೇಲೆ ಕಾನೂನು ಕ್ರಮವಾಗಲಿ’ ಎಂದು ಆಗ್ರಹಿಸಿದರು.

ಪೌರಾಯುಕ್ತ ಶಿವರಾಜ ರಾಠೋಡ್‌ ಮಾತನಾಡಿ, ನಿಯಮದ ಪ್ರಕಾರ, ನಗರಸಭೆಗೆ 30 ಜನ ಪುರುಷರು, 20 ಜನ ಹೆಣ್ಣು ಮಕ್ಕಳನ್ನು ಹೊಸದಾಗಿ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಯಾರು ಕೂಡ ‘ಇನ್‌ಫ್ಲುಯೆನ್ಸ್‌’ ಬಳಸಿಲ್ಲ. ನಾಲ್ಕು ತಿಂಗಳು ಅವರ ಕೆಲಸವನ್ನು ನೋಡಿಕೊಂಡೆ ಸೇರಿಸಿಕೊಳ್ಳಲಾಗಿದೆ ಎಂದರು.

ಕೆಲವೆಡೆ ‘ಪೈಪ್‌ಲೈನ್‌ ಡ್ಯಾಮೇಜ್‌’ ಆಗಿರುವುದರಿಂದ 24X7 ನೀರು ಪೂರೈಕೆಗೆ ಸಮಸ್ಯೆಯಾಗಿದ್ದು, ಅದನ್ನು ಸರಿಪಡಿಸಲಾಗುತ್ತಿದೆ. ನಮ್ಮ ಬಳಿ 70 ಜನ ‘ಸ್ವೀಪರ್ಸ್‌’, 111 ಜನ ‘ಡ್ರೇನ್‌ ಕ್ಲೀನರ್ಸ್‌’ ಇದ್ದಾರೆ. 59 ವಾಹನಗಳಿವೆ. 9 ಟ್ರ್ಯಾಕ್ಟರ್‌ ಸೇರಿವೆ. 34 ‘ಡುರ್‌ ಟು ಡುರ್‌’ ಕಸ ಸಂಗ್ರಹಿಸುವ ವಾಹನಗಳಿವೆ. ನಿತ್ಯ ಕಸ ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತಿದೆ. ‘ಡ್ರೇನ್‌ ಕ್ಲೀನರ್ಸ್‌’ ಸಂಖ್ಯೆ ಕಡಿಮೆ ಇರುವುದರಿಂದ ಒಂದೆರೆಡು ದಿನ ಒಂದೇ ವಾರ್ಡ್‌ಗೆ ಅಷ್ಟು ಜನ ಸಿಬ್ಬಂದಿಯನ್ನು ಕಳಿಸಿ ಕ್ಲೀನ್‌ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. 

ಉದ್ಯಾನ ಅತಿಕ್ರಮಣ ತೆರವು

‘ಬೀದರ್‌ ನಗರಸಭೆ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ ಫುಟ್‌ಪಾತ್‌ ರಸ್ತೆ ಅತಿಕ್ರಮಣ ತೆರವುಗೊಳಿಸಲಾಗುತ್ತಿದೆ. ಎರಡನೇ ಹಂತದಲ್ಲಿ ಉದ್ಯಾನಗಳ ಅತಿಕ್ರಮಣ ತೆರವುಗೊಳಿಸಲಾಗುವುದು. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ನಗರಸಭೆ ಪೌರಾಯುಕ್ತ ಶಿವರಾಜ ರಾಠೋಡ್‌ ತಿಳಿಸಿದರು. ಸದಸ್ಯೆ ಉಲ್ಲಾಸಿನಿ ಪ್ರತಿಕ್ರಿಯಿಸಿ ಯಾವುದೇ ರೀತಿಯ ತಾರತಮ್ಯ ಮಾಡದೆ ಯಾರೇ ಅತಿಕ್ರಮಣ ಮಾಡಿದರೂ ಅದನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

‘ಬೋರ್‌ವೆಲ್‌ ಕಳವು’

‘ನನ್ನ ವಾರ್ಡಿನಲ್ಲಿ ಬೋರ್‌ವೆಲ್‌ ಕಳುವಾಗಿದೆ. ಅದನ್ನು ಹುಡುಕಿಕೊಡಿ. ಬೋರ್‌ವೆಲ್‌ ಇಲ್ಲದ ಕಾರಣ ಸ್ಥಳೀಯರಿಗೆ ತೊಂದರೆ ಆಗುತ್ತಿದೆ’ ಎಂದು ಸದಸ್ಯ ಸಲೀಂ ಸೌದ್‌ ಆಗ್ರಹಿಸಿದರು. ಅದಕ್ಕೆ ಪೌರಾಯುಕ್ತರು ಪ್ರತಿಕ್ರಿಯಿಸಿ ಇದನ್ನು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಬ್ರಿಮ್ಸ್‌ನಿಂದ ₹7 ಕೋಟಿ ತೆರಿಗೆ ಪಾವತಿ ಬಾಕಿ

‘ಬೀದರ್‌ ವೈದ್ಯಕೀಯ ವಿಜ್ಞಾನ ಸಂಸ್ಥೆಯವರು (ಬ್ರಿಮ್ಸ್‌) ನಗರಸಭೆಗೆ ಪಾವತಿಸಬೇಕಾದ ₹7.09 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಈ ಸಂಬಂಧ ಹಲವು ಸಲ ಅವರಿಗೆ ಪತ್ರ ಬರೆಯಲಾಗಿದೆ. ಈ ವರ್ಷದ ಏಪ್ರಿಲ್‌ನಿಂದ ಇದುವರೆಗೆ ₹7.36 ಕೋಟಿ ತೆರಿಗೆ ವಸೂಲಿ ಮಾಡಲಾಗಿದೆ’ ಎಂದು ನಗರಸಭೆ ಕಂದಾಯ ಅಧಿಕಾರಿ ಸೈಯದ್‌ ಚಾಂದ್‌ ಪಟೇಲ್‌ ಸಭೆಗೆ ತಿಳಿಸಿದರು.

ಸದಸ್ಯ ರಾಜು ಚಿಂತಾಮಣಿ ‘ಬ್ರಿಮ್ಸ್‌ನವರು ಕನಿಷ್ಠ ಶುಲ್ಕ ಪಾವತಿಸಿಕೊಂಡೇ ಜನರಿಗೆ ಚಿಕಿತ್ಸೆ ಕೊಡುತ್ತಾರೆ. ಅವರಿಗೇಕೆ ಕಾಲಾವಕಾಶ ಕೊಡುತ್ತಿದ್ದೀರಿ. ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು. ನಗರಸಭೆ ಅಧ್ಯಕ್ಷ ಮೊಹಮ್ಮದ್‌ ಗೌಸ್‌ ಮಾತನಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ನೂರಾರು ರೋಗಿಗಳು ಇರುತ್ತಾರೆ. ಆಸ್ಪತ್ರೆಗೆ ನೀರು ಬಂದ್‌ ಮಾಡುವುದು ಸೇರಿದಂತೆ ಬೇರೇನಾದರೂ ಮಾಡಿದರೆ ರೋಗಿಗಳಿಗೆ ತೊಂದರೆ ಆಗುತ್ತದೆ. ಈ ಕುರಿತು ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.

‘ಗುಂಪಾ ರಿಂಗ್‌ರೋಡ್‌ ಮನೆ ತೆರವುಗೊಳಿಸಿ’

‘ಗುಂಪಾ ರಿಂಗ್‌ರೋಡ್‌ನಲ್ಲಿ 15 ಮನೆಗಳಿದ್ದು ಅವುಗಳನ್ನು ತೆರವುಗೊಳಿಸಿ ರಸ್ತೆ ಅಗಲೀಕರಣ ಮಾಡಬೇಕು. ಮನೆಗಳಿಂದ ರಸ್ತೆ ಇಕ್ಕಟ್ಟಾಗಿದ್ದು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಸಂಬಂಧ ಈಗಾಗಲೇ ಹೈಕೋರ್ಟ್‌ ಆದೇಶ ನೀಡಿದ್ದು ಮನೆಗಳವರಿಗೆ ಪರಿಹಾರ ಕೊಟ್ಟು ತೆರವು ಕಾರ್ಯ ಕೈಗೆತ್ತಿಕೊಳ್ಳಬೇಕು’ ಎಂದು ಸದಸ್ಯ ಶಶಿಧರ ಹೊಸಳ್ಳಿ ಆಗ್ರಹಿಸಿದರು.

ಗುಂಪಾ ರಿಂಗ್‌ರೋಡ್‌ನಿಂದ ಹೈದರಾಬಾದ್‌ ಕಡೆಗೆ ಹೋಗುವ ರಸ್ತೆಯಲ್ಲಿ ದೊಡ್ಡ ನಾಲೆ ಅತಿಕ್ರಮಣವಾಗಿದ್ದು ಕೂಡಲೇ ಅದನ್ನು ತೆರವುಗೊಳಿಸಬೇಕು. ರಸ್ತೆಯ ಎರಡೂ ಬದಿ ಚರಂಡಿಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.

‘ಟೆಂಡರ್‌ ಇಲ್ಲದೆ ಗ್ಲ್ಯಾಡರ್‌ ಖರೀದಿ’

‘ಟೆಂಡರ್‌ ಕರೆಯದೇ ಗ್ಲ್ಯಾಡರ್‌ ಖರೀದಿಸಿದ್ದೀರಿ. ಅದಕ್ಕೆ ₹20 ಲಕ್ಷ ವ್ಯಯಿಸಿದ್ದೀರಿ. ಆ ವಾಹನವೇ ಕಾಣಿಸುತ್ತಿಲ್ಲ. ಅದನ್ನು ನನಗೆ ತೋರಿಸಿ. ಇಲ್ಲವಾದರೆ ನಗರಸಭೆ ಎದುರು ಧರಣಿ ನಡೆಸುತ್ತೇನೆ’ ಎಂದು ಸದಸ್ಯ ಶಶಿಧರ ಹೊಸಳ್ಳಿ ಪಟ್ಟು ಹಿಡಿದರು.  ‘ಈ ಕುರಿತು ಇಲ್ಲಿ ಚರ್ಚಿಸುವುದು ಬೇಡ. ಸಭೆಯ ನಂತರ ಅದರ ಬಗ್ಗೆ ತಿಳಿಸುವೆ’ ಎಂದು ನಗರಸಭೆ ಅಧ್ಯಕ್ಷ ಮೊಹಮ್ಮದ್‌ ಗೌಸ್‌ ಹೇಳಿದಾಗ ಅಲ್ಲಿದ್ದವರು ಅಚ್ಚರಿ ವ್ಯಕ್ತಪಡಿಸಿದರು. ವಿಷಯ ಪ್ರಸ್ತಾಪಿಸಿದ ಹೊಸಳ್ಳಿ ಕೂಡ ಅಷ್ಟಕ್ಕೆ ಸುಮ್ಮನಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.