ಬೀದರ್: ಬೀದರ್ ಲೋಕಸಭಾ ಕ್ಷೇತ್ರ ದಲ್ಲಿ ಈ ಚುನಾವಣೆಯಲ್ಲಿಯೂ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ. ಸಾಂಪ್ರದಾಯಿಕ ಮತಗಳು ಆಯಾ ರಾಜಕೀಯ ಪಕ್ಷಗಳೊಂದಿಗೆ ಇದ್ದರೂ ಪ್ರಮುಖ ಸಮುದಾಯಗಳ ಮತದಾರರ ಮೇಲೆ ದೃಷ್ಟಿ ನೆಟ್ಟಿವೆ.
ಸಂಸದ ಭಗವಂತ ಖೂಬಾ ಅವರು 2014ರಲ್ಲಿ ನರೇಂದ್ರ ಮೋದಿ ಅಲೆಯಲ್ಲಿ 92,222 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎನ್.ಧರ್ಮಸಿಂಗ್ ಅವರನ್ನು ಸೋಲಿಸಿದ್ದರು. ಖೂಬಾ ಮರು ಆಯ್ಕೆ ಬಯಸಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ.
ಇದನ್ನೂ ಓದಿ:ಲೋಕಸಭಾ ಕ್ಷೇತ್ರ ದರ್ಶನ: ಬೀದರ್
ನರೇಂದ್ರ ಮೋದಿ ಸಾಧನೆ ಹಾಗೂ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟು ಕೊಂಡು ಪಕ್ಷದ ಕಾರ್ಯಕರ್ತರ ನೆರವಿನೊಂದಿಗೆ ಕ್ಷೇತ್ರದಲ್ಲಿ ಮತ ಯಾಚನೆಯಲ್ಲಿ ತೊಡಗಿದ್ದಾರೆ.
ಹುಮನಾಬಾದ್‌ನಲ್ಲಿ ಈಚೆಗೆ ನಡೆದ ಬಿಜೆಪಿ ಶಕ್ತಿಕೇಂದ್ರದ ಕಾರ್ಯಕರ್ತರ ಸಮಾವೇಶದಲ್ಲಿ ಹುಮನಾಬಾದ್ ಹಾಗೂ ಬೀದರ್ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ನಿರೀಕ್ಷಿತ ಪ್ರಮಾಣದಲ್ಲಿ ಪಾಲ್ಗೊಂಡಿರಲಿಲ್ಲ. ಅಲ್ಲಿ ವಿಭಾಗವಾರು ಕಾರ್ಯಕರ್ತರಿಗೆ ವ್ಯವಸ್ಥೆ ಮಾಡಲಾಗಿದ್ದ ಕುರ್ಚಿಗಳು ಖಾಲಿ ಇದ್ದವು. ಇದು ಪಕ್ಷದ ಮುಖಂಡರ ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿ ಭಗವಂತ ಖೂಬಾ ಮತ್ತೆ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಆದರೆ ಅಸಮಾಧಾನದ ಹೊಗೆ ಮಾತ್ರ ಕಡಿಮೆಯಾಗಿಲ್ಲ. ಆಳಂದ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಈಗಲೂ ಮುನಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಕ್ಷೇತ್ರದಲ್ಲಿ ಲಿಂಗಾಯತ ಮತಗಳು ನಿರ್ಣಾಯಕ ಸ್ಥಾನದಲ್ಲಿರುವ ಕಾರಣ ಕಾಂಗ್ರೆಸ್ ಹೈಕಮಾಂಡ್ ಕೊನೆಯ ಕ್ಷಣದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರನ್ನು ಕಣಕ್ಕೆ ಇಳಿಸಿದೆ. ಕಾಂಗ್ರೆಸ್–ಜೆಡಿಎಸ್ ಮೈತ್ರಿ ಬೆಸುಗೆಯ ಅಭ್ಯರ್ಥಿಯಾಗಿ ಈಶ್ವರ ಖಂಡ್ರೆ ಅವರು ಲೋಕಸಭೆಗೆ ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದರೂ, ಮೂರು ಬಾರಿ ಶಾಸಕರಾಗಿ, ಸಿದ್ದರಾಮಯ್ಯನವರ ಸಂಪುಟದಲ್ಲಿ ಪೌರಾಡಳಿತ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಖಂಡ್ರೆ, ಜಿಲ್ಲೆಯಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ. ಸಕ್ಕರೆ ಕಾರ್ಖಾನೆಯ ಮೇಲೂ ಹಿಡಿತವಿದೆ. ಇವುಗಳನ್ನು ಬಳಸಿಕೊಂಡು ಪ್ರಚಾರದಲ್ಲಿ ತೊಡಗಿದ್ದಾರೆ.
ಮೈತ್ರಿ ಪಕ್ಷಗಳ ಅಭ್ಯರ್ಥಿ ಚುನಾವಣಾ ಅಖಾಡಕ್ಕೆ ಇಳಿದಿರುವುದು ಬಿಜೆಪಿ ಅಭ್ಯರ್ಥಿಯ ಗೆಲುವಿನ ಹಾದಿಯನ್ನು ಕಠಿಣಗೊಳಿಸಿದೆ.
1998 ರಲ್ಲಿ ಬಿಜೆಪಿಯ ರಾಮಚಂದ್ರ ವೀರಪ್ಪ ಅವರು ಜನತಾದಳದ ಬಾಬು ಹೊನ್ನಾನಾಯಕ ಅವರನ್ನು 1.84 ಲಕ್ಷ ಮತಗಳ ಅಂತರದಿಂದ ಪರಾಭವಗೊಳಿಸಿ ದಾಖಲೆ ನಿರ್ಮಿಸಿದ್ದರು. ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. 2014ರಲ್ಲಿ ಬಿಜೆಪಿಯ ಭಗವಂತ ಖೂಬಾ ಕ್ಷೇತ್ರದ ಇತಿಹಾಸದಲ್ಲೇ ಅತೀ ಹೆಚ್ಚು 4,59,290 ಮತಗಳನ್ನು ಪಡೆದು ಅಚ್ಚರಿ ಮೂಡಿಸಿದ್ದರು.
ಭಗವಂತ ಖೂಬಾ ಹಾಗೂ ಈಶ್ವರ ಖಂಡ್ರೆ ಇಬ್ಬರೂ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಕ್ಷೇತ್ರ ವ್ಯಾಪ್ತಿಯಲ್ಲಿ ಸ್ವಲ್ಪಮಟ್ಟಿಗೆ ಲಿಂಗಾಯತ ಮತಗಳು ಹೆಚ್ಚೇ ಇರುವ ಕಾರಣ ಈ ಬಾರಿ ಮತಗಳ ವಿಭಜನೆ ನಿಚ್ಚಳವಾಗಿದೆ.
ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿಲ್ಲ ಎಂದು ಮುನಿಸಿಕೊಂಡು ಹಿರಿಯ ಕಾರ್ಯಕರ್ತರೊಬ್ಬರು ಬಿಎಸ್‌ಪಿಯಿಂದ ಕಣಕ್ಕೆ ಇಳಿದಿದ್ದಾರೆ. ಇದು ಕಾಂಗ್ರೆಸ್ ಅಭ್ಯರ್ಥಿಗೆ ಮಗ್ಗಲು ಮುಳ್ಳಿನಂತಾಗಿದೆ.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ಬಿಟ್ಟರೆ ಜಿಲ್ಲೆಯ ಉಳಿದ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಕಾರ್ಯಕರ್ತರು ತಮಗೆ ಆಹ್ವಾನ ನೀಡಿಲ್ಲ ಎನ್ನುವ ಕಾರಣ ನೀಡಿ ಕಾಂಗ್ರೆಸ್ ಅಭ್ಯರ್ಥಿಯ ಪರ ಪ್ರಚಾರಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಜೆಡಿಎಸ್‌ನ ಬಂಡೆಪ್ಪ ಕಾಶೆಂಪೂರ ಮಾತ್ರ ಕೆಲ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಂಡು ಮೈತ್ರಿ ಧರ್ಮ ಪಾಲಿಸುತ್ತಿದ್ದಾರೆ. ಜೆಡಿಎಸ್‌ನ ಮತಗಳು ಸಹಜವಾಗಿಯೇ ಖಂಡ್ರೆ ಅವರಿಗೆ ಬರಲಿವೆ ಎನ್ನುವ ವಿಶ್ವಾಸ ಕಾಂಗ್ರೆಸ್ ಮುಖಂಡರಲ್ಲಿ ಇದೆ.
ಇದನ್ನೂ ಓದಿ:ಬೀದರ್: ಚುನಾವಣಾ ಕಣಕ್ಕೆ ರಂಗು ತುಂಬಿದ ಹೆಂಡತಿಯರು
ಈಗಾಗಲೇ ಇಬ್ಬರೂ ಅಭ್ಯರ್ಥಿಗಳು ಬೀದರ್‌ನಲ್ಲಿ ಶಕ್ತಿ ಪ್ರದರ್ಶನ ನಡೆಸಿ ಮತದಾರರ ಗಮನ ಸೆಳೆಯಲು ಪ್ರಯತ್ನ ನಡೆಸಿದರು.
ಬೀದರ್ ಲೋಕಸಭಾ ಕ್ಷೇತ್ರವು ಕಲಬುರ್ಗಿ ಜಿಲ್ಲೆಯ ಆಳಂದ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಎರಡು ಕ್ಷೇತ್ರಗಳಲ್ಲಿ ಬಿಜೆಪಿ, ಒಂದರಲ್ಲಿ ಜೆಡಿಎಸ್ ಶಾಸಕರು ಇದ್ದಾರೆ. ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಗೆದ್ದಿದ್ದ ಡಾ.ಉಮೇಶ ಜಾಧವ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ.
ಕ್ಷೇತ್ರದಲ್ಲಿನ ರಾಜಕೀಯ ಬೆಳವಣಿಗೆಗಳನ್ನು ಅವಲೋಕಿಸಿದರೆ, ಬಿಜೆಪಿ ಅಭ್ಯರ್ಥಿ ಮೋದಿ ಅಲೆಯಲ್ಲಿ ಮತ್ತೊಮ್ಮೆ ದಡ ಸೇರುತ್ತಾರಾ ಅಥವಾ ವೈಯಕ್ತಿಕ ವರ್ಚಸ್ಸಿನ ಮೇಲೆ ಮತದಾರರು ಖಂಡ್ರೆ ಅವರ ‘ಕೈ’ ಹಿಡಿಯುತ್ತಾರಾ ಎನ್ನುವ ಕುತೂಹಲ ಕ್ಷೇತ್ರವನ್ನು ಅವರಿಸಿಕೊಂಡಿದೆ.
*ನನ್ನ ಹಾಗೂ ನನ್ನ ತಂದೆ ಭೀಮಣ್ಣ ಖಂಡ್ರೆ ಕೈಗೊಂಡ ಕಾರ್ಯಗಳು ಏನು ಎನ್ನುವುದು ಕ್ಷೇತ್ರದ ಜನರಿಗೆ ಗೊತ್ತಿದ್ದು, ಗೆಲುವು ಸುಲಭವಾಗಲಿದೆ.
- ಈಶ್ವರ ಖಂಡ್ರೆ, ಕಾಂಗ್ರೆಸ್ ಅಭ್ಯರ್ಥಿ
*ಜಿಲ್ಲೆಯ ಅಭಿವೃದ್ಧಿಗೆ ನಾನು ನೀಡಿದ ಕೊಡುಗೆಯನ್ನು ಜನರು ಮರೆತಿಲ್ಲ. ಅಭಿವೃದ್ಧಿ ಕಾಮಗಾರಿಗಳೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿವೆ
- ಭಗವಂತ ಖೂಬಾ, ಬಿಜೆಪಿ ಅಭ್ಯರ್ಥಿ
*40 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ. ತಳಮಟ್ಟದಲ್ಲಿ ಕೆಲಸ ಮಾಡಿದ ಅನುಭವ ನನ್ನೊಂದಿಗೆ ಇದೆ. ಜನಪರ ಕಾಳಜಿ ನನ್ನನ್ನು ಗೆಲ್ಲಿಸಲಿದೆ
-ಶಾನುಲ್ ಹಕ್ ಬುಖಾರಿ, ಬಿಎಸ್‌ಪಿ ಅಭ್ಯರ್ಥಿ
*ಲೋಕಸಭೆಗೆ ಮೊದಲ ಬಾರಿಗೆ ಮತದಾನ ಮಾಡಲಿರುವ ಕಾರಣ ನನಗೊಂದು ಹೊಸ ಅನುಭವ. ಅಭಿವೃದ್ಧಿ ಪರವಾಗಿರುವ ಅಭ್ಯರ್ಥಿಗೆ ನನ್ನ ಮತ ಚಲಾಯಿಸುವೆ
- ಕಾಮಾಕ್ಷಿ ರುದ್ರವಾರ್, ವಿದ್ಯಾರ್ಥಿನಿ
*ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಸಂಸದರ ಅಗತ್ಯವಿದೆ. ಅರ್ಹರು ಆಯ್ಕೆಯಾಗುವ ವಿಶ್ವಾಸ ಇದೆ
- ಶಾಹೇದ್ ಅಲಿ, ಯುವ ಮುಖಂಡ
ಲೋಕಸಭೆ ಚುನಾವಣೆ, ಬೀದರ್‌ಕಣದ ಬಗ್ಗೆ ಇನ್ನಷ್ಟು...
ಪ್ರಜಾವಾಣಿ ವಿಶೇಷಸಂದರ್ಶನಗಳು...
*ನಾನೆಂದೂ ಕುಟುಂಬ ರಾಜಕಾರಣ ಮಾಡಿಲ್ಲ: ದೇವೇಗೌಡ
*ಕುಟುಂಬ ರಾಜಕಾರಣದಿಂದಲೇ ಉಳಿದಿವೆ ಪ್ರಾದೇಶಿಕ ಪಕ್ಷಗಳು: ಕುಮಾರಸ್ವಾಮಿ
*ನಾನು ಈ ಜನ್ಮದಲ್ಲಿ ಯಾವ ರಾಜ್ಯದ ರಾಜ್ಯಪಾಲನೂ ಆಗಲ್ಲ: ಯಡಿಯೂರಪ್ಪ
*ಮೈತ್ರಿ ಸರ್ಕಾರಕ್ಕೆ ನಾನು ಮೂಗುದಾರ ಹಾಕಿಲ್ಲ: ಸಿದ್ದರಾಮಯ್ಯ
*ನಾಯಕರ ಮೌನದಿಂದ ಅವಮಾನವಾಗಿದೆ: ತೇಜಸ್ವಿನಿ ಅನಂತಕುಮಾರ್
*ಬಡವರದ್ದಲ್ಲ, ಕಾಂಗ್ರೆಸ್ನವರ ಗರೀಬಿ ಹಠಾವ್ ಆಯಿತು: ಸದಾನಂದಗೌಡ
*ದಲಿತರನ್ನು ಒಡೆಯಬೇಡಿ, ಎಡಗೈ–ಬಲಗೈ ಅಂತ ಎತ್ತಿಕಟ್ಟಿದರೆ ಯಾರಿಗೂ ಲಾಭವಿಲ್ಲ: ಮಲ್ಲಿಕಾರ್ಜುನ ಖರ್ಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.