ಬೀದರ್: ‘ನಗರದ ಬೀದರ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಬ್ರಿಮ್ಸ್) ಮಳೆ ನೀರು ಸೋರಿಕೆ ಆಗುತ್ತಿದ್ದು, ರೋಗಿಗಳು ಮತ್ತು ಸಿಬ್ಬಂದಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ತುರ್ತು ಮತ್ತು ತಾತ್ಕಾಲಿಕ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಶಾಶ್ವತ ಪರಿಹಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಶಿಫಾರಸಿನೊಂದಿಗೆ ಮೂರು ದಿನಗಳ ಒಳಗೆ ಪ್ರಸ್ತಾವವನ್ನು ಕಡತದಲ್ಲಿ ಸಲ್ಲಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಗುರುವಾರ ಸೂಚನೆ ನೀಡಿದ್ದಾರೆ.
ಜಿಲ್ಲಾ ಆಸ್ಪತ್ರೆಯ ಎಲ್ಲ ಒಳರೋಗಿಗಳು, ಹೊರ ರೋಗಿಗಳು, ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದ್ದಾರೆ.
ಬ್ರಿಮ್ಸ್ ಕಟ್ಟಡದಲ್ಲಿ ನಿರಂತರವಾಗಿ ಮಳೆ ನೀರು ಸೋರುತ್ತಿದೆ. ನೆಲಮಹಡಿಯಲ್ಲಿ ನೀರು ನಿಲ್ಲುತ್ತಿದೆ. ಕಟ್ಟಡ ಕುಸಿಯುವ ಭೀತಿ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇದು ಗಂಭೀರವಾದ ವಿಷಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ರಾತ್ರಿ ಭಾರಿ ಮಳೆ ಸುರಿದ ಪರಿಣಾಮ ಬ್ರಿಮ್ಸ್ ನೆಲಮಹಡಿಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡು, ಅಲ್ಲಿದ್ದ ವಿದ್ಯುತ್ ಪ್ಯಾನಲ್ ಮತ್ತು ಜನರೇಟರ್‌ನೊಳಗೆ ನೀರು ಹೊಕ್ಕಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಇದರಿಂದ ಆಸ್ಪತ್ರೆಯ ಮೂರು ಮತ್ತು ಆರನೇ ಮಹಡಿಯ ನವಜಾತ ಶಿಶು ಘಟಕದಲ್ಲಿ ವಿದ್ಯುತ್ ಪೂರೈಕೆ ಇಲ್ಲದೆ ಆಕ್ಸಿಜನ್ ಪೂರೈಕೆ ಸ್ಥಗಿತಗೊಂಡಿತ್ತು. ವಿಷಯ ಗಮನಕ್ಕೆ ಬರುತ್ತಿದ್ದಂತೆ ಬುಧವಾರ ನಸುಕಿನ ಜಾವ 40 ಮಕ್ಕಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿತ್ತು. ಆಕ್ಸಿಜನ್ ಇಲ್ಲದೆ ಪರದಾಡುತ್ತಿದ್ದ ರೋಗಿಯೊಬ್ಬರಿಗೆ ಕೈಪಂಪ್ ಸಹಾಯದಿಂದ ಆಕ್ಸಿಜನ್ ಪೂರೈಸಿ ಜೀವ ಉಳಿಸಿರುವ ಘಟನೆಯೂ ನಡೆದಿದೆ ಎಂದು ಗೊತ್ತಾಗಿದೆ.
ಇನ್ನು, ಆಸ್ಪತ್ರೆಯ ನೆಲಮಹಡಿಯಲ್ಲಿ ಪುರಾತನ ಬಾವಿಯಿದ್ದು, ಮಳೆ ನೀರು ಸಂಗ್ರಹಗೊಂಡು ಇಡೀ ನೆಲಮಹಡಿಯಲ್ಲಿ ನೀರು ಸಂಗ್ರಹಗೊಂಡಿದೆ. ಸತತವಾಗಿ ಎಂಟು ಮೋಟಾರ್‌ಗಳನ್ನು ಅಳವಡಿಸಿ ನೀರು ಹೊರಹಾಕಲಾಗುತ್ತಿದೆ. ಅಗ್ನಿಶಾಮಕ ದಳದವರು ಇದಕ್ಕಾಗಿ ಪ್ರತ್ಯೇಕವಾಗಿ ಮೋಟಾರ್‌ಗಳನ್ನು ಅಳವಡಿಸಿದ್ದಾರೆ. ಆದರೆ, ನೀರು ಸಂಗ್ರಹವಾಗುವುದು ಮಾತ್ರ ನಿಂತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.