ADVERTISEMENT

ಬೀದರ್‌: 5ರಂದು ಜಗಜೀವನರಾಮ್‌ ಜಯಂತಿ ಸರಳ ಆಚರಣೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2024, 16:18 IST
Last Updated 3 ಏಪ್ರಿಲ್ 2024, 16:18 IST
ಬೀದರ್‌ನಲ್ಲಿ ಬುಧವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿದರು
ಬೀದರ್‌ನಲ್ಲಿ ಬುಧವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿದರು   

ಬೀದರ್‌: ‘ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಬಾಬು ಜಗಜೀವನರಾಮ್‌ ಅವರ ಜಯಂತಿಯನ್ನು ಏ.5ರಂದು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲು ತೀರ್ಮಾನಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು.

ಜಯಂತಿ ಅಂಗವಾಗಿ ನಗರದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,‘ಪ್ರತಿ ವರ್ಷದಂತೆ ಈ ವರ್ಷವೂ ಬಾಬು ಜಗಜೀವನರಾಮ್‌ ಅವರ ಜಯಂತಿಯನ್ನು ಎಲ್ಲರೂ ಸೇರಿ ಆಚರಿಸೋಣ. ಎಲ್ಲ ಸರ್ಕಾರಿ ಕಚೇರಿ, ಶಾಲಾ, ಕಾಲೇಜುಗಳಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು. ಜಗಜೀವನರಾಮ್‌ ಅವರ ಮೂರ್ತಿ ಸ್ವಚ್ಛಗೊಳಿಸಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ’ ಎಂದರು.

ಅಂದು ಬೆಳಿಗ್ಗೆ 9ಕ್ಕೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಗಜೀವನರಾಮ್‌ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪನಮನ ಸಲ್ಲಿಸಲಾಗುವುದು ಎಂದು ಹೇಳಿದರು.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಮಾತನಾಡಿ,‘ಎಲ್ಲ ಜಯಂತಿಗಳ ಮೆರವಣಿಗೆಗಳು ಡಾ.ಬಿ.ಆರ್‌. ಅಂಬೇಡ್ಕರ್ ವೃತ್ತದ ಮೂಲಕ ನಡೆಯಬೇಕು. ಕೋರ್ಟ್ ಎದುರುಗಡೆಯಿಂದ ಹೋದರೆ ಡಿ.ಜೆ ಹಾಗೂ ಇತರೆ ಮೆರವಣಿಗೆ ಶಬ್ದದಿಂದ ಕೋರ್ಟ್ ಕಾರ್ಯ ಕಲಾಪಗಳಿಗೆ ತೊಂದರೆಯಾಗುತ್ತಿದೆ ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದ್ದಾರೆ. ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಜಯಂತಿಗಳನ್ನು ಶಾಂತಿ– ಸೌಹಾರ್ದತೆಯಿಂದ ಆಚರಿಸೋಣ’ ಎಂದರು. 

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಸಿಂಧು, ನಗರಸಭೆ ಪೌರಾಯುಕ್ತ ಶಿವರಾಜ ರಾಥೋಡ್‌ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.