ಬೀದರ್: ಕಲ್ಯಾಣ ಕರ್ನಾಟಕದ ಉತ್ಸವದ ಅಂಗವಾಗಿ ನಗರದ ಜಿಲ್ಲಾ ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಅವರು ರಾಷ್ಟ್ರ ಧ್ವಜಾರೋಹಣ ಮಾಡಿದರು.
ಭಾರತಕ್ಕೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಸಿಕ್ಕರೆ ಕಲ್ಯಾಣ ಕರ್ನಾಟಕಕ್ಕೆ 1948ರ ಸೆಪ್ಟೆಂಬರ್ 17ರಂದು ವಿಮೋಚನೆ ಸಿಕ್ಕಿತು. ಈ ಭಾಗದ ಜನರ ತ್ಯಾಗ, ಬಲಿದಾನದಿಂದ ವಿಮೋಚನೆ ಸಿಕ್ಕಿದೆ. ಈ ಸಂದರ್ಭದಲ್ಲಿ ಸರ್ದಾರ ವಲ್ಲಭಭಾಯಿ ಪಟೇಲ್, ಪಂಡಿತ್ ಜವಾಹರಲಾಲ್ ನೆಹರೂ ಅವರನ್ನು ನೆನಯಲೇ ಬೇಕು. 565ಕ್ಕೂ ಹೆಚ್ಚು ಸಂಸ್ಥಾನಗಳು ಭಾರತದ ಒಕ್ಕೂಟ ವ್ಯವಸ್ಥೆ ಸೇರಿದ್ದವು. ಆದರೆ, ಹೈದರಾಬಾದ್ ನಿಜಾಮ ಭಾರತದಲ್ಲಿ ಸೇರಲು ನಿರಾಕರಿಸಿದ್ದ. ಅಂದಿನ ಗೃಹಸಚಿವ ಸರ್ದಾರ ವಲ್ಲಭಭಾಯಿ ಪಟೇಲರು ಗಟ್ಟಿತನ ತೋರಿಸಿ, ಆಪರೇಷನ್ ಪೋಲೋ ಕಾರ್ಯಾಚರಣೆ ನಡೆಸುತ್ತಾರೆ. ಆಗ ನಿಜಾಮ ಶರಣಾಗುತ್ತಾನೆ. ಇದರೊಂದಿಗೆ ಹೈದರಾಬಾದ್ ಕರ್ನಾಟಕಕ್ಕೆ ವಿಮೋಚನೆ ಸಿಗುತ್ತದೆ ಎಂದು ಸಚಿವ ಖಂಡ್ರೆ ಹೇಳಿದರು.
ಸ್ವಾಮಿ ರಮಾನಂದ ತೀರ್ಥರು, ಜಗನ್ನಾಥರಾವ್ ಚಂಡ್ರಿಕಿ, ದತ್ತಾತ್ರೇಯ ಅವರಾದಿ, ಶಿವಮೂರ್ತಿ ಸ್ವಾಮಿ ಅಳವಂಡಿ, ಮಹಾದೇವಪ್ಪ ಲೋಖಂಡೆ, ಪ್ರಭುರಾವ ಕಂಬಳಿವಾಲೆ, ಕಾಶಪ್ಪ ಖಂಡ್ರೆ, ಭೀಮಣ್ಣ ಖಂಡ್ರೆ ಸೇರಿದಂತೆ ಹಲವರ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟ ನಡೆಸಿದ್ದರು ಎಂದರು.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ ನಂತರ ಜನರ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಇದರಿಂದ ರಾಜ್ಯಸ ಆರ್ಥಿಕ ಸ್ಥಿತಿಗೂ ಪುನ ಶ್ವೇತ ನ ದೊರಕಲಿದೆ ಎಂದು ಹೇಳಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಬಳಿಕ ಆಕರ್ಷಕ ಪಥ ಸಂಚಲನ ನಡೆಯಿತು.
ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ಪೌರಾಡಳಿತ ಸಚಿವ ರಹೀಂ ಖಾನ್, ವಿಧಾನ ಪರಿಷತ್ ಸದಸ್ಯರಾದ ಅತವಿಂದಕುಮಾರ ಅರಳಿ, ರಘುನಾಥರಾವ ಮಲ್ಕಾಪುರೆ, ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಪಂ ಸಿಇಒ ಶಿಲ್ಪಾ ಎಂ., ಎಸ್ಪಿ ಚನ್ನಬಸವಣ್ಣ ಎಸ್.ಎಲ್. ಹಾಜರಿದ್ದರು.
ನಗರದ ಬಸವೇಶ್ವರ ವೃತ್ತದಿಂದ ಕ್ರೀಡಾಂಗಣದ ವರೆಗೆ ಸರ್ದಾರ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.