ಬೀದರ್:ಸ್ವಚ್ಛ ಭಾರತ ಅಭಿಯಾನ ದೇಶದಾದ್ಯಂತ ನಡೆದಿದೆ. ಅದರೆ, ಬೀದರ್ ನಗರದಲ್ಲಿ ಮಾತ್ರ ಅದು ಕಾಗದಲ್ಲೇ ಉಳಿದುಕೊಂಡಿದೆ. ನಗರ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡಬೇಕು ಹಾಗೂ ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು ಎನ್ನುವ ಆದೇಶ ಜಿಲ್ಲಾಧಿಕಾರಿ ಕಚೇರಿಯಿಂದಲೇ ಹೊರಡುತ್ತದೆ. ಆದರೆ, ಜಿಲ್ಲಾಧಿಕಾರಿ ಕಚೇರಿಗೆ ಬಂದರೆ ಅಲ್ಲಿ ನೈರ್ಮಲ್ಯ ಎಷ್ಟರ ಮಟ್ಟಿಗೆ ಕಾಪಾಡಲಾಗುತ್ತಿದೆ ಎನ್ನುವುದು ಮನವರಿಕೆಯಾಗುತ್ತದೆ.
ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಹೊರಗಿನಿಂದ ಥಳಕಿನಿಂದ ಕೊಡಿದರೂ ಒಳಗೆ ಕೊಳಕು ತುಂಬಿದೆ. ಉಪನೋಂದಣಾಧಿಕಾರಿ ಕಚೇರಿ ಕಡೆಯಿಂದ ಮೇಲ್ಮಹಡಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಕಚೇರಿಯ ಕಡೆಗೆ ಬಂದರೆ ಮೆಟ್ಟಿಲುಗಳ ಮೇಲೆ ಗುಟ್ಕಾ ತಿಂದು ಉಗಿದಿರುವುದು ಕಂಡು ಬರುತ್ತದೆ. ಕಚೇರಿಯ ಕಿಟಕಿಗಳಲ್ಲಿ ಗುಟ್ಕಾ ಕಲೆಗಳು ಕಾಣ ಸಿಗುತ್ತವೆ. ಕಚೇರಿಯೊಳಗಿನ ಕೆಲ ಸಿಬ್ಬಂದಿಯೇ ಗುಟ್ಕಾ ತಿಂದು ಕಿಟಕಿಯಿಂದ ಹೊರಗೆ ಉಗಿಯುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಇಲ್ಲಿ ಬರುವ ಸಾರ್ವಜನಿಕರು ಸಹ ಅವರನ್ನೇ ಅನುಕರಿಸುತ್ತಿದ್ದಾರೆ.
ಕಟ್ಟಡದೊಳಗೆ ಜೇಡು ಬಲೆ ಕಟ್ಟಿರುವುದು ಕಣ್ಣಿಗೆ ಬೀಳುತ್ತದೆ. ಕಟ್ಟಡದೊಳಗೆ ಕಸ ವಿಲೇವಾರಿ ಎನ್ನುವುದು ವ್ಯವಸ್ಥಿತವಾಗಿಲ್ಲ. ಕಚೇರಿ ಸಿಪಾಯಿಗಳು ಕಟ್ಟಡದ ಹಿಂಬದಿ ಒಂದು ಮೂಲೆಯಲ್ಲಿ ಕಾಗದಗಳನ್ನು ಸುರಿದು ಹೋಗಿ ಬಿಡುತ್ತಾರೆ. ಅವು ಗಾಳಿಗೆ ಆವರಣ ತುಂಬ ಪಸರಿಸಿಕೊಳ್ಳುತ್ತಿವೆ. ಕೆಲವೊಮ್ಮೆ ಅಲ್ಲಿಯೇ ಬೆಂಕಿ ಹಚ್ಚಿ ಬಿಡುವ ಕಾರಣ ಗೋಡೆಗಳು ಮಸಿ ಹಿಡಿದಿವೆ. ಕಸಗುಡಿಸುವ ಮಹಿಳೆಯರು ನಿತ್ಯ ಒಂದು ಕಡೆ ಕಾಗದ ಸಂಗ್ರಹಿಸಿ ಇಡುತ್ತಾರೆ. ಆದರೆ ಸಿಪಾಯಿಗಳು ಕಚೇರಿಯೊಳಗಿನ ಕಸವನ್ನು ತಂದು ಆವರಣದಲ್ಲಿ ಚೆಲ್ಲುವುದನ್ನು ನಿಲ್ಲಿಸಿಲ್ಲ. ಕಚೇರಿಯ ಹಿಂಭಾಗಕ್ಕೆ ಬಂದರೆ ನೈಜ ದರ್ಶನವಾಗುತ್ತದೆ.
ಕಚೇರಿಯ ಬಲ ಭಾಗದಲ್ಲಿ ಗಿಡಗಂಟಿಗಳು, ಬಳ್ಳಿಗಳು ಬೆಳೆಯುತ್ತ ಮೇಲ್ಮಹಡಿ ವರೆಗೆ ಬಂದಿವೆ. ಕಿಟಕಿಯೊಳಗೆ ನುಗ್ಗ ತೊಡಗಿದರೂ ಅಧಿಕಾರಿಗಳು ನಮಗೂ ಅದಕ್ಕೂ ಏನು ಸಂಬಂಧವೇ ಇಲ್ಲ ಎನ್ನುವಂತೆ ಇದ್ದಾರೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ದೊಡ್ಡದಾದ ಪುರಾತನ ಬಾವಿ ಇದೆ. ಅದರಲ್ಲೂ ಅಪಾರ ಪ್ರಮಾಣದಲ್ಲಿ ಕಸ ಎಸೆಯಲಾಗಿದೆ.
ಎರಡು ವರ್ಷಗಳ ಹಿಂದೆ ಕಬ್ಬಿನ ಬಾಕಿ ಹಣ ಬಿಡುಗಡೆಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರೈತರು ದಿನವಡೀ ಧರಣಿ ನಡೆಸಿದ್ದರು. ಜಿಲ್ಲಾಧಿಕಾರಿಯಾಗಿದ್ದ ಅನುರಾಗ ತಿವಾರಿ ಅವರಿಗೆ ಕಚೇರಿಯಿಂದ ಹೊರಗೆ ಹೋಗುವುದು ಕಷ್ಟವಾಗಿ ಪರಿಣಮಿಸಿತ್ತು. ಕಚೇರಿ ಹಿಂಭಾಗದ ಬಾಗಿಲಿನಿಂದ ಹೊರಗೆ ಹೋಗುತ್ತಿದ್ದಾಗ ಅಲ್ಲಿ ಬಿದ್ದುಕೊಂಡಿದ್ದ ಅಪಾರ ಪ್ರಮಾಣದ ಕಸದ ರಾಶಿಯನ್ನು ಕಂಡು ಅವಕ್ಕಾಗಿದ್ದರು.
ಕಟ್ಟಡದ ಸುತ್ತ ಎದೆ ಮಟ್ಟದಲ್ಲಿ ಬೆಳೆದ ಗಿಡಗಂಟಿಗಳನ್ನು ತೆರವುಗೊಳಿಸಲು ಸೂಚನೆ ನೀಡಿದ್ದರು. ನಂತರ ಹಿಂಬದಿಯ ರಸ್ತೆಯನ್ನು ಸ್ವಚ್ಛಗೊಳಿಸಿ ವಾಹನ ಬಂದು ಹೋಗುವಂತೆ ಮಾಡಲಾಗಿತ್ತು. ಇದಾದ ನಂತರ ಭಗತ್‌ಸಿಂಗ್ ಯೂಥ್ ಬ್ರಿಗೇಡ್‌ನ 22 ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿನ ಕಸವನ್ನು ವಿಲೇವಾರಿ ಮಾಡಿದ್ದರು.
ಕಚೇರಿಯ ಸಿಬ್ಬಂದಿ ಇಲ್ಲಿ ಕಸ ಎಸೆಯುವುದನ್ನು ನಿಲ್ಲಿಸಿಲ್ಲ. ಆವರಣ ಈಗ ಮತ್ತೆ ಹಿಂದಿನ ಸ್ಥಿತಿಗೆ ಬಂದು ತಲುಪಿದೆ. ಕೆಲವರು ಹಿಂಬದಿಯ ಗೋಡೆಗೆ ಹಾಗೂ ಇನ್ನು ಕೆಲವರು ಸೈಕಲ್ ಸ್ಟ್ಯಾಂಡ್ ಬಳಿ ಗೋಡೆಗೆ ಮೂತ್ರ ವಿಸರ್ಜನೆ ಮಾಡುವುದನ್ನು ರೂಢಿಸಿಕೊಂಡಿದ್ದಾರೆ.
ಬೀದರ್ ಜಿಲ್ಲೆಗೆ ವಾಸ್ತುಶಿಲ್ಪ ಹಾಗೂ ಕಟ್ಟಡ ನಿರ್ಮಾಣ ಕೌಶಲ ಹೊಸದಲ್ಲ. 500 ವರ್ಷಗಳ ಹಿಂದಿನ ಕಟ್ಟಡಗಳು ಇಂದಿಗೂ ನಗರದಲ್ಲಿ ಇವೆ. ಆದರೆ, ಕೇವಲ 25 ವರ್ಷಗಳ ಹಿಂದೆ ನಿರ್ಮಿಸಿದ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ದುರ್ಬಲಗೊಳ್ಳುತ್ತಿದೆ ಎನ್ನುವುದು ಶೋಚನೀಯ.
ಜಿಲ್ಲಾಧಿಕಾರಿ ಕಚೇರಿಯಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಕೊಠಡಿ ಕಡೆಗೆ ಹೋಗುವ ಮಾರ್ಗದಲ್ಲಿ ಆಗಲೇ ಕಿಟಕಿಯ ಛಾವಣಿ ಕಳಚಿ ಬಿದ್ದಿದೆ. ಕಚೇರಿ ಒಳಗೆ ಸಿಬ್ಬಂದಿ ಕೂರುವ ಸ್ಥಳದಲ್ಲಿನ ಛಾವಣಿ ಸಹ ಕಳಚಿ ಬೀಳಲಾರಂಭಿಸಿದೆ. ಮಳೆಗಾಲದಲ್ಲಿ ಹನಿ ಹನಿಯಾಗಿ ನೀರು ಜಿನುಗುತ್ತಿರುತ್ತದೆ.
ಜಿಲ್ಲಾಧಿಕಾರಿ ಕಚೇರಿಗೆ ನಿತ್ಯ ನೂರಾರು ಜನ ಬಂದು ಹೋಗುತ್ತಾರೆ. ಆದರೆ, ಆವರಣದಲ್ಲಿ ಶೌಚಾಲಯವೇ ಇಲ್ಲ. ಕಟ್ಟಡದ ಮೇಲ್ಮಹಡಿಯಲ್ಲಿ ಒಂದು ಶೌಚಾಲಯ ಇದ್ದರೂ ಅದು ಸ್ವಚ್ಛವಾಗಿಲ್ಲ. ಶೌಚಾಲಯದ ನೀರು ಆವರಣದ ಹೊರಗೆ ಹರಿದು ಬರುತ್ತದೆ. ಕಟ್ಟಡ ಅನೇಕ ವರ್ಷಗಳಿಂದ ಸುಣ್ಣಬಣ್ಣ ಕಂಡಿಲ್ಲ. ಕಟ್ಟಡ ಅಂದ ಕಳೆದುಕೊಂಡಿದ್ದು, ಜಿಲ್ಲೆಯ ಶಕ್ತಿ ಸೌಧ ಕಳೆಗುಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.