ಬೀದರ್: ‘ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆದ ಕೇಂದ್ರ ಸಚಿವ ಭಗವಂತ ಖೂಬಾ ಅವರು ಅಕ್ರಮ ಗಣಿಗಾರಿಕೆ ನಡೆಸಿರುವುದಕ್ಕೆ ₹25.28 ಕೋಟಿ ದಂಡ ಪಾವತಿಸುವಂತೆ ಕಲಬುರಗಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೋಟಿಸ್ ನೀಡಿದೆ. ಹೀಗಿದ್ದರೂ ತಮ್ಮ ಅಫಿಡವಿಟ್‌ನಲ್ಲಿ ವಿಷಯ ಮುಚ್ಚಿಟ್ಟಿದ್ದಾರೆ. ಇದರ ವಿರುದ್ಧ ಚುನಾವಣಾ ಆಯೋಗಕ್ಕೆ ತಕರಾರು ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ’ ಎಂದು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.
ಖೂಬಾ ಅವರು ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ವಚ್ಚಾ ಗ್ರಾಮದ ಸರ್ವೇ ನಂ. 24/4ರ 2 ಎಕರೆ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಗೆ 5 ವರ್ಷಗಳ ಅವಧಿಗೆ ಅನುಮತಿ ಪಡೆದುಕೊಂಡಿದ್ದರು. ಆದರೆ, ಸರ್ವೇ ನಂ.24/2, 24/3, 24/5, 24/7, 24/8, 24/10, 24/5/1, 25/1 ರಲ್ಲಿ ಒಟ್ಟು 8 ಎಕರೆಗಿಂತ ಹೆಚ್ಚಿನ ಜಮೀನಿನಲ್ಲಿ ಕಾನೂನುಬಾಹಿರವಾಗಿ ಅಕ್ರಮವಾಗಿ ಗಣಿಗಾರಿಕೆ ನಡೆಸಿ ಕಲ್ಲುಗಳನ್ನು ಅಕ್ರಮವಾಗಿ ಸಾಗಣೆ ಮಾಡಿರುತ್ತಾರೆ ಎಂದು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಖೂಬಾ ಅವರು ಲೋಕಸಭಾ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದ ಹಿಂದಿನ ದಿನ (ಏಪ್ರಿಲ್ 18, 2024) ನೋಟಿಸ್ ನೀಡಲಾಗಿದೆ. ಆದರೆ, ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ.
ಕಲ್ಲು ಗಣಿ ಗುತ್ತಿಗೆಯಲ್ಲಿ ಅಕ್ರಮ ಎಸಗಿದಕ್ಕಾಗಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ( 2023ರ ಜುಲೈ 1) ಖೂಬಾ ಅವರಿಗೆ ₹77.49 ಲಕ್ಷ ಬಾಕಿ ಪಾವತಿಸುವಂತೆ ಗಣಿ ಇಲಾಖೆ ನೋಟಿಸ್ ನೀಡಿತ್ತು. ಆದರೆ, ಅಫಿಡವಿಟ್‌ನಲ್ಲಿ ₹54 ಲಕ್ಷ ಸಾಲ ಇದೆ ಎಂದು ತೋರಿಸಿದ್ದಾರೆ. ಇದಕ್ಕೆಲ್ಲ ನನ್ನ ಬಳಿ ದಾಖಲೆಗಳಿವೆ. ಗಾಳಿಯಲ್ಲಿ ಮಾತನಾಡುತ್ತಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.