ಬೀದರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಯುವ ನಾಯಕ ಸಾಗರ್ ಖಂಡ್ರೆ ಅವರು ಸ್ಪರ್ಧೆ ಮಾಡಿದ ಮೊದಲ ಚುನಾವಣೆಯಲ್ಲೇ ಗೆಲುವಿನ ನಗೆ ಬೀರಿದ್ದಾರೆ. ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ಸೋಲಿಸಿ, ಸಂಸತ್ ಪ್ರವೇಶಿಸಿದ್ದಾರೆ. ರಾಜ್ಯದ ಅತಿ ಕಿರಿಯ ಸಂಸದನೆಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಸಾಗರ್ ಖಂಡ್ರೆ ಅವರು ಚುನಾವಣೆ ಗೆದ್ದಾಯ್ತು. ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅವರ ಮುಂದಿನ ಯೋಜನೆಗಳೇನು? ಈ ಕುರಿತು ‘ಪ್ರಜಾವಾಣಿ’ ಬೀದರ್ ಜಿಲ್ಲಾ ಹಿರಿಯ ವರದಿಗಾರ ಶಶಿಕಾಂತ ಎಸ್. ಶೆಂಬೆಳ್ಳಿ ಅವರೊಂದಿಗೆ ಮಾತನಾಡಿದ್ದಾರೆ. ಅದರ ವಿವರ ಇಲ್ಲಿದೆ.
ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲೇ ಮತದಾರರು ನಿಮಗೆ ಆಶೀರ್ವದಿಸಿದ್ದಾರೆ. ಮತದಾರರಿಗೆ ಏನು ಹೇಳುವಿರಿ?
ನನ್ನ ಮೇಲೆ ಭರವಸೆ ಇಟ್ಟು ದೊಡ್ಡ ಅಂತರದಿಂದ ಗೆಲ್ಲಿಸಿರುವ ಬೀದರ್ ಲೋಕಸಭಾ ಕ್ಷೇತ್ರದ ಮತದಾರ ಪ್ರಭುಗಳಿಗೆ ಕೃತಜ್ಞತೆ ಹೇಳಲು ಬಯಸುತ್ತೇನೆ. ಅವರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಲು ಪ್ರಯತ್ನಿಸುತ್ತೇನೆ. ಅವರು ನನ್ನ ಕೈ ಹಿಡಿದಿದ್ದಾರೆ. ನಾನು ಅವರ ಕೈಗಳನ್ನು ಹಿಡಿಯುತ್ತೇನೆ.
ನಿಮ್ಮ ಗೆಲುವಿನಲ್ಲಿ ಯಾವ ವಿಷಯ ಪ್ರಮುಖ ಪಾತ್ರ ವಹಿಸಿದೆ ಎಂದು ನಿಮಗೆ ಅನಿಸುತ್ತೆ?
ಯಾವುದೇ ಒಂದು ನಿರ್ದಿಷ್ಟ ವಿಷಯ ಎಂದು ಹೇಳಲಿಕ್ಕಾಗದು. ಅನೇಕ ಸಂಗತಿಗಳು ಕೆಲಸ ಮಾಡಿವೆ. ನಮ್ಮ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಒಂದೇ ಮನಸ್ಸಿನಿಂದ ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರ ಅನೇಕ ಉತ್ತಮ ಕೆಲಸಗಳನ್ನು ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ನಮ್ಮ ತಂದೆ ಕೂಡ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಮೇಲಿಂದ ಜನ ಕ್ಷೇತ್ರದಲ್ಲಿ ಬದಲಾವಣೆ ಬಯಸಿದ್ದರು. ಈ ಎಲ್ಲ ಸಂಗತಿಗಳು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಮಾಜಿ ಕೇಂದ್ರಸಚಿವ ಭಗವಂತ ಖೂಬಾ ವಿರುದ್ಧ ಚುನಾವಣೆಯಲ್ಲಿ ದೊಡ್ಡ ಅಂತರದಿಂದ ಗೆದ್ದಿದ್ದೀರಿ. ಈ ರೀತಿಯ ಫಲಿತಾಂಶದ ನಿರೀಕ್ಷೆ ಇತ್ತಾ?
ಖಂಡಿತವಾಗಿಯೂ ನಿರೀಕ್ಷೆ ಇತ್ತು. ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಎಲ್ಲ ಕಡೆಗಳಲ್ಲಿ ಭೇಟಿ ಕೊಟ್ಟಾಗ ಈ ವಿಷಯ ಅರಿವಿಗೆ ಬಂತು. ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಎಲ್ಲ ಪಂಚಾಯಿತಿಗಳಿಗೆ ಭೇಟಿ ಕೊಟ್ಟಾಗ ಈ ಸಲ ಬದಲಾವಣೆ ಬಯಸುತ್ತಿದ್ದೇವೆ, ಹೊಸಬರಿಗೆ ಅವಕಾಶ ಮಾಡಿಕೊಡುತ್ತೇವೆ ಎಂದು ಹೇಳುತ್ತಿದ್ದರು. ಎಲ್ಲಿಗೆ ಹೋದರೂ ಜನ ಒಳ್ಳೆಯ ರೀತಿಯಿಂದ ಸ್ವಾಗತಿಸಿ, ನೂರಕ್ಕೆ ನೂರು ನೀವೇ ದೊಡ್ಡ ಅಂತರದಿಂದ ಗೆಲ್ಲುತ್ತೀರಿ ಎನ್ನುತ್ತಿದ್ದರು. ಅದೀಗ ನಿಜವಾಗಿದೆ.
ಬೀದರ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಶಾಸಕರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಗಳಲ್ಲೇ ದೊಡ್ಡ ಹೆಚ್ಚಿನ ಮತಗಳ ಲೀಡ್ ಸಿಕ್ಕಿದೆ. ಅದರ ಬಗ್ಗೆ ಏನಂತಿರಿ?
ಎಲ್ಲ ಕಡೆಗಳಲ್ಲಿಯೂ ನಮ್ಮ ಪಕ್ಷಕ್ಕೆ ಲೀಡ್ ಸಿಕ್ಕಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹುಮನಾಬಾದ್ ಕ್ಷೇತ್ರದಲ್ಲಿ ನಮ್ಮ ಪಕ್ಷದ ಮುಖಂಡರಾದ ರಾಜಶೇಖರ ಪಾಟೀಲ ಅವರು ಬಹಳ ಕಡಿಮೆ ಮತಗಳ ಅಂತರದಿಂದ ಸೋಲು ಕಂಡಿದ್ದರು. ಅದೇ ರೀತಿ ಬೀದರ್ ದಕ್ಷಿಣದಲ್ಲೂ ಆಗಿತ್ತು. ನಮ್ಮ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಪಕ್ಷದ ಗೆಲುವಿಗೆ ಅವಿರತ ಶ್ರಮಿಸಿರುವುದರಿಂದ ಎಲ್ಲ ಕಡೆಗಳಲ್ಲಿಯೂ ಲೀಡ್ ಸಿಗಲು ಮುಖ್ಯ ಕಾರಣ.
ಮುಂದೆ ಕ್ಷೇತ್ರದಲ್ಲಿ ಏನೇನು ಮಾಡಬೇಕೆಂಬ ಯೋಜನೆಗಳಿವೆ?
ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ಜಾಸ್ತಿ ಇದೆ. ಯುವಕರಿಗೆ ಉತ್ತಮ ಕೌಶಲ ತರಬೇತಿ ಕೊಡಿಸಿ ಅವರಿಗೆ ಉದ್ಯೋಗಗಳನ್ನು ಒದಗಿಸಿಕೊಡುವುದು ಮೊದಲ ಆದ್ಯತೆಯಾಗಿದೆ. ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆಯೋ ಅಲ್ಲಿಗೆ ಖುದ್ದು ಭೇಟಿ ನೀಡಿ ಬಗೆಹರಿಸುವೆ. ರೈತರಿಗೆ ಬೆಳೆ ಪರಿಹಾರ ಸಿಗುತ್ತಿಲ್ಲ ಎಂಬ ದೂರುಗಳಿವೆ. ರೈತರೊಂದಿಗೆ ಏನಾಗುತ್ತಿದೆ ಎಂಬುದನ್ನು ಪರಿಶೀಲಿಸಿ ಅದನ್ನು ಸರಿಪಡಿಸುವೆ. ರೈತರಿಗೆ ಸಕಾಲಕ್ಕೆ ಪರಿಹಾರ ಕೊಡಿಸಲು ಪ್ರಯತ್ನಿಸುವೆ. ಸ್ಥಳೀಯವಾಗಿ ಸಾಕಷ್ಟು ಸಮಸ್ಯೆಗಳಿವೆ. ಬ್ರಿಜ್ ಕಂ ಬ್ಯಾರೇಜ್, ಕೆಲವೆಡೆ ರೈಲ್ವೆ ಅಂಡರ್‌ಪಾಸ್ ಬೇಕಿದೆ. ತಾಲ್ಲೂಕು ಚಿಂಚೋಳಿಯಲ್ಲಿ ಅರಣ್ಯ ಸಮಸ್ಯೆ ಇದೆ. ಬರುವ ದಿನಗಳಲ್ಲಿ ಒಂದಾದ ನಂತರ ಒಂದು ಸಮಸ್ಯೆ ಬಗೆಹರಿಸುವೆ.
ಬೀದರ್‌ನಿಂದ ರಾಜಧಾನಿ ಬೆಂಗಳೂರಿಗೆ ಸರಿಸುಮಾರು 700 ಕಿ.ಮೀ ದೂರದಲ್ಲಿದೆ. ಏಕೈಕ ನಾಗರಿಕ ವಿಮಾನಯಾನ ಸೇವೆ ರದ್ದಾಗಿದೆ. ತುರ್ತಾಗಿ ಬೆಂಗಳೂರಿಗೆ ಹೋಗಬೇಕೆನ್ನುವವರಿಗೆ ಇದ್ದ ಏಕಮಾತ್ರ ಸೇವೆಯೂ ಈಗಿಲ್ಲ. ಅದರ ಬಗ್ಗೆ ಏನು ಹೇಳುವಿರಿ?
ಬೀದರ್–ಬೆಂಗಳೂರು ವಿಮಾನ ಸೇವೆ ರದ್ದಾಗಿರುವ ವಿಷಯ ನನ್ನ ಗಮನಕ್ಕಿದೆ. ಈ ಹಿಂದೆ ಉಡಾನ್ ಯೋಜನೆಯಡಿ ವಿಮಾನ ಸೇವೆ ಆರಂಭಗೊಂಡಿತ್ತು. ಈಗ ಪುನಃ ಆ ಸೇವೆ ಆರಂಭಿಸಲು ಎಲ್ಲ ರೀತಿಯಲ್ಲೂ ಪ್ರಯತ್ನ ಮಾಡುತ್ತೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.