ಬೀದರ್: ಜಿಲ್ಲೆಯ 635 ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಲ್ಲಿದ್ದ 3,068 ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ಹಾಗೂ ವಲಸೆ ಕಾರ್ಮಿಕರ ಪೈಕಿ ಶುಕ್ರವಾರ 2,648 ಜನರನ್ನು ಬಿಡುಗಡೆ ಮಾಡಲಾಗಿದೆ. ಒಂದೇ ದಿನ 2,801 ಜನರ ಗಂಟಲು ದ್ರವ ಮಾದರಿ ಪಡೆಯಲಾಗಿದೆ.
ಇಲ್ಲಿಯವರೆಗೆ 6,916 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ನಿಂದ ಬಿಡುಗಡೆ ಮಾಡಲಾಗಿದೆ. ಕೋವಿಡ್ 19 ಸೋಂಕು ದೃಢಪಟ್ಟ ಬಸವಕಲ್ಯಾಣ ತಾಲ್ಲೂಕಿನ ಕೊಹಿನೂರ, ಉಜಳಂಬ, ಬಟಗೇರಾ, ಶಿರಗೂರ, ಲಾಡವಂತಿ, ಹತ್ತ್ಯಾಳ, ಮಂಠಾಳ, ಧನ್ನೂರ ಕಂಟೇನ್ಮೆಂಟ್ ಝೋನ್‌ಗಳಲ್ಲಿ ತಪಾಸಣೆ ಜಾರಿಯಲ್ಲಿದೆ.
ಭಾಲ್ಕಿ, ಹುಮನಾಬಾದ್ ಹಾಗೂ ಬೀದರ್‌ನ ಸಾಂಸ್ಥಿಕ ಸಂಸ್ಥೆಯಲ್ಲಿ ಕ್ವಾರಂಟೈನ್‌ನಲ್ಲಿರುವವರ ಬಿಡುಗಡೆಗೆ ಸಿದ್ಧತೆ ಮಾಡಲಾಗಿದೆ. ತಬ್ಲಿಗಿಗಳ ಬಿಡುಗಡೆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ನಂತರದಲ್ಲಿ ಬಿಡುಗಡೆಯಾದವರ ಸರಿಯಾದ ಮಾಹಿತಿಯನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಪತ್ರಿಕೆಗಳಿಗೆ ಒದಗಿಸಿಲ್ಲ.
ನಗರದ ಶಹಾಪುರ ಗೇಟ್ ಸಮೀಪದ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದವರಿಗೆ ಮಾತ್ರ ಸರಿಯಾದ ಸೌಲಭ್ಯಗಳು ದೊರೆತಿವೆ. ಸರ್ಕಾರಿ ಶಾಲೆಗಳಲ್ಲಿ ಆರಂಭಿಸಿದ ಕ್ವಾರಂಟೈನ್ ಕೇಂದ್ರಗಳಲ್ಲಿರುವ ವಲಸೆ ಕಾರ್ಮಿಕರಿಗೆ ಸರಿಯಾದ ಸೌಕರ್ಯಗಳು ದೊರೆತಿಲ್ಲ. ಕುಡಿಯುವ ನೀರು ಹಾಗೂ ಆಹಾರದ ಸಮಸ್ಯೆಯಿಂದ ಅನೇಕರು ನಿತ್ಯ ಮನೆಗಳಿಗೆ ತೆರಳಿ ಮತ್ತೆ ಕ್ವಾರಂಟೈನ್ ಕೇಂದ್ರಗಳಿಗೆ ಬಂದ ಉದಾಹರಣೆಗಳು ಅನೇಕ ಇವೆ.
ಆರೋಗ್ಯ ತಪಾಸಣೆ ಪೂರ್ಣಗೊಂಡಿರುವ ಹಾಗೂ 7 ದಿನ ಕ್ವಾರಂಟೈನ್ ಪೊರೈಸಿದ ಹುಲಸೂರಿನ 140, ಸೋಲದಾಬಕಾದ 40, ಚಿಟ್ಟಾ ಹಾಗೂ ಹಂದ್ರಾಳದ 40 ಹಾಗೂ ಬಸವಕಲ್ಯಾಣದ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಇರುವ ಮುಡಬಿ ಹೋಬಳಿಯ 130 ಜನರನ್ನು ಮನೆಗಳಿಗೆ ಕಳಿಸಿಕೊಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿ.ಜಿ.ರೆಡ್ಡಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 23 ಕಂಟೇನ್ಮೆಂಟ್ ಝೋನ್‌ಗಳನ್ನು ಮಾಡಲಾಗಿದೆ. ಈವರೆಗೆ ಮೂವರು ಕೋವಿಡ್ 19 ಸೋಂಕಿನಿಂದ ಮೃತಪಟ್ಟಿದ್ದಾರೆ. ಜಿಲ್ಲಾ ಆಸ್ಪತ್ರೆಯ ವಿಶೇಷ ನಿಗಾ ಘಟಕದಲ್ಲಿದ್ದ 24 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 67 ಜನ ವಿಶೇಷ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
23,960 ಜನರ ತಪಾಸಣೆ ನಡೆಸಲಾಗಿದೆ. 1,316 ಜನರು ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದಾರೆ. ಇನ್ನೂ 8,694 ಜನರ ವೈದ್ಯಕೀಯ ವರದಿ ಬರಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.