ಹುಲಸೂರ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲು ಇಲ್ಲಸಿರುವುದರಿಂದ ಒಂದೇ ಬೈಕ್‌ನಲ್ಲಿ ಮೂವರು ಪ್ರಯಾಣ ಮಾಡುವುದು ಸಾಮಾನ್ಯವಾಗಿದೆ. ಕಡಿವಾಣ ಹಾಕಬೇಕಾದ ಇಲಾಖೆಗಳು ಕಣ್ಮುಚ್ಚಿ ಕುಳಿತಿದ್ದು ಇತರ ಸವಾರರಿಗೆ ತಲೆನೋವಾಗಿ ಪರಿಣಮಿಸಿದೆ.
ತಾಲ್ಲೂಕಿನಲ್ಲಿ ಆರು ಪಂಚಾಯಿತಿಗಳಿದ್ದರೂ ಸಂಚಾರ ಪೊಲೀಸ್ ಠಾಣೆ ಇಲ್ಲ. ಪಟ್ಟಣ ಪ್ರದೇಶಗಳಲ್ಲಿ ಮೂವರು ಒಂದೇ ಬೈಕ್‌ನಲ್ಲಿ ತಿರುಗಾಡುವುದು ತೀರಾ ಸಾಮಾನ್ಯ ವಿಷಯವಾಗಿದೆ. ಇದರಿಂದ ಅಪಘಾತಗಳು ಸಂಭವಿಸಿ ಜೀವಕ್ಕೆ ಅಪಾಯ ಇರುವ ಪ್ರಕರಣಗಳು ನಡೆಯುತ್ತಿವೆ.
ಹುಲಸೂರ ಪಟ್ಟಣ ದಿನೇ ದಿನೇ ಅಭಿವೃದ್ಧಿ ಹೊಂದುತ್ತಿದೆ. ವ್ಯಾಪಾರ, ವಹಿವಾಟು ಹೆಚ್ಚುತ್ತಿದೆ. ಜನಸಂಖ್ಯೆಯೂ ಬೆಳೆಯುತ್ತಿದೆ. ಒಂದೊಂದು ಕುಟುಂಬದಲ್ಲಿ ಎರಡು ಮೂರು ಬೈಕ್ ಇವೆ. ಕಾರುಗಳ ಸಂಖ್ಯೆಗೇನೂ ಕಡಿಮೆ ಇಲ್ಲ. ಗಡಿಭಾಗಕ್ಕೆ ಸಮೀಪದಲ್ಲಿರುವುದರಿಂದ ಬರುವ ವಾಹನಗಳ ಸಂಖ್ಯೆಯೂ ಅಧಿಕವಾಗಿದೆ.
ತಾಲ್ಲೂಕು ಕೇಂದ್ರವಾಗಿ ಹಲವಾರು ವರ್ಷಗಳು ಕಳೆದರೂ ಇಂದಿಗೂ ಪಟ್ಟಣದಲ್ಲಿ ಎಲ್ಲಿಯೂ ಮುಖ್ಯರಸ್ತೆಗಳಲ್ಲಿ ಸಿಸಿ ಟಿವಿ ಕ್ಯಾಮೆರಾ, ಸಿಗ್ನಲ್ ಲೈಟ್ ಅಳವಡಿಸಿಲ್ಲ. ಈ ಕುರಿತು ಗ್ರಾಮ ಪಂಚಾಯಿತಿ, ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಕ್ರಮ ಕೈಗೊಳ್ಳಬೇಕಿದೆ.
ತಾಲ್ಲೂಕಿಗೆ ಸುತ್ತ ಮುತ್ತಲಿನ ಗ್ರಾಮದ ಜನರು ವ್ಯಾಪಾರಕ್ಕಾಗಿ, ಬ್ಯಾಂಕ್ ಕೆಲಸ, ವೈಯಕ್ತಿಕ ಕೆಲಸಕ್ಕಾಗಿ ಬಂದು ವಾಹನಗಳು ಎಲ್ಲೆಂದರಲ್ಲಿ ಪಾರ್ಕ್ ಮಾಡುತ್ತಿರುವುದರಿಂದ ಪ್ರಯಾಣಿಕರು ಸರ್ಕಾರಿ ಬಸ್ ಏರಲು ತೊಂದರೆ ಉಂಟಾಗುತ್ತಿದ್ದು ಪ್ರಮುಖ ವೃತ್ತ, ರಸ್ತೆಗಳು ಇಕ್ಕಟ್ಟಾಗಿದ್ದರಿಂದ ಸಂಚಾರಕ್ಕೆ ಬಿಕ್ಕಟ್ಟು ಎದುರಿಸುವಂತಾಗಿದೆ.
ಹೆಲೈಟ್ ಬಳಕೆ ಇಲ್ಲ: ಟ್ರಿಪಲ್ ರೈಡಿಂಗ್ ಸಾಕಷ್ಟು ಅಪಾಯಕಾರಿ. ಅದರೊಂದಿಗೆ ಸವಾರರು ಹೆಲೈಟ್ ಧರಿಸದೇ ಇರುವುದರಿಂದ ಅಪಘಾತಗಳು ಮತ್ತು ಯಾವುದೇ ರೀತಿಯ ಅನಿರೀಕ್ಷಿತ ಘಟನೆಗಳು ಸಂಭವಿಸಬಹುದು.
ಒಂದೇ ಬೈಕ್‌ನಲ್ಲಿ ಮೂವರು ಪ್ರಯಾಣ ಮಾಡುವುದು ಒಂದು ಕಡೆಯಾದರೆ, ಹೆಲೈಟ್ ಬಳಕೆ ಬಗ್ಗೆ ಜಾಗೃತಿ ಇದ್ದರೂ ಬಳಕೆ ಇಲ್ಲ. ಇದರಿಂದ ಪಟ್ಟಣ, ಗ್ರಾಮೀಣ ಕ್ರಾಸ್‌ಗಳಲ್ಲಿ ಅಪಘಾತ ಉಂಟಾಗಿ ಸಣ್ಣಪುಟ್ಟ ಜಗಳ ಇತ್ಯಾದಿ ನಡೆಯುತ್ತಿವೆ. ಅದನ್ನೂ ತಡೆಯಬೇಕು ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ವಿಚಿತ್ರ ಬೈಕ್ ಸೌಂಡ್ ಕಿರಿಕಿರಿ: ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಬೈಕ್ ಸವಾರರು ವಿಚಿತ್ರ ಶಬ್ದ ಮಾಡುವ ಮೂಲಕ ದಾರಿ ಹೋಕರಿಗೆ ಭಯ ಉಂಟು ಮಾಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಅಡ್ಡಾದಿಡ್ಡಿ ಬೈಕ್ ಚಾಲನೆ ಮಾಡಿಕೊಂಡು ಹೋಗುವುದು ಸಾಮಾನ್ಯವಾಗಿದೆ.
ಸಿಸಿ ಟಿವಿ ಕ್ಯಾಮೆರಾ ಪೊಲೀಸರಿಗೆ ಅನುಕೂಲ: ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆಯಿಂದ ಗಲಭೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬಹುದು. ಇದು ಪೊಲೀಸರ ಕೆಲಸಕ್ಕೆ ಅನುಕೂಲವಾಗಲಿದೆ.ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಯಾವುದೇ ಘಟನೆಗಳ ಕುರಿತು ಮಾಹಿತಿ ಸಂಗ್ರಹವಾಗಲಿದ್ದು, ಕ್ಯಾಮರಾ ಆಧಾರದ ಮೇಲೆ ಪ್ರಕರಣಗಳನ್ನು ಶೀಘ್ರ ಬೇಧಿಸಲು ಸಹಾಯವಾಗಲಿದೆ.
ಪಟ್ಟಣದ ಬೆಳಿಗ್ಗೆ ಮತ್ತು ಸಂಜೆ ವೇಳೆ ಗಾಂಧಿ ವೃತ್ತ, ಶಿವಾಜಿ ವೃತ, ಡಿಸಿಸಿ ಬ್ಯಾಂಕ್, ಎಸಬಿಐ ಬ್ಯಾಂಕ್ ಸೇರಿ ತಹಶೀಲ್ದಾರ್ ಕಚೇರಿ ಬಳಿ ವಾಹನ ದಟ್ಟಣೆ ಇರುತ್ತದೆ. ಸಿಸಿಟಿವಿ ಕ್ಯಾಮೆರಾ ಅಳವಡಿಸದ ಕಾರಣ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕು ಸೇರಿ ಗ್ರಾಮೀಣ ಭಾಗದಲ್ಲಿ ಒಂದೇ ಬೈಕ್‌ನಲ್ಲಿ ಮೂವರು ಪ್ರಯಾಣ ಮಾಡುವುದರ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲಾಗುವುದು. ಅಪ್ರಾಪ್ತ ಮಕ್ಕಳು ಬೈಕ್ ಓಡಿಸಿದರೆ ದಂಡ ವಿಧಿಸಲಾಗುವುದು
- ಶಿವಪ್ಪ ಮೇಟಿ ಪಿಎಸ್ಐ ಹುಲಸೂರ
ನಗರ ಪ್ರದೇಶಗಳಲ್ಲಿ ಒಂದೇ ಬೈಕ್‌ನಲ್ಲಿ ಮೂವರು ಪ್ರಯಾಣ ಮಾಡುವುದು ಸಾಮಾನ್ಯವಾಗಿದ್ದು ಸ್ಥಳಿಯ ಪೊಲೀಸರು ಸಂಚಾರ ಪೊಲೀಸರು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಸೂಕ್ತ ಕಡಿವಾಣ ಹಾಕಬೇಕು
-ಸುಧೀರ ಕಾಡಾದಿ ಮುಖಂಡ
ಈಗಾಗಲೇ ಗಡಿಗೌಡಗಾಂವ ಗ್ರಾಮ ಪಂಚಾಯಿತಿನಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದ್ದು ಇನ್ನು ಉಳಿದ ಗ್ರಾಮ ಪಂಚಾಯಿತಿಗಳಲ್ಲಿ ಅಳವಡಿಸಲು ಪಿಡಿಒ ಅವರಿಗೆ ಸೂಚಿಸುತ್ತೇನೆ
-ವೈಜಿನಾಥ ಫುಲೆ ತಾ.ಪಂ ಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.