ಬೀದರ್: ಬೀದರ್ ಉತ್ಸವದ ಅಂಗವಾಗಿ ನಗರದಲ್ಲಿ ಸೋಮವಾರ ನಡೆದ ಮಹಿಳಾ ನಡಿಗೆ ಅಕ್ಷರಶಃ ಸರ್ಕಾರಿ ಮಹಿಳಾ ನೌಕರರು ಹಾಗೂ ಪುರುಷ ಅಧಿಕಾರಿಗಳ ಪತ್ನಿಯರ ಜಾತ್ರೆಯಾಗಿ ಮಾರ್ಪಟ್ಟಿತ್ತು. ಜಿಲ್ಲೆಯ ಜನರಿಂದ ಹಣ ಸಂಗ್ರಹಿಸಿದರೂ ಮಾಧ್ಯಮಗಳು ಸೇರಿದಂತೆ ಯಾರಿಗೂ ಆಮಂತ್ರಣ ಪತ್ರಿಕೆ ನೀಡಿರಲಿಲ್ಲ. ಜನ ಪ್ರತಿನಿಧಿಗಳಿಗೂ ಇಲ್ಲಿ ಕವಡೆ ಕಾಸಿನ ಬೆಲೆ ಇರಲಿಲ್ಲ.
ಉತ್ಸವ ಹೊಸ್ತಿಲಲ್ಲಿ ಇದ್ದರೂ ಜಿಲ್ಲಾ ಆಡಳಿತ ಸ್ವಾಗತ ಸಮಿತಿಯನ್ನೇ ರಚಿಸಿಲ್ಲ. ಮೇಲಾಗಿ ಉಪ ಸಮಿತಿಗಳನ್ನು ರಚಿಸಿದರೂ, ಅದರಲ್ಲಿರುವ ಹೆಚ್ಚಿನವರು ಗೋಣು ಅಲ್ಲಾಡಿಸುವವರೇ ಆಗಿದ್ದಾರೆ. ಸಮಿತಿ ಸದಸ್ಯರನ್ನಾಗಿ ಮಾಡಿಕೊಂಡು ಅಧಿಕಾರಿಗಳು ದರ್ಬಾರು ನಡೆಸಿದ್ದಾರೆ. ಅಧಿಕಾರ ದುರ್ಬಳಕೆಯ ದರ್ಬಾರು ಅನಾವರಣಗೊಂಡರೂ ಜಿಲ್ಲೆಯಲ್ಲಿ ಕೇಳುವವರೇ ಇಲ್ಲ.
ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೆಲ್ ಪ್ರಶಸ್ತಿ ಪುರಸ್ಕೃರೆ ಲಕ್ಷ್ಮಿ ಮೇತ್ರೆ ಅವರನ್ನು ಮಹಿಳಾ ನಡಿಗೆಯ ಉದ್ಘಾಟಕರಾಗಿ ಆಹ್ವಾನಿಸಲಾಗಿತ್ತು. ಆದರೆ, ಅವರ ಕೈಗೆ ಒಂದು ಪೋಸ್ಟರ್ ಕೊಟ್ಟು ನಿಲ್ಲಿಸಲಾಗಿತ್ತು. ನಡಿಗೆಗೆ ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಹಾಗೂ ಹಿರಿಯ ಅಧಿಕಾರಿಗಳೇ ಪತ್ನಿಯರೇ ಡೊಳ್ಳು ಬಾರಿಸಿ ಚಾಲನೆ ನೀಡಿದರು.
ಸ್ಥಳೀಯ ಮಹಿಳೆಯರಿಗೆ ಕಾರ್ಯಕ್ರಮ ನಿರೂಪಣೆಗೂ ಅವಕಾಶ ಕೊಡಲಿಲ್ಲ. ಅಧಿಕಾರಿಗಳ ಮೇಲೆ ಒತ್ತಡ ಹಾಕಿದ ಕಾರಣ ಸ್ವಸಹಾಯ ಸಂಘಗಳ ಸದಸ್ಯೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತರು ನಡಿಗೆಯಲ್ಲಿ ಭಾಗವಹಿಸಿದ್ದರು.
ಜಿಲ್ಲಾಡಳಿತ ಮಾಧ್ಯಮಗಳಿಗೂ ಆಮಂತ್ರಣ ಪತ್ರಿಕೆ ಕೊಟ್ಟಿಲ್ಲ. ರಾತ್ರಿ 10 ಗಂಟೆಯ ನಂತರ ಒಂದು ಲೈನ್ ಚಿಕ್ಕ ಸಂದೇಶ ಕಳಿಸಿ ಕೈತೊಳೆದುಕೊಳ್ಳುತ್ತಿದೆ. ಮಹಿಳಾ ಉತ್ಸವಕ್ಕೂ ಇದೇ ರೀತಿಯ ಸಂದೇಶ ಕಳಿಸಲಾಗಿದೆ.
ಶಿಷ್ಟಾಚಾರದ ಭಾನಗಡಿಯೇ ಬೇಡವೆಂದು ಅಧಿಕಾರಿಗಳು ಒಮ್ಮತದ ನಿರ್ಧಾರ ತೆಗೆದುಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಆಮಂತ್ರಣ ಪತ್ರಿಕೆಯೂ ಇಲ್ಲ, ಚುನಾಯಿತ ಪ್ರತಿನಿಧಿಗಳ ಹೆಸರೂ ಇಲ್ಲ. ಇದು, ರಾಜಕಾರಣಿಗಳಲ್ಲೂ ಅಚ್ಚರಿ ಮೂಡಿಸಿದೆ.
‘ಹಿಂದೆ ನಡೆದ ಬೀದರ್ ಉತ್ಸವಗಳನ್ನು ನೋಡಿದ್ದೇನೆ. ಈ ಬಾರಿ ಆಮಂತ್ರಣ ಪತ್ರಿಕೆಯನ್ನೇ ಕೊಟ್ಟಿಲ್ಲ. ಯಾರು ಬರುತ್ತಿದ್ದಾರೆ ಏನೂ ಗೊತ್ತಾಗುತ್ತಿಲ್ಲ. ನನಗೆ ಫೋನ್ ಮಾಡಿ ಹೇಳಿದ ನಂತರ ಹೊರಟಿದ್ದೇನೆ. ಇದು ಅಧಿಕಾರಿಗಳ ಉತ್ಸವ ಆಗಬಾರದು. ಜನರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಉತ್ಸವ ಯಶಸ್ವಿಯಾಗಲು ಸಾಧ್ಯವಿದೆ. ಮಾಧ್ಯಮಗಳನ್ನು ದೂರ ಇಟ್ಟು ಜಿಲ್ಲಾಡಳಿತ ಕಾರ್ಯಕ್ರಮ ಮಾಡುತ್ತಿರುವುದು ಸರಿಯಲ್ಲ’ ಎಂದು ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಕಾಶೆಂಪುರ ಅಸಮಾಧಾನ ವ್ಯಕ್ತಪಡಿಸಿದರು.
‘ಮಹಿಳಾ ಉತ್ಸವ ಅಂದರೆ ಯಾವುದೋ ಒಂದು ಕುಟುಂಬದ ತೊಟ್ಟಿಲು ಕಾರ್ಯಕ್ರಮ ಅಲ್ಲ. ಎಲ್ಲ ಸಮುದಾಯದ ಮಹಿಳೆಯರಿಗೂ ಆಹ್ವಾನ ಕೊಡಬೇಕು. ಮಹಿಳಾ ನಡಿಗೆ ಕಾರ್ಯಕ್ರಮಕ್ಕೆ ಅಧಿಕಾರಿಗಳ ಪತ್ನಿಯರು ಹಾಗೂ ಸರ್ಕಾರಿ ಮಹಿಳಾ ನೌಕರರಿಗೆ ಮಾತ್ರ ಅವಕಾಶ ಕಲ್ಪಿಸಿರುವುದು ಖಂಡನೀಯ. ಜಿಲ್ಲೆಯ ಜನರಿಂದ ಹಣ ಸಂಗ್ರಹಿಸಿ ಹೊರಗಿನಿಂದ ಬಂದ ಅಧಿಕಾರಿಗಳು ಜಾತ್ರೆ ಮಾಡುತ್ತಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಹಿರಿಯ ಅಧಿಕಾರಿಗಳಿಂದಲೇ ಸರ್ಕಾರಿ ವಾಹನಗಳ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಉತ್ಸವಕ್ಕೆ ನಮ್ಮ ವಿರೋಧವಿಲ್ಲ. ಆದರೆ ಸ್ಥಳೀಯರನ್ನು ಕಡೆಗಣಿಸಿ ಗೋಪ್ಯ ಕಾರ್ಯಕ್ರಮ ಪಟ್ಟಿ ಸಿದ್ಧಪಡಿಸಿರುವುದಕ್ಕೆ ವಿರೋಧವಿದೆ. ಜನಪ್ರತಿನಿಧಿಗಳಿಗೂ ಆಮಂತ್ರಣ ಪತ್ರಿಕೆ ಕೊಟ್ಟಿಲ್ಲ. ರಾತ್ರಿ 10 ಗಂಟೆಯ ನಂತರ ಒಂದು ಲೈನ್ ಸಂದೇಶ ಕಳಿಸಿ ಅಧಿಕಾರಿಗಳು ಜನಪ್ರತಿನಿಧಿಗಳನ್ನು ಮರಳು ಮಾಡುತ್ತಿದ್ದಾರೆ’ ಎಂದು ದೂರಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಶಿಷ್ಟಾಚಾರದ ನೆಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿಗೆ ವೇದಿಕೆ ಮೇಲೆ ಅವಕಾಶ ಕೊಡಲಿಲ್ಲ. ಈಗ ಎಲ್ಲಿ ಹೋಯಿತು ಶಿಷ್ಟಾಚಾರ ಎಂದು ಪ್ರಶ್ನಿಸಿದ್ದಾರೆ.
‘ಜಿಲ್ಲೆಯ ಸ್ಥಳೀಯ ಮಹಿಳೆಯರನ್ನು ಕಡೆಗಣಿಸಿರುವುದು ಖಂಡನೀಯ. ಮಹಿಳಾ ನಡಿಗೆ ಕಾರ್ಯಕ್ರಮಕ್ಕೆ ಮಹಿಳಾ ಮಂಡಳಗಳು, ಸ್ತ್ರೀಶಕ್ತಿ ಗುಂಪುಗಳು ಹಾಗೂ ಮಹಿಳಾ ಸಂಘಟನೆಗಳಿಗೂ ಆಹ್ವಾನ ನೀಡಬೇಕಿತ್ತು. ಜಿಲ್ಲಾಡಳಿತ ಸರ್ಕಾರಿ ಮಹಿಳೆಯರ ಜಾತ್ರೆ ಮಾಡಿದೆ. ಅಧಿಕಾರಿಗಳು ಮನ ಬಂದಂತೆ ವರ್ತಿಸುತ್ತಿರುವುದು ಸರಿಯಲ್ಲ’ ಎಂದು ಜನವಾದಿ ಮಹಿಳಾ ಸಂಘಟನೆಯ ನಾಯಕಿ ಲಕ್ಷ್ಮಿ ಬಾವಗೆ ಹೇಳಿದ್ದಾರೆ.
ಕುಟುಂಬ ಸಮೇತರಾಗಿ ಪಾಲ್ಗೊಳ್ಳಿರಿ
'ಜನವರಿ 3, 4 ಮತ್ತು 5 ರಂದು ಝೀರಾ ಕನ್ವೆನ್ಶನ್ ಹಾಲ್‌ನಲ್ಲಿ ಮಹಿಳಾ ಉತ್ಸವ ಏರ್ಪಡಿಸಲಾಗಿದ್ದು, ಸಾರ್ವಜನಿಕರು ಕುಟುಂಬ ಸಮೇತರಾಗಿ ಭಾಗವಹಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಎಂ. ಹೇಳಿದರು.
ಬೀದರ್ ಉತ್ಸವದ ಪ್ರಯುಕ್ತ ಆಯೋಜಿಸಿದ್ದ ಮಹಿಳಾ ನಡಿಗೆ ಕಾರ್ಯಕ್ರಮಕ್ಕೆ ಡೊಳ್ಳು ಬಾರಿಸಿ ಚಾಲನೆ ನೀಡಿ ಮಾತನಾಡಿದರು. ‘ನಡಿಗೆಯಲ್ಲಿ ವಿವಿಧ ಸಂಘ-ಸಂಸ್ಥೆ ಮತ್ತು ಇಲಾಖೆಗಳ ಮಹಿಳೆಯರು ಭಾಗವಹಿಸಿರುವುದು ಕಂಡು ಸಂತೋಷವಾಗಿದೆ’ ಎಂದು ಹೇಳಿದರು.
ತಾಯಿ –ಮಗು ವೃತ್ತದಿಂದ ಆರಂಭವಾದ ನಡಿಗೆಯೂ ಕೇಂದ್ರ ಬಸ್ ನಿಲ್ದಾಣ, ಉದಗಿರ ರಸ್ತೆ, ಮಡಿವಾಳ ವೃತ್ತದ ಮಾರ್ಗವಾಗಿ ನೆಹರೂ ಕ್ರೀಡಾಂಗಣಕ್ಕೆ ಬಂದು ಮುಕ್ತಾಯಗೊಂಡಿತು.
ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೆಲ್ ಪ್ರಶಸ್ತಿ ಪುರಸ್ಕೃತ ಲಕ್ಷ್ಮಿ ಮೇತ್ರೆ ಅವರನ್ನು ಉದ್ಘಾಟಕರಾಗಿ ಆಹ್ವಾನಿಸಲಾಗಿತ್ತು. ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕಿ ಸುರೇಖಾ, ಜಿಲ್ಲಾ ಕೈಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಸುರೇಖಾ ಮುನೋಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಜಿಲ್ಲಾ ಸಂಖ್ಯಾ ಸಂಗ್ರಹಣಾ ಅಧಿಕಾರಿ ಸುವರ್ಣಾ, ಪ್ರತಿಮಾ ಗೋವಿಂದರೆಡ್ಡಿ, ಸಂಧ್ಯಾ ಕಿಶೋರಬಾಬು, ಪೂರ್ಣಿಮಾ ಮಹೇಶ ಮೇಘಣ್ಣವರ, ಗೀತಾ ಶಿವಕುಮಾರ ಶೀಲವಂತ, ಸಾಹಿತಿಗಳಾದ ಪಾರ್ವತಿ ಸೋನಾರೆ, ಭಾರತಿ ವಸ್ತ್ರದ್ ಪಾಲ್ಗೊಂಡಿದ್ದರು.
ಕೇಂದ್ರ ಸ್ಥಾನ ಬಿಡದಿರಲು ಅಧಿಕಾರಿಗಳಿಗೆ ಆದೇಶ
ಜನವರಿ 7, 8 ಮತ್ತು 9 ರಂದು ಬೀದರ್ ಉತ್ಸವ ನಡೆಯಲಿರುವ ಪ್ರಯುಕ್ತ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಇರಬೇಕು. ಪೂರ್ವಾನುಮತಿ ಪಡೆಯದೇ ಕೇಂದ್ರ ಸ್ಥಾನ ಬಿಡಬಾರದು ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.