ADVERTISEMENT

ಬೀದರ್‌ | ಸಂಭ್ರಮದಿಂದ ಈದ್‌–ಉಲ್‌–ಫಿತ್ರ್‌ ಆಚರಣೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2024, 8:27 IST
Last Updated 11 ಏಪ್ರಿಲ್ 2024, 8:27 IST
<div class="paragraphs"><p>ಬೀದರ್‌ನಲ್ಲಿ&nbsp;ಸಂಭ್ರಮದಿಂದ ಈದ್‌–ಉಲ್‌–ಫಿತ್ರ್‌ ಆಚರಣೆ</p></div>

ಬೀದರ್‌ನಲ್ಲಿ ಸಂಭ್ರಮದಿಂದ ಈದ್‌–ಉಲ್‌–ಫಿತ್ರ್‌ ಆಚರಣೆ

   

ಬೀದರ್‌: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಈದ್‌–ಉಲ್‌–ಫಿತ್ರ್‌ ಹಬ್ಬವನ್ನು ಗುರುವಾರ ಸಡಗರ, ಸಂಭ್ರಮ ಹಾಗೂ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.

ರಂಜಾನ್‌ ಮಾಸದಲ್ಲಿ ಸತತ ಒಂದು ತಿಂಗಳ ಉಪವಾಸ ವ್ರತಾಚಾರಣೆಯೂ ಹಬ್ಬದ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕೊನೆಗೊಂಡಿತು. 

ADVERTISEMENT

ಗುರುವಾರ ಬೆಳಿಗ್ಗೆ ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು, ಆನಂತರ ಹೊಸ ಬಟ್ಟೆಗಳನ್ನು ಧರಿಸಿಕೊಂಡು ಸಮೀಪದ ಈದ್ಗಾಗಳತ್ತ ಮುಖ ಮಾಡಿದರು. ಅಲ್ಲಿ ಸಾಮೂಹಿಕ ಪ್ರಾರ್ಥನೆಗೆ ಸಾಕ್ಷಿಯಾದರು. ಧರ್ಮಗುರುಗಳು ಉಪವಾಸ, ಪ್ರಾರ್ಥನೆ, ದಾನ–ಧರ್ಮದ ಮಹತ್ವ ಸಾರಿದರು. ನಾಡಿನಲ್ಲಿ ಉತ್ತಮ ಮಳೆ, ಬೆಳೆಯಾಗಿ ಸಮೃದ್ಧವಾಗಲಿ ಎಂದು ಪ್ರಾರ್ಥಿಸಿದರು.

ನಗರದ ಕೇಂದ್ರ ಬಸ್‌ ನಿಲ್ದಾಣದ ಈದ್ಗಾ ಮೈದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಗಾಗಿ ಈದ್ಗಾದಲ್ಲಿ ಶಾಮಿಯಾನ ಹಾಕಲಾಗಿತ್ತು. ಚಿಣ್ಣರು, ಯುವಕರು ಸೇರಿದಂತೆ ಎಲ್ಲ ವಯೋಮಾನದವರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಬಹುತೇಕರು ಶುಭ್ರ ಬಿಳಿ ವಸ್ತ್ರಗಳನ್ನು ಧರಿಸಿ, ತಲೆಯ ಮೇಲೆ ‘ತಾಜ್‌’ ಧರಿಸಿಕೊಂಡು ಶಿಸ್ತಿನಿಂದ ಸಾಲಿನಲ್ಲಿ ಕುಳಿತು ಅಲ್ಲಾಹುವಿನ ಪ್ರಾರ್ಥನೆ ಮಾಡಿದರು.

ಪ್ರಾರ್ಥನೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್‌, ನಗರಸಭೆ ಅಧ್ಯಕ್ಷ ಮೊಹಮ್ಮದ್‌ ಗೌಸ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜೆಡಿಎಸ್‌ ಮುಖಂಡ ಬಂಡೆಪ್ಪ ಕಾಶೆಂಪುರ್‌ ಸೇರಿದಂತೆ ಹಲವರು ಸಾಕ್ಷಿಯಾದರು. ಪ್ರಾರ್ಥನೆ ಮುಗಿಸಿಕೊಂಡು ಹೊರಬಂದ ಮುಸ್ಲಿಮರಿಗೆ ಹಬ್ಬದ ಶುಭ ಕೋರಿದರು. ಹಲವರು ಸಚಿವರೊಂದಿಗೆ ಕೈಕುಲುಕಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ನಗರ ಹೊರವಲಯದ ಚಿದ್ರಿ, ಅಮಲಾಪುರ, ಚಿಟ್ಟಾ, ಶಹಾಪುರಗೇಟ್‌, ಜನವಾಡ ರಸ್ತೆ ಸೇರಿದಂತೆ ಹಲವೆಡೆಗಳಲ್ಲಿಯೂ ಸಾಮೂಹಿಕ ಪ್ರಾರ್ಥನೆಗಳು ನಡೆದವು.

ಎಲ್ಲ ಈದ್ಗಾಗಳ ಬಳಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಸಾಮೂಹಿಕ ಪ್ರಾರ್ಥನೆಗೆ ಬಂದು ಹೋಗುವ ವೇಳೆ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡಿತು. ಪ್ರಾರ್ಥನೆ ನಂತರ ಮನೆಗೆ ತೆರಳಿದ ಮುಸ್ಲಿಮರು ನೆರೆಹೊರೆಯವರಿಗೆ ಹಬ್ಬದ ಶುಭಾಶಯ ಕೋರಿದರು. ಬಳಿಕ ಬಂಧು, ಬಾಂಧವರು, ಅನ್ಯ ಧರ್ಮೀಯ ಸ್ನೇಹಿತರನ್ನು ಮನೆಗೆ ಕರೆಸಿ, ಬಿರಿಯಾನಿ, ಸುರಕುಂಬಾ ಸೇರಿದಂತೆ ಇತರೆ ಸಿಹಿ ಖಾದ್ಯಗಳನ್ನು ಉಣಬಡಿಸಿ ಸೌಹಾರ್ದತೆ ಮೆರೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.