ಚಾಂಬೋಳ್(ಜನವಾಡ): ಮುರುಘೇಂದ್ರ ದೇವರು ಬೀದರ್ ತಾಲ್ಲೂಕಿನ ಚಾಂಬೋಳ್ ಗ್ರಾಮದ ರುದ್ರಮುನೀಶ್ವರ ಸಂಸ್ಥಾನ ಮಠದ ನೂತನ ಪೀಠಾಧಿಪತಿ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅರ್ಥಪೂರ್ಣ ಪಟ್ಟಾಧಿಕಾರ ಮಹೋತ್ಸವಕ್ಕೆ ಭರದ ಸಿದ್ಧತೆಗಳು ನಡೆದಿದ್ದು, ಮಠದಲ್ಲಿ ಸಂಭ್ರಮ ಮನೆ ಮಾಡಿದೆ.
ಈಗಾಗಲೇ ಮಠದಲ್ಲಿ ಗುರು ಪಟ್ಟಾಧಿಕಾರ ಮಹೋತ್ಸವಕ್ಕೆ ಚಾಲನೆ ದೊರೆತಿದ್ದು, ನವೆಂಬರ್ 20 ಮತ್ತು 21ರಂದು ಪ್ರಧಾನ ಕಾರ್ಯಕ್ರಮಗಳು ಜರುಗಲಿವೆ. ಮುರುಘೇಂದ್ರ ದೇವರಿಗೆ ಸಕ್ಕರೆ, ಹಣ್ಣಿನ ತುಲಾಭಾರ ನೆರವೇರಿದೆ. ಭಾನುವಾರ ನಾಣ್ಯಗಳಿಂದ ತುಲಾಭಾರ ನಡೆಯಲಿದೆ.
ರಟಕಲ್‍ನ ಶಂಭುಲಿಂಗ ಶಾಸ್ತ್ರಿ ಅವರು ನ.7ರಿಂದ ನಿತ್ಯ ಸಂಜೆ ಶರಣಬಸವೇಶ್ವರ ಪುರಾಣ ನಡೆಸಿಕೊಡುತ್ತಿದ್ದಾರೆ. ಗ್ರಾಮ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ಪುರಾಣ ಆಲಿಸಲು ಮಠಕ್ಕೆ ಬರುತ್ತಿದ್ದಾರೆ. ಗುರು ಪಟ್ಟಾಧಿಕಾರ ಮಹೋತ್ಸವ ಸಮಿತಿಯು ಭಕ್ತರಿಗೆ ಪ್ರಸಾದ, ಕುಡಿಯುವ ನೀರು ಸೇರಿದಂತೆ ವಿವಿಧ ವ್ಯವಸ್ಥೆಗಳನ್ನು ಮಾಡಿದೆ. ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಮಠಕ್ಕೆ ಸುಣ್ಣ, ಬಣ್ಣ ಬಳಿದು ಶೃಂಗರಿಸಲಾಗಿದೆ. ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ.
20ರಂದು ಸಂಜೆ 6ಕ್ಕೆ ಉಜ್ಜಯನಿಯ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಶರಣಬಸವೇಶ್ವರ ಪುರಾಣ ಸಮಾರೋಪ, ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮಸಭೆ ಜರುಗಲಿದೆ. ನ. 21ರಂದು ಬೆಳಿಗ್ಗೆ 11ಕ್ಕೆ ಗುರು ಪಟ್ಟಾಧಿಕಾರ ಮಹೋತ್ಸವ, ಧರ್ಮಸಭೆ ಹಾಗೂ ಪೀಠಾರೋಹಣ ನಡೆಯಲಿದೆ. ಗುರು ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಮಠದಲ್ಲಿ ನಿರಂತರ ವಿವಿಧ ಧಾರ್ಮಿಕ ಚಟುವಟಿಕೆಗಳು ನಡೆದಿವೆ. ಗ್ರಾಮ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ಪಟ್ಟಾಧಿಕಾರದ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಗ್ರಾ.ಪಂ ಮಾಜಿ ಅಧ್ಯಕ್ಷ ನಾಗೇಂದ್ರ ಪಾಟೀಲ ತಿಳಿಸಿದರು.
20ರಂದು ಉಜ್ಜಯನಿಯ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಜನವಾಡದಲ್ಲಿ ಅದ್ದೂರಿಯಾಗಿ ಸ್ವಾಗತಿಸಿ, ಬೈಕ್ ರ‍್ಯಾಲಿಯೊಂದಿಗೆ ಗ್ರಾಮದ ಮಠಕ್ಕೆ ಕರೆ ತರಲಾಗುವುದು. ಗ್ರಾಮದಲ್ಲಿ 2008 ಮಹಿಳೆಯರ ಕುಂಭ ಕಳಸ ಮೆರವಣಿಗೆ ಜರುಗಲಿದೆ. ಗುರು ಪಟ್ಟಾಧಿಕಾರ ಮಹೋತ್ಸವ ಸಮಿತಿಯ ಸದಸ್ಯರು ಮಹೋತ್ಸವ ಸಿದ್ಧತಾ ಕಾರ್ಯಗಳಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
ಮುರುಘೇಂದ್ರ ದೇವರ ಪಟ್ಟಾಧಿಕಾರ ಮಹೋತ್ಸವದಲ್ಲಿ 150 ಸ್ವಾಮೀಜಿಗಳಿಗೆ ಆಮಂತ್ರಣ ನೀಡಲಾಗಿದೆ. ವಿವಿಧೆಡೆಯ ಅಪಾರ ಭಕ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ-ನಾಗೇಂದ್ರ ಪಾಟೀಲ ಗ್ರಾ.ಪಂ ಮಾಜಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.