ADVERTISEMENT

ಬೀದರ್: ಕೌಶಲ ಪ್ರತ್ಯೇಕ ವಿಷಯಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 4:44 IST
Last Updated 21 ಜೂನ್ 2024, 4:44 IST
ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಬೀದರ್‌ನಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಬೀದರ್‌ನಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು    

ಬೀದರ್: ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನಿಂದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಕೌಶಲ ವಿಷಯವನ್ನು ಪ್ರತ್ಯೇಕ ವಿಷಯವಾಗಿ ಕಲಿಸಬೇಕು ಎಂದು ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘ ಒತ್ತಾಯಿಸಿದೆ.

ಸಂಘದ ಪದಾಧಿಕಾರಿಗಳು ನಗರದಲ್ಲಿ ಈ ಕುರಿತು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಸಲ್ಲಿಸಿ ಆಗ್ರಹಿಸಿದರು.

9ನೇ ತರಗತಿ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡಲು ಮುಂದಾಗಿರುವುದು ಸ್ವಾಗತಾರ್ಹ. ವಿದ್ಯಾರ್ಥಿಗಳು ಸ್ವಾವಲಂಬಿ ಆಗಲು ನೆರವಾಗಲಿದೆ. ಆದರೆ, ತೃತೀಯ ಭಾಷೆ ಬದಲು ಕೌಶಲಕ್ಕೆ ಅವಕಾಶ ನೀಡಿರುವುದರಿಂದ ಅದನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳು ಹಿಂದಿ ಕಲಿಕೆಯಿಂದ ವಂಚಿತರಾಗಲಿದ್ದಾರೆ ಎಂದು ಹೇಳಿದರು.

ADVERTISEMENT

ಸದ್ಯ ಪ್ರೌಢಶಾಲೆಗಳಲ್ಲಿ ತ್ರಿ ಭಾಷಾ ಸೂತ್ರ ಜಾರಿಯಲ್ಲಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂವಹನಕ್ಕಾಗಿ ಇಂಗ್ಲಿಷ್, ರಾಷ್ಟ್ರಮಟ್ಟದಲ್ಲಿ ಹಿಂದಿ ಹಾಗೂ ರಾಜ್ಯಮಟ್ಟದಲ್ಲಿ ಸಂವಹನಕ್ಕೆ ಕನ್ನಡ ಬೋಧಿಸಲಾಗುತ್ತಿದೆ. ಕೌಶಲ ವಿಷಯದ ಕಾರಣ ಹಿಂದಿಯಿಂದ ವಂಚಿತರಾಗುವ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದಲ್ಲಿ ಸಂವಹನಕ್ಕೆ ಸಮಸ್ಯೆಯಾಗಲಿದೆ. ದೇಶದ ವಿವಿಧ ಭಾಗಗಳಿಗೆ ಉದ್ಯೋಗಕ್ಕೆ ಹೋಗಲು ಕಷ್ಟವಾಗಲಿದೆ ಎಂದು ವಿವರಿಸಿದರು.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೌಶಲ ವಿಷಯವನ್ನು ತೃತೀಯ ಭಾಷೆ ಬದಲು ಆಯ್ಕೆ ಮಾಡಿಕೊಳ್ಳುವ ಬದಲಾಗಿ ಪ್ರತ್ಯೇಕ ವಿಷಯವಾಗಿ ಜಾರಿಗೊಳಿಸಬೇಕು ಎಂದು ಬೇಡಿಕೆ ಮಂಡಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್, ಪ್ರಮುಖರಾದ ಲಕ್ಷ್ಮಣ ತುರೆ, ಶಿವಾಜಿ ಧನೆ, ರಾಜಕುಮಾರ ಸಿರಾಜಿ, ಎಂ.ಡಿ. ಪ್ರಮೋದ್ ಸಗ್ಗಂ, ಶಿವಕುಮಾರ ಸದಾಫುಲೆ, ರವಿಕುಮಾರ ಕುಮನೋರ, ಎಂ.ಡಿ. ಶಾಬೊದ್ದಿನ್, ವೈಜಿನಾಥ ಸಾಳೆ, ಸಂಜೀವನ್ ಭೋಸ್ಲೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.