ಬೀದರ್: ಬೀದರ್ ದಕ್ಷಿಣ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಗುರುವಾರ ಚಂದ್ರಾಸಿಂಗ್ ಅವರು ನಾಮಪತ್ರ ಸಲ್ಲಿಸಿದರು.
ಗುಂಪಾದ ತಮ್ಮ ನಿವಾಸದಿಂದ ಸಾವಿರಾರು ಸಂಖ್ಯೆಯ ಬೆಂಬಲಿಗರೊಂದಿಗೆ ಮೆರವಣಿಗೆಯ ಮೂಲಕ ತಹಶೀಲ್ದಾರ್ ಕಚೇರಿಗೆ ಬಂದು ಚುನಾವಣಾಧಿಕಾರಿಯಾದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕಿ ಸುರೇಖಾ ಅವರಿಗೆ ನಾಮಪತ್ರ ಕೊಟ್ಟರು.
ಚಂದ್ರಾಸಿಂಗ್ ಅವರಿಗೆ ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಯೂಸೂಫ್ ಅಲಿ ಜಮಾದಾರ. ನಾರಾಯಣರಾವ್ ಭಂಗಿ. ಅಶೋಕ ರೆಡ್ಡಿ ನಿರ್ಣಾ ಹಾಗೂ ಪತ್ನಿ ಪ್ರಿಯದರ್ಶಿನಿ ಚಂದ್ರಾಸಿಂಗ್ ಸೂಚಕರಾಗಿ ಸಾಥ ನೀಡಿದರು. ಇದಕ್ಕೂ ಮೊದಲು ಚಂದ್ರಾಸಿಂಗ್ ಅವರು ಕ್ಷೇತ್ರದ ಹಲವು ಮಂದಿರಗಳಿಗೆ ತೆರಳಿ ದೇವರ ಆಶೀರ್ವಾದ ಪಡೆದರು.
ನಗರದ ಗುಂಪಾದಲ್ಲಿರುವ ಚಂದ್ರಾಸಿಂಗ್ ನಿವಾಸದಿಂದ ಮುಖ್ಯ ರಸ್ತೆಯ ಮಾರ್ಗವಾಗಿ, ಬೊಮ್ಮಗೊಂಡೇಶ್ವರ ವೃತ್ತ. ಬಸವೇಶ್ವರ ವೃತ್ತದ ಮೂಲಕ ಭವ್ಯ ಮೆರವಣಿಗೆ ನಡೆಯಿತು. ಎತ್ತಿನ ಬಂಡಿಯಲ್ಲಿ ಚಂದ್ರಾಸಿಂಗ್ ಅವರನ್ನು ಕರೆ ತರಲಾಯಿತು. ಮೆರವಣಿಗೆಯಲ್ಲಿ ಹಲಗೆ. ಬ್ಯಾಂಡ್ ಬಾಜಾ ಮುಂಚೂಣಿಯಲ್ಲಿತ್ತು. ಸಾವಿರಾರು ಕಾರ್ಯಕರ್ತರು ಮಾರ್ಗದುದ್ದಕ್ಕೂ ಚಂದ್ರಾಸಿಂಗ್ ಪರ ಜಯಘೋಷ ಮೊಳಗಿಸಿದರು.
25 ಸಾವಿರ ಮತಗಳ ಅಂತರದ ಗೆಲುವಿನ ವಿಶ್ವಾಸ: ನಾಮಪತ್ರ ಸಲ್ಲಿಸಿದ ಬಳಿಕ ಮಾದ್ಯಮ ಪ್ರತಿನಿಧಿಗಳೊಂಧಿಗೆ ಮಾತನಾಡಿದ ಚಂದ್ರಾಸಿಂಗ್, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿ ಪಕ್ಷ ಸಂಘಟನೆ ಮಾಡಿದರೂ ಕಾಂಗ್ರೆಸ್ ನನಗೆ ಟಿಕೆಟ ನೀಡದೆ ಅನ್ಯಾಯ ಮಾಡಿತು. ಹೀಗಾಗಿ ಪಕ್ಷೇತರನಾಗಿ ನಾಮಪತ್ರ ಸಲ್ಲಿಸಿದ್ದೇನೆ‘ ಎಂದರು.
‘ಕ್ಷೇತ್ರದ ಜನತೆ ನನ್ನೊಂದಿಗೆ ಇದ್ದಾರೆ. ಗ್ರಾಮ ಪಂಚಾಯಿತಿ. ತಾಲ್ಲೂಕು ಪಂಚಾಯಿತಿ. ಜಿಲ್ಲಾ ಪಂಚಾಯಿತಿ ಸದಸ್ಯರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. 25 ಸಾವಿರ ಮತಗಳ ಅಂತರದ ಗೆಲುವು ಸಾಧಿಸುವ ವಿಶ್ವಾಸ ಇದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.