ADVERTISEMENT

ಎಸ್ಪಿ ಚನ್ನಬಸವಣ್ಣ ವರ್ಗಾವಣೆ: ಗಾಂಜಾ, ಗುಟ್ಕಾ ಮಾಫಿಯಾಕ್ಕೆ ಸರ್ಕಾರ ಮಣಿಯಿತೇ?

ಶಶಿಕಾಂತ್ ಎಸ್. ಶೆಂಬೆಳ್ಳಿ
Published 4 ಜುಲೈ 2024, 5:30 IST
Last Updated 4 ಜುಲೈ 2024, 5:30 IST
<div class="paragraphs"><p>ಚನ್ನಬಸವಣ್ಣ ಎಸ್‌.ಎಲ್‌.</p></div>

ಚನ್ನಬಸವಣ್ಣ ಎಸ್‌.ಎಲ್‌.

   

ಬೀದರ್‌: ಮಾತಿನಲ್ಲಿ ಸೌಜನ್ಯ, ಕೆಲಸದಲ್ಲಿ ಕಠಿಣ ನಿಲುವು. ಬೀದರ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹುದ್ದೆಯಿಂದ ವರ್ಗಾವಣೆಗೊಂಡಿರುವ ಚನ್ನಬಸವಣ್ಣ ಎಸ್‌.ಎಲ್‌. ಅವರ ವ್ಯಕ್ತಿತ್ವ ಇದು.

ಎಂತಹುದೇ ಕಠಿಣ ಸಂದರ್ಭವಿರಲಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಜನರೊಂದಿಗೆ ಶಾಂತಚಿತ್ತರಾಗಿ, ಸೌಜನ್ಯದಿಂದ ವರ್ತಿಸಿ, ಅದಕ್ಕೆ ಪರಿಹಾರ ಕಂಡುಕೊಳ್ಳುವ ಗುಣ ಚನ್ನಬಸವಣ್ಣ ಅವರದು. ಈ ಕಾರಣಕ್ಕಾಗಿಯೇ ಜಿಲ್ಲೆಯ ಜನರ ಅಪಾರ ಪ್ರೀತಿ ಗಳಿಸಿದ್ದರು. ಕಾನೂನು ಹಾಗೂ ಸುವ್ಯವಸ್ಥೆಯ ಪ್ರಶ್ನೆ ಎದುರಾದಾಗ ರಾಜಿ ಆಗುತ್ತಿರಲಿಲ್ಲ. ಯಾರ ಪ್ರಭಾವಕ್ಕೂ ಒಳಗಾಗದೆ ಕ್ರಮ ಕೈಗೊಳ್ಳುತ್ತಿದ್ದರು. ಈ ಗುಣವೇ ಹೆಚ್ಚಿನವರಿಗೆ ಇಷ್ಟವಾಗಿತ್ತು. ಆದರೆ, ಅಧಿಕಾರಸ್ಥರು, ಪ್ರಭಾವಿಗಳಿಗೆ ಇದು ಬೇಡವಾಗಿತ್ತು. ಹೀಗಾಗಿಯೇ 1 ವರ್ಷ 5 ತಿಂಗಳ ನಂತರ ಚನ್ನಬಸವಣ್ಣ ಅವರನ್ನು ಜಿಲ್ಲೆಯಿಂದ ಬೇರೆಡೆ ಎತ್ತಂಗಡಿ ಮಾಡಲಾಗಿದೆ.

ADVERTISEMENT

ಇಂದು, ನಾಳೆ ಇವರ ಎತ್ತಂಗಡಿ ಆಗುತ್ತದೆ ಎಂದು ಜಿಲ್ಲೆಯಲ್ಲಿ ಅನೇಕ ದಿನಗಳಿಂದ ಗುಲ್ಲು ಹಬ್ಬಿತ್ತು. ಅದೀಗ ನಿಜವಾಗಿದೆ. ‘ಬೀದರ್‌ ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡುವವರಿಗೆ ಹೆಚ್ಚು ದಿನ ಉಳಿಯಲು ಬಿಡುವುದಿಲ್ಲ’ ಎಂಬ ಜನಸಾಮಾನ್ಯರ ಮಾತು ಮತ್ತೊಮ್ಮೆ ನಿಜವಾಗಿದೆ.

ಗಾಂಜಾ, ಗುಟ್ಕಾ ಮಾಫಿಯಾಕ್ಕೆ ಸರ್ಕಾರ ಮಣಿಯಿತೇ?:

ಬೀದರ್‌ ಜಿಲ್ಲೆ ಮಹಾರಾಷ್ಟ್ರ ಹಾಗೂ ತೆಲಂಗಾಣದೊಂದಿಗೆ ಗಡಿ ಹಂಚಿಕೊಂಡಿದೆ. ಮುಂಬೈ, ಪುಣೆ, ಹೈದರಾಬಾದ್‌, ಕೊಲ್ಲಾಪುರ, ಸೊಲ್ಲಾಪುರ, ನಾಂದೇಡ್‌ನಂತಹ ಪ್ರಮುಖ ನಗರಗಳೊಂದಿಗೆ ವಾಣಿಜ್ಯ ವಹಿವಾಟು ಹೊಂದಿದೆ. ಗಾಂಜಾ ಸಾಗಾಟದ ಪ್ರಮುಖ ರಹದಾರಿ ಕೂಡ ಜಿಲ್ಲೆ ಆಗಿತ್ತು. ಆದರೆ, ಚನ್ನಬಸವಣ್ಣ ಅವರು ಜಿಲ್ಲೆಗೆ ಎಸ್ಪಿ ಆಗಿ ಬಂದ ನಂತರ ಮೊದಲು ಕೈ ಹಾಕಿದ್ದೆ ಇದರೊಳಗೆ. ಗಡಿ ಭಾಗದಲ್ಲಿ ಸಿಬ್ಬಂದಿ ನೇಮಿಸಿ, ಗಸ್ತು ಹೆಚ್ಚಿಸಿ, ನೆರೆ ಜಿಲ್ಲೆಗಳೊಂದಿಗೆ ಸಂಪರ್ಕ ಸಾಧಿಸಿ ಗಾಂಜಾ ಸಾಗಾಟ, ಮಾರಾಟವನ್ನು ಬಹುತೇಕ ಇಲ್ಲವಾಗಿಸಿದರು. ಇವರ ಒಂದೂವರೆ ವರ್ಷದ ಅವಧಿಯಲ್ಲಿ ₹40 ಕೋಟಿಗೂ ಅಧಿಕ ಮೌಲ್ಯದ ಗಾಂಜಾ ಜಪ್ತಿ ಮಾಡಿರುವುದೇ ಇದಕ್ಕೆ ಸಾಕ್ಷಿ.

ಗಾಂಜಾ ನಂತರದ ಸ್ಥಾನ ಗುಟ್ಕಾದ್ದು. ಜಿಲ್ಲೆಯಲ್ಲಿ ಅಕ್ರಮವಾಗಿ ಗುಟ್ಕಾ ತಯಾರಿಸಿ ಸರ್ಕಾರಕ್ಕೆ ತೆರಿಗೆ ಕಟ್ಟದೇ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗುತ್ತಿತ್ತು. ಅದರ ತಯಾರಿಕೆ ಅಡ್ಡೆಗಳ ಮೇಲೆ ದಾಳಿ ನಡೆಸಿ ಅದಕ್ಕೆ ಕಡಿವಾಣ ಹಾಕಿದ್ದರು. ಡ್ರಗ್ಸ್‌ ವಿರುದ್ಧ ಶಾಲಾ,ಕಾಲೇಜುಗಳಲ್ಲಿ ದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಿಸಿ, ಅದರ ಮೂಲ ಬೇರು ಕಿತ್ತು ಹಾಕಲು ಪ್ರಯತ್ನಿಸಿದ್ದರು. ಆಗಲೇ ಚನ್ನಬಸವಣ್ಣ ಅಕ್ರಮ ಗಾಂಜಾ ಹಾಗೂ ಗುಟ್ಕಾ ದಂದೆಯಲ್ಲಿ ತೊಡಗಿಕೊಂಡವರ ಕೆಂಗಣ್ಣಿಗೆ ಗುರಿಯಾಗಿದ್ದರು.

ಸಂಚಾರ ವ್ಯವಸ್ಥೆಯಲ್ಲೂ ಅಗಾಧ ಸುಧಾರಣೆ ತಂದಿದ್ದರು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸುವುದು, ಕಾರು ಚಾಲಕರು ಸೀಟ್‌ ಬೆಲ್ಟ್‌ ಧರಿಸಿ ಓಡಿಸುವುದು ಕಡ್ಡಾಯಗೊಳಿಸಿದ್ದರು. ದಂಡದ ರೂಪದಲ್ಲಿ ಜನರಿಗೆ ಹೆಲ್ಮೆಟ್‌ ಸ್ಥಳದಲ್ಲಿ ಕೊಡಿಸುವ ವ್ಯವಸ್ಥೆ ಜಾರಿಗೆ ತಂದಿದ್ದರು. ಐಪಿಎಲ್‌ ಬೆಟ್ಟಿಂಗ್‌ ನಿಲ್ಲಿಸಿದ್ದರು. ಕೊಲೆ, ಸುಲಿಗೆ, ದರೋಡೆಯಂತಹ ಗಂಭೀರ ಸ್ವರೂಪದ ಪ್ರಕರಣಗಳನ್ನು ಕಾಲಮಿತಿಯಲ್ಲಿ ಭೇದಿಸಿ, ಜನರಿಗೆ ಸ್ವತ್ತು ಹಿಂತಿರುಗಿಸಿ ಅವರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವಂತೆ ಜನರನ್ನು ಪ್ರೇರೇಪಿಸಿ, ಅವುಗಳ ‘ಮ್ಯಾಪಿಂಗ್‌’ ಕಾರ್ಯ ಆರಂಭಿಸಿದ್ದರು. ಅಮೆರಿಕದಂತಹ ಮುಂದುವರಿದ ರಾಷ್ಟ್ರಗಳಲ್ಲಿ ಇದರ ಬಗ್ಗೆ ಈಗಷ್ಟೇ ಚಿಂತನೆ ನಡೆದಿದೆ. ಜನಸಾಮಾನ್ಯರಿಗೆ ಎಸ್ಪಿ ಕಚೇರಿ ಸದಾ ಮುಕ್ತವಾಗಿತ್ತು. ಪೊಲೀಸ್‌ ಇಲಾಖೆಯನ್ನು ಸ್ವಚ್ಛಗೊಳಿಸಿ, ಸಿಬ್ಬಂದಿಗೆ ಬಹಳ ಹತ್ತಿರವಾದರು. ಪೊಲೀಸ್‌ ಹೆಡ್‌ಕ್ವಾರ್ಟರ್ಸ್‌ನಲ್ಲಿ ಗ್ರಂಥಾಲಯ ಸ್ಥಾಪಿಸಿ, ಓದಿನ ಅಭಿರುಚಿ ಬೆಳೆಸಿದರು. ಜಿಲ್ಲಾಡಳಿತದ ಮನವೊಲಿಸಿ ಅತಿಕ್ರಮಣ ತೆರವಿಗೂ ಚಾಲನೆ ಕೊಡಿಸಿದ್ದರು. ಹರ್ಷ ಗುಪ್ತಾ ಅವಧಿಯಲ್ಲಾದ ತೆರವು ಕಾರ್ಯಾಚರಣೆ ನೆನಪಿಸುವಂತೆ ಮಾಡಿತು.

ಪ್ರದೀಪ್ ಗುಂಟಿ

ಸಮಾಜಕ್ಕೆ ಏನಾದರೂ ಉತ್ತಮ ಕೆಲಸ ಮಾಡಲು ಮುಂದಾದರೆ ಭ್ರಷ್ಟಾಚಾರಿಗಳ ಕಣ್ಣು ಕೆಂಪಗಾಗುತ್ತವೆ. ಉತ್ತಮರಿಗೆ ಕೆಲಸ ಮಾಡಲು ಬಿಡುವುದಿಲ್ಲ.
ಪ್ರಕಾಶ್‌ ಎಸ್‌. ಸ್ಥಳೀಯ ನಿವಾಸಿ
ಜಿಲ್ಲೆಯಲ್ಲಿ ಬಹುತೇಕ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್‌ ಹಾಕಿದವರು ಚನ್ನಬಸವಣ್ಣ. ಅವರ ವರ್ಗಾವಣೆ ರದ್ದುಗೊಳಿಸಿ ಇನ್ನೂ ಕೆಲ ತಿಂಗಳು ಮುಂದುವರಿಸಲಿ.
ಶಿವಕುಮಾರ ಸ್ವಾಮೀಜಿ ಭದ್ರೇಶ್ವರ ಮಠ ಬಾವಗಿ
‘ಅವಿಸ್ಮರಣೀಯ ದಿನಗಳು’
ಬೀದರ್‌ನಲ್ಲಿ ನಾನು ಕೆಲಸ ಮಾಡಿದ ದಿನಗಳು ಅವಿಸ್ಮರಣೀಯ. ಬೀದರ್‌ ಭಾರತದಲ್ಲಿದೆ. ಅದೇ ರೀತಿ ಇಡೀ ಭಾರತ ಬೀದರ್‌ನಲ್ಲಿದೆ. ಜನರ ಸಹಕಾರ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಯ ಸಹಕಾರದಿಂದ ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡಲು ಸಾಧ್ಯವಾಗಿದೆ. ಚನ್ನಬಸವಣ್ಣ ಎಸ್‌.ಎಲ್‌. ನಿರ್ಗಮಿತ ಎಸ್ಪಿ
ಸರ್ಕಾರದ ನಿರ್ಧಾರಕ್ಕೆ ಟೀಕೆ
ಜಿಲ್ಲೆಯಲ್ಲಿ ಸಾಕಷ್ಟು ಸುಧಾರಣೆಗಳ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದ ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ಅವರನ್ನು ವರ್ಗಾವಣೆಗೊಳಿಸಿರುವ ಸರ್ಕಾರದ ಕ್ರಮವನ್ನು ಸಾರ್ವಜನಿಕರು ಕಟುವಾಗಿ ಟೀಕಿಸಿದ್ದಾರೆ. ಫೇಸ್‌ಬುಕ್‌ ‘ಎಕ್ಸ್‌’ ಇನ್‌ಸ್ಟಾಗ್ರಾಂ ವಾಟ್ಸ್‌ಆ್ಯಪ್‌ ಸೇರಿದಂತೆ ಇತರೆ ಸಾಮಾಜಿಕ ಮಾಧ್ಯಮಗಳಲ್ಲಿ ಚನ್ನಬಸವಣ್ಣ ಅವರು ವರ್ಗಾವಣೆ ಆದೇಶ ಪ್ರತಿ ಅವರ ಭಾವಚಿತ್ರ ಹಂಚಿಕೊಂಡು ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದಾರೆ. ‘ಹಿಂದುಳಿದ ಬೀದರ್‌ ಜಿಲ್ಲೆಯ ಅಭಿವೃದ್ಧಿ ಕಾನೂನು ಸುವ್ಯವಸ್ಥೆ ಸರಿ ಇರುವುದು ಸರ್ಕಾರಕ್ಕೆ ಬೇಡವಾದಂತಿದೆ’ ಎಂದು ಹೀಗಳೆದಿದ್ದಾರೆ.
ಚನ್ನಬಸವಣ್ಣ ನಿರ್ಗಮನ ಪ್ರದೀಪ್‌ ಅಧಿಕಾರ ಸ್ವೀಕಾರ
ಬೀದರ್: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಅವರನ್ನು ರಾಜ್ಯ ಸರ್ಕಾರ ಬೆಂಗಳೂರಿಗೆ ವರ್ಗಾವಣೆಗೊಳಿಸಿದ್ದು ಅವರ ಜಾಗಕ್ಕೆ ಪ್ರದೀಪ್ ಗುಂಟಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಚನ್ನಬಸವಣ್ಣ ಅವರನ್ನು ಬೆಂಗಳೂರಿನ ಪ್ರಧಾನ ಕಚೇರಿಯ ಆಡಳಿತ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಕಾರಾಗೃಹ ವಿಭಾಗದಲ್ಲಿದ್ದ ಪ್ರದೀಪ್ ಗುಂಟಿ ಅವರನ್ನು ಬೀದರ್ ಎಸ್ಪಿಯಾಗಿ ನೇಮಕ ಮಾಡಿದೆ. ಚನ್ನಬಸವಣ್ಣ ಅವರು ಬುಧವಾರ ಮಧ್ಯಾಹ್ನ ಹೆಚ್ಚುವರಿ ಎಸ್ಪಿ ಚಂದ್ರಕಾಂತ ಪೂಜಾರಿ ಅವರಿಗೆ ಅಧಿಕಾರ ಹಸ್ತಾಂತರಿಸಿ ನಿರ್ಗಮಿಸಿದರು. ಪ್ರದೀಪ್‌ ಗುಂಟಿ ಅವರು ಬುಧವಾರ ರಾತ್ರಿ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.