ಔರಾದ್: ತಾಲ್ಲೂಕಿನ ಎಕಲಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೋರಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ.
ಎರಡು ಸಾವಿರ ಜನಸಂಖ್ಯೆ ಇರುವ ಈ ಊರಿನ ಜನರಿಗೆ ಕುಡಿಯುವ ನೀರಿಗೆ ಕೊಳವೆ ಬಾವಿಯೇ ಆಸರೆ. ಆದರೆ, ಕಳೆದ ಕೆಲ ದಿನಗಳಿಂದ ನಾಲ್ಕು ಕೊಳವೆ ಬಾವಿ ಬತ್ತಿದ್ದು, ಜನ ನೀರಿಗಾಗಿ ಅಹೋರಾತ್ರಿ ಪರದಾಡುತ್ತಿದ್ದಾರೆ.
‘ನಮ್ಮ ಊರಿನಲ್ಲಿ ಬೇಸಿಗೆ ಆರಂಭದಿಂದಲೂ ಆಗಾಗ ನೀರಿನ ಸಮಸ್ಯೆ ಇದೆ. ಈಗ ಹದಿನೈದು ದಿನಗಳಿಂದ ಒಂದು ಕೊಡ ನೀರಿಗಾಗಿ ಪರದಾಡಬೇಕಿದೆ’ ಎಂದು ಗ್ರಾಮದ ನಿವಾಸಿ ಉಮಾಕಾಂತ ಸೋನೆ ಹೇಳಿದರು.
‘ನಮಗೆ ನೀರಿನ ಸಮಸ್ಯೆ ತುಂಬಾ ಕಾಡುತ್ತಿದೆ. ಹಲವು ದಿನಗಳಿಂದ ಟ್ಯಾಂಕರ್ ನೀರು ತಂದು ಉಪಯೋಗಿಸುತ್ತಿದ್ದೇವೆ. ನಮ್ಮ ಗಲ್ಲಿಯಲ್ಲಿ ಎರಡು ದಿನಕೊಮ್ಮೆ 5 ಸಾವಿರ ಲೀಟರ್ ಟ್ಯಾಂಕರ್ ನೀರು ತಂದು ಉಪಯೋಗಿಸುತ್ತಿದ್ದೇವೆ. ಜನರಿಗೂ ಕೊಡುತ್ತಿದ್ದೇವೆ’ ಎಂದು ಬೋರಾಳ ನಿವಾಸಿ ಮಹಾದೇವ ಯರನಾಳೆ ತಿಳಿಸಿದ್ದಾರೆ.
‘ಬೋರಾಳ ಗ್ರಾಮದಲ್ಲಿ ನೀರಿನ ಸಮಸ್ಯೆಯಾಗಿರುವುದು ಇದೇ ಮೊದಲು. ಎಲ್ಲ ಐದು ಕೊಳವೆ ಬಾವಿ ಬತ್ತಿ ಹೋಗಿವೆ. ಚುನಾವಣೆ ಕೆಲಸದಲ್ಲೂ ಹೆಚ್ಚುವರಿ ಪೈಪ್ ಹಾಕಿ ನೋಡಿದರೂ ನೀರು ಬರುತ್ತಿಲ್ಲ. ಹೀಗಾಗಿ ಈಗ ಗ್ರಾಮದ ವ್ಯಕ್ತಿಯೊಬ್ಬರಿಂದ ನೀರಿನ ಮೂಲ ಇರುವ ಖಾಸಗಿ ಕೊಳವೆ ಬಾವಿ ಪಡೆಯಲಾಗಿದೆ. ಅದಕ್ಕೆ ಹೊಸದಾಗಿ ಮೋಟಾರ್ ಅಳವಡಿಸಲಾಗಿದೆ. ಸದ್ಯಕ್ಕೆ ನೀರಿನ ಸಮಸ್ಯೆ ಪರಿಹರಿಸಲಾಗಿದೆ’ ಎಂದು ಪಿಡಿಒ ವಿಜಯಲಕ್ಷ್ಮಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.