ADVERTISEMENT

ಬೀದರ್‌ನ PHCಗಳಲ್ಲಿ ಆಂಬುಲನ್ಸ್ ಇಲ್ಲ, ರಾತ್ರಿ ವೈದ್ಯರೂ ಇರುವುದಿಲ್ಲ!

ನಾಗೇಶ ಪ್ರಭಾ
Published 21 ಜುಲೈ 2024, 2:37 IST
Last Updated 21 ಜುಲೈ 2024, 2:37 IST
<div class="paragraphs"><p>ಬೀದರ್ ತಾಲ್ಲೂಕಿನ ಚಿಲ್ಲರ್ಗಿ ಗ್ರಾಮದಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರ</p></div>

ಬೀದರ್ ತಾಲ್ಲೂಕಿನ ಚಿಲ್ಲರ್ಗಿ ಗ್ರಾಮದಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರ

   

ಜನವಾಡ: ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲು ಆಂಬುಲನ್ಸ್ ಇಲ್ಲ, ಚಿಕಿತ್ಸೆ ಪಡೆಯಲು ರಾತ್ರಿ ವೈದ್ಯರೂ ಇರುವುದಿಲ್ಲ...

ಬೀದರ್ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪರಿಸ್ಥಿತಿ ಇದು.

ADVERTISEMENT

ಗ್ರಾಮೀಣ ಪ್ರದೇಶದ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ ದಿನದ 24 ಗಂಟೆ ಸೇವೆ ಇರುವ ಆಣದೂರ ಹಾಗೂ ಬಗದಲ್‍ನಲ್ಲಿ ಆಂಬುಲನ್ಸ್‌ಗಳಿಲ್ಲ. ಕೆಲ ಕೇಂದ್ರಗಳಲ್ಲಿ ಇಬ್ಬರು ವೈದ್ಯರಿದ್ದರೆ, ಇನ್ನು ಕೆಲ ಕೇಂದ್ರಗಳಲ್ಲಿ ಒಬ್ಬರೇ ವೈದ್ಯರಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4.30ರ ವರೆಗೆ ಮಾತ್ರ ವೈದ್ಯರಿರುತ್ತಾರೆ. ಬಳಿಕ ಶುಶ್ರೂಷಾ ಅಧಿಕಾರಿಗಳು ಮತ್ತು ಗ್ರೂಪ್ ಡಿ ನೌಕರರಷ್ಟೇ ಇರುತ್ತಾರೆ. ಹೀಗಾಗಿ ರೋಗಿಗಳಿಗೆ ರಾತ್ರಿ ವೈದ್ಯಕೀಯ ಸೇವೆ ಲಭಿಸುವುದಿಲ್ಲ ಎಂಬ ಆರೋಪ ಸಾರ್ವಜನಿಕರದ್ದು.

‘ಆಣದೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬರೇ ವೈದ್ಯರು ಇದ್ದಾರೆ. ಸುತ್ತುಗೋಡೆ ಇಲ್ಲದಿರುವುದರಿಂದ ವಿಷ ಜಂತುಗಳು ಬರುವ ಭಯ ಕಾಡುತ್ತಿರುತ್ತದೆ. ಹಿಂದೆ ಕೇಂದ್ರದಲ್ಲೇ ಎಲ್ಲ ಹೆರಿಗೆಗಳು ಆಗುತ್ತಿದ್ದವು. ಈಗ ಹೆಚ್ಚಿನ ಪ್ರಕರಣಗಳನ್ನು ಜಿಲ್ಲಾ ಕೇಂದ್ರಕ್ಕೆ ಕಳುಹಿಸಲಾಗುತ್ತಿದೆ’ ಎಂದು ಹೇಳುತ್ತಾರೆ ಗ್ರಾಮದ ಯುವ ಮುಖಂಡ ಚೇತನ್ ಸೊರಳ್ಳಿ.

ಜಿಲ್ಲಾ ಕೇಂದ್ರಕ್ಕೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹೆರಿಗೆ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳುತ್ತಿಲ್ಲ. ಬಹುತೇಕ ಹೆರಿಗೆ ಪ್ರಕರಣಗಳನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸುವ ಪ್ರಯತ್ನ ನಡೆಸುತ್ತಿವೆ ಎಂಬ ದೂರು ಅನೇಕರದ್ದು.

ಬಗದಲ್ ಕೇಂದ್ರದ ಸಮಸ್ಯೆ ಬೇರೆಯದ್ದೇ ಆಗಿದೆ. ಇಲ್ಲಿ ನಿರ್ಮಿಸಿರುವ ಹೊಸ ಕಟ್ಟಡದಲ್ಲಿ ಹೆರಿಗೆ ಸೌಲಭ್ಯ ಇದ್ದರೂ, ಅಕ್ಕಪಕ್ಕ ಸ್ಮಶಾನ ಇರುವ ಕಾರಣ ಮಹಿಳೆಯರು ಹೆರಿಗೆಗೆ ಒಲ್ಲೆ ಎನ್ನುತ್ತಿದ್ದಾರೆ. ಹೀಗಾಗಿ ಹೆರಿಗೆ ಸೇವೆ ಹಳೆಯ ಕೇಂದ್ರದಲ್ಲೇ ಮುಂದುವರಿಸಲಾಗಿದೆ.

‘ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವವರಲ್ಲಿ ಬಹುತೇಕರು ಬಡವರಿರುತ್ತಾರೆ. ರಾತ್ರಿ ವೈದ್ಯರು ಇಲ್ಲದಿರುವುದರಿಂದ ತೊಂದರೆ ಅನುಭವಿಸಬೇಕಾಗಿದೆ. ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾಗಿದೆ’ ಎಂದು ಹೇಳುತ್ತಾರೆ ಜನವಾಡದ ಮುಖಂಡ ಬಸವರಾಜ ಪನಸಾಲೆ.

‘ಗಡಿ ಭಾಗದಲ್ಲಿರುವ ಚಿಲ್ಲರ್ಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ನಿರ್ಮಿಸಿದ್ದ ವಸತಿ ಗೃಹಗಳು ಹಾಳಾಗಿವೆ. ಹೊಸ ವಸತಿ ಗೃಹಗಳನ್ನು ನಿರ್ಮಿಸದ ಕಾರಣ ಸಿಬ್ಬಂದಿಯ ವಾಸ್ತವ್ಯಕ್ಕೆ ಸಮಸ್ಯೆ ಎದುರಾಗಿದೆ. ವಸತಿ ಗೃಹಗಳಿರುವ ಕೇಂದ್ರದ ಆಸ್ತಿಗೆ ಸುತ್ತುಗೋಡೆ ಕಟ್ಟದಿರುವುದರಿಂದ ಅತಿಕ್ರಮಣವಾಗುತ್ತಿದೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ ತಿಳಿಸಿದರು.

‘ದಿನದ 24 ಗಂಟೆ ವೈದ್ಯಕೀಯ ಸೇವೆ ಇರುವ ಕೇಂದ್ರಗಳಲ್ಲಿ ಆಂಬುಲನ್ಸ್ ಇವೆ. ಆಣದೂರಿನಲ್ಲಿಯ ಆಂಬುಲನ್ಸ್ 15 ವರ್ಷಗಳಷ್ಟು ಹಳೆಯದಾಗಿರುವುದರಿಂದ ಸೇವೆ ಸ್ಥಗಿತಗೊಳಿಸಲಾಗಿದೆ. ಹೊಸ ಆಂಬುಲನ್ಸ್‌ಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಬಗದಲ್ ಆಂಬುಲನ್ಸ್‌ಗೆ ಅಪಘಾತದಲ್ಲಿ ಹಾನಿಯಾಗಿದ್ದು, ಮನ್ನಾಎಖ್ಖೆಳ್ಳಿಯಲ್ಲಿ ಇರುವ ಎರಡು ಆಂಬುಲನ್ಸ್ ಪೈಕಿ ಒಂದನ್ನು ಈ ಕೇಂದ್ರದ ಸೇವೆಗೆ ಬಳಸಿಕೊಳ್ಳಲಾಗುತ್ತಿದೆ’ ಎಂದು ಬೀದರ್ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಸಂಗಾರೆಡ್ಡಿ ಮಾಹಿತಿ ನೀಡಿದರು.

ನಿರಂತರ ವೈದ್ಯಕೀಯ ಸೇವೆಯ ಕೇಂದ್ರಗಳಲ್ಲಿ ಎಂಬಿಬಿಎಸ್ ಹಾಗೂ ಆಯುರ್ವೇದ ಸೇರಿ ಇಬ್ಬರು ವೈದ್ಯರಿದ್ದಾರೆ. ಉಳಿದೆಡೆ ಒಬ್ಬರು ಎಂಬಿಬಿಎಸ್ ವೈದ್ಯರು ಇದ್ದಾರೆ ಎಂದು ಹೇಳುತ್ತಾರೆ.

ಪಿಎಚ್‍ಸಿ ವೈದ್ಯರು ಕೇಂದ್ರದ ವಿವಿಧ ಯೋಜನೆಗಳ ಅನುಷ್ಠಾನದ ಜತೆ ಉತ್ತಮ ಕೆಲಸ ಮಾಡುತ್ತಿದ್ದಾರೆ. ರಾತ್ರಿ ವೇಳೆಯೂ ರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ
ಡಾ. ಸಂಗಾರೆಡ್ಡಿ, ಬೀದರ್ ತಾಲ್ಲೂಕು ಆರೋಗ್ಯಾಧಿಕಾರಿ
ರೋಗಿಗಳ ಹಿತದೃಷ್ಟಿಯಿಂದ ಜನವಾಡದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಾತ್ರಿ ಪಾಳಿಯ ಒಬ್ಬ ವೈದ್ಯರನ್ನು ನಿಯೋಜಿಸಬೇಕು
ಬಸವರಾಜ ಪನಸಾಲೆ, ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.