ADVERTISEMENT

ಬಿಜೆಪಿಯಿಂದ ಗ್ರಾಮ ಪರಿಕ್ರಮ ಯಾತ್ರೆ: ಕುಶಾಲ ಪಾಟೀಲ್

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2024, 7:24 IST
Last Updated 12 ಫೆಬ್ರುವರಿ 2024, 7:24 IST
ಕುಶಾಲ ಪಾಟೀಲ ಗಾದಗಿ
ಕುಶಾಲ ಪಾಟೀಲ ಗಾದಗಿ   

ಬೀದರ್‌: ‘ಬಿಜೆಪಿಯಿಂದ ದೇಶದಾದ್ಯಂತ ಗ್ರಾಮ ಪರಿಕ್ರಮ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಸೋಮವಾರ (ಫೆ. 12) ಭಾಲ್ಕಿ ತಾಲ್ಲೂಕಿನ ಖಟಕಚಿಂಚೋಳಿ ಗ್ರಾಮದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಬಿಜೆಪಿ ರೈತ ಮೋರ್ಚಾ ಕಲಬುರಗಿ ಹಾಗೂ ಬೀದರ್ ವಿಭಾಗದ ಸಹ ಪ್ರಭಾರಿ ಕುಶಾಲ ಪಾಟೀಲ್ ಗಾದಗಿ ತಿಳಿಸಿದರು.

ಉತ್ತರ ಪ್ರದೇಶದ ಮುಜಾಫರ್‌ ನಗರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ದೇಶದ ಎಲ್ಲಾ ಸಂಘಟನಾತ್ಮಕ ಜಿಲ್ಲೆಗಳಲ್ಲಿ ಎಲ್‌ಇಡಿ ಮೂಲಕ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಮೂರು ಸಾವಿರ ರೈತರು ಕಾರ್ಯಕ್ರಮ ವೀಕ್ಷಿಸುವರು ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ಗ್ರಾಮ ಪರಿಕ್ರಮ ಯಾತ್ರೆ ಒಂದು ತಿಂಗಳು ನಡೆಯಲಿದೆ. ಪ್ರತಿ ಜಿಲ್ಲೆಗಳಲ್ಲಿ ಐದು ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಗೋ ಮತ್ತು ಕೃಷಿ ಪರಿಕರಗಳಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಪ್ರಾರಂಭಿಸಲಾಗುವುದು. ಕೇಂದ್ರ ಸರ್ಕಾರದ ರೈತರ ಪರವಾದ ಯೋಜನೆಗಳ ಕುರಿತು ಮಾಹಿತಿ ನೀಡಲಾಗುತ್ತದೆ ಎಂದರು.

ADVERTISEMENT

ಕೇಂದ್ರದಿಂದ ನೈಸರ್ಗಿಕ ಕೃಷಿಗೆ ಹೆಚ್ಚಿನ ಒತ್ತು, 23 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ಫಸಲ್ ಬಿಮಾ ಯೋಜನೆ ಮೂಲಕ ರೈತರಿಗೆ ನಗದು ಹಣ ವರ್ಗಾವಣೆ, ಕಿಸಾನ್‌ ಸಮ್ಮಾನ್‌ ಯೋಜನೆ, ಕೃಷಿ ಸಿಂಚಾಯಿ ಯೋಜನೆಯಿಂದ ಲಕ್ಷಾಂತರ ರೈತರಿಗೆ ಪ್ರಯೋಜನವಾಗುತ್ತಿದೆ ಎಂದು ತಿಳಿಸಿದರು.

ಗ್ರಾಮ ಪರಿಕ್ರಮ ಕಾರ್ಯಕ್ರಮದ ಸಹ ಸಂಚಾಲಕ ರಾಜಕುಮಾರ್ ಹರಕಂಚಿ, ಪ್ರಮುಖರಾದ ಶಿವರುದ್ರಪ್ಪ ತಾಟೆ, ಅಶೋಕ ಪಾಟೀಲ, ನಾಗಶೆಟ್ಟಿ ಗಾದಗೆ, ಬಸವರಾಜ ಅಷ್ಟಗಿ, ಶ್ರೀನಿವಾಸ ಚೌದ್ರಿ, ಸುದರ್ಶನ ಗಡ್ರೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.