ADVERTISEMENT

ವಕ್ಫ್‌ ದಂಧೆ ತಡೆಗೆ ಬಿಜೆಪಿ ಕಾಲದಲ್ಲಿ ಹೆಚ್ಚು ನೋಟಿಸ್‌: ಕುಮಾರ ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 13:20 IST
Last Updated 25 ನವೆಂಬರ್ 2024, 13:20 IST
ಕುಮಾರ ಬಂಗಾರಪ್ಪ
ಕುಮಾರ ಬಂಗಾರಪ್ಪ    

ಬೀದರ್‌: ‘ವಕ್ಫ್‌ ಆಸ್ತಿ ಹೆಸರಲ್ಲಿ ದೊಡ್ಡ ದಂಧೆ, ಮೋಸ ಮಾಡುತ್ತಿದ್ದಾರೆ ಎಂಬ ಕಾರಣಕ್ಕಾಗಿಯೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೆಚ್ಚು ನೋಟಿಸ್‌ ಕೊಡಲಾಗಿದೆ. ಕಾಂಗ್ರೆಸ್ ಮುಖಂಡರಾದ ರೆಹಮಾನ್‌ ಖಾನ್‌, ಜಾಫರ್‌ ಷರೀಫ್‌, ಎನ್‌.ಎ. ಹ್ಯಾರಿಸ್‌ ಅಂಥವರಿಗೆ ನೋಟಿಸ್‌ ಕೊಟ್ಟಿದ್ದೇವೆ. ಆದರೆ, ನಮ್ಮ ಕಾಲದಲ್ಲಿ ಯಾವುದೇ ರೈತರಿಗೆ ನೋಟಿಸ್‌ ಕೊಟ್ಟಿಲ್ಲ’ ಎಂದು ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷರೂ ಆದ ಬಿಜೆಪಿ ಮುಖಂಡ ಕುಮಾರ್‌ ಬಂಗಾರಪ್ಪ ಹೇಳಿದರು.

ನಗರದಲ್ಲಿ ಸೋಮವಾರ ನಡೆದ ‘ವಕ್ಫ್‌ ಭೂಕಬಳಿಕೆ ವಿರೋಧಿ ಜನಜಾಗೃತಿ ಹೋರಾಟ’ದಲ್ಲಿ ಮಾತನಾಡಿದ ಅವರು, ಸಿಕ್ಕ ಸಿಕ್ಕವರ ಆಸ್ತಿಯನ್ನು ವಕ್ಫ್‌ ಆಸ್ತಿ ಎಂದು ಸೇರಿಸುವುದು ಒಂದು ದಂಧೆಯಾಯಿತು. ಕಣ್ಣಿಗೆ ಕಾಣಿದಷ್ಟು ವಕ್ಫ್‌ ಆಸ್ತಿ ಎಂದು ನಮೂದಿಸಿದರು. ರಾಜಕಾರಣಿಗಳು, ಅಧಿಕಾರಿಗಳು ಸೇರಿಕೊಂಡು ದಂಧೆ, ಮೋಸ ಮಾಡುತ್ತಿದ್ದಾರೆ ಎಂದು ಗಮನಕ್ಕೆ ಬಂದ ನಂತರ ನೋಟಿಸ್‌ ಕೊಟ್ಟಿದ್ದೇವೆ. ಈ ವಿಷಯವನ್ನು ಗೃಹಸಚಿವ ಡಾ. ಜಿ. ಪರಮೇಶ್ವರ ಹಾಗೂ ಕಾಂಗ್ರೆಸ್‌ ಮುಖಂಡರು ಗಮನಿಸಬೇಕು ಎಂದರು.

ಉಳುಮೆ ಮಾಡುತ್ತಿರುವ ರೈತರಿಗೆ ಜಮೀನು ಬಿಟ್ಟುಕೊಡಬೇಕೆಂದು ನನ್ನ ಅಧ್ಯಕ್ಷತೆಯ ಸಮಿತಿ ತಿಳಿಸಿತ್ತು. ಯಾವುದೇ ಜಾತಿಯ ರೈತನಿರಲಿ ಆ ಜಮೀನು ಆತನಿಗೆ ಬಿಟ್ಟುಕೊಡಬೇಕು. ಅಧಿಕಾರಿಗಳಿಗೆ ಕಿಕ್‌ಬ್ಯಾಕ್‌ ಕೊಟ್ಟು ಕೋಟ್ಯಂತರ ರೂಪಾಯಿ ಆಸ್ತಿ ಹೊಡೆಯುವ ಹುನ್ನಾರವಿದು. ಕೇಂದ್ರ ಸರ್ಕಾರ ವಕ್ಫ್‌ ಕಾಯ್ದೆಯಲ್ಲಿ ಬದಲಾವಣೆ ತಂದರೆ ರಾಜ್ಯದ ಕಾನೂನು ತಾನಾಗಿಯೇ ಹೋಗುತ್ತದೆ ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.