ADVERTISEMENT

ಒತ್ತುವರಿ ತೆರವಿಗೆ ಅಡ್ಡಿ: ಬಿಜೆಪಿ ಮುಖಂಡನ ಬಂಧನ, ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 15:51 IST
Last Updated 10 ಜುಲೈ 2024, 15:51 IST
ಬಸವಕಲ್ಯಾಣದ ಮುಖ್ಯ ರಸ್ತೆಯ ಪಕ್ಕದ ಅಂಗಡಿಗಳ ಎದುರಲ್ಲಿನ ಚರಂಡಿಗಳ ಮೇಲಿರುವ ಅನಧಿಕೃತ ಕಟ್ಟೆಗಳನ್ನು ನಗರಸಭೆಯಿಂದ ಒಡೆಯಲಾಗಿದೆ
ಬಸವಕಲ್ಯಾಣದ ಮುಖ್ಯ ರಸ್ತೆಯ ಪಕ್ಕದ ಅಂಗಡಿಗಳ ಎದುರಲ್ಲಿನ ಚರಂಡಿಗಳ ಮೇಲಿರುವ ಅನಧಿಕೃತ ಕಟ್ಟೆಗಳನ್ನು ನಗರಸಭೆಯಿಂದ ಒಡೆಯಲಾಗಿದೆ   

ಬಸವಕಲ್ಯಾಣ: ನಗರಸಭೆಯಿಂದ ಬುಧವಾರ ಕೈಗೊಂಡಿದ್ದ ಅತಿಕ್ರಮಣ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದ ಬಿಜೆಪಿ ಮುಖಂಡ ರವಿ ಚಂದನಕೆರೆ ಮತ್ತು ಓಣಿಯ ನಿವಾಸಿ ಹಬೀಬ್ ಎನ್ನುವವರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ.

ತಹಶೀಲ್ದಾರ್ ಶಾಂತಗೌಡ ಬಿರಾದಾರ, ನಗರಸಭೆ ಆಯುಕ್ತ ರಾಜೀವ ಬಣಕಾರ ನೇತೃತ್ವದಲ್ಲಿ ನಗರದ ರೇಣಾ ಓಣಿಯಲ್ಲಿನ ಚರಂಡಿ ಹಾಗೂ ಪಾದಚಾರಿ ಮಾರ್ಗದ ಮೇಲೆ ನಿರ್ಮಿಸಿದ್ದ ಅತಿಕ್ರಮಣ ತೆರವು ನಡೆದಿತ್ತು. ಆಗ ಈ ಇಬ್ಬರೂ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ. ಆದ್ದರಿಂದ ಸ್ಥಳದಲ್ಲಿದ್ದ ಪಿಎಸ್‌ಐ ಅಂಬರೀಶ ವಾಘಮೋರೆ ಅವರು ಇಬಬರನ್ನು ಇವರನ್ನು ಠಾಣೆಗೆ ಕರೆದೊಯ್ದು ಬಳಿಕ ಬಿಡುಗಡೆಮಾಡಿದ್ದಾರೆ. ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

ಮೂರು ದಿನಗಳಿಂದ ಪ್ರಮುಖ ರಸ್ತೆಗಳಲ್ಲಿನ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆದಿದೆ. ಅನೇಕ ಕಡೆಗಳಲ್ಲಿನ ಮನೆ ಮತ್ತು ಅಂಗಡಿಗಳ ಎದುರಿನ ಚರಂಡಿ ಹಾಗೂ ಪಾದಚಾರಿ ಮಾರ್ಗಗಳ ಮೇಲೆ ನಿರ್ಮಿಸಿದ್ದ ಕಟ್ಟೆ, ತಾತ್ಕಾಲಿಕ ಶೆಡ್‌ಗಳನ್ನು ತೆರವುಗೊಳಿಸಲಾಗಿದೆ.

ನಗರಸಭೆ ಆಯುಕ್ತರು ಕೆಲ ದಿನ ಮೊದಲೇ ಈ ಸಂಬಂಧ ಪ್ರಕಟಣೆ ನೀಡಿ ತೆರವು ಕಾರ್ಯಾ ಆರಂಭಿಸಿದ್ದಾರೆ. ಮೊದಲದಿನ ತ್ರಿಪುರಾಂತದಿಂದ ಕಾರ್ಯಾಚರಣೆ ಆರಂಭ ಆಗಿರುವುದನ್ನು ನೋಡಿ ಅನೇಕರು ತಮ್ಮ ಕಟ್ಟಡ ಮತ್ತು ಸಾಮಗ್ರಿಗಳಿಗೆ ಹಾನಿ ಆಗದಂತೆ ಸ್ವಯಂ ತೆರವು ಕೈಗೊಂಡರು. ಅಂಗಡಿಗಳ ಮುಂದೆ ಹಾಕಿದ್ದ ಶೆಡ್‌ನ ತಗಡುಗಳನ್ನು, ಮುಂದಕ್ಕೆ ಬಾಗಿದ್ದ ನಾಮಫಲಕಗಳನ್ನು ಹಾಗೂ ಕಟ್ಟೆಗಳ ಹಾಸುಗಲ್ಲುಗಳನ್ನು ತೆಗೆದರು. ಆದರೆ ಕೆಲವರು ಹಾಗೇಯೇ ಇಟ್ಟಿದ್ದರಿಂದ ಅಂಥ ಕಟ್ಟೆಗಳನ್ನು ನಗರಸಭೆಯ ಜೆಸಿಬಿಯಿಂದ ತೆಗೆಯಲಾಯಿತು. ಹರಳಯ್ಯ ವೃತ್ತ, ಡಾ.ಅಂಬೇಡ್ಕರ್ ವೃತ್ತ, ಮಹಾತ್ಮ ಗಾಂಧೀಜಿ ವೃತ್ತ ಮತ್ತಿತರೆಡೆಯಲ್ಲಿ ತೆರವು ಕಾರ್ಯ ನಡೆದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.