ಔರಾದ್ (ಬೀದರ್ ಜಿಲ್ಲೆ): ಆ್ಯಸಿಡಿಟಿ ಸಮಸ್ಯೆಯಿಂದ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ಪ್ರಭು ಚವಾಣ್ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಶುಕ್ರವಾರ ಅಲ್ಲಿಯ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಕಳೆದ ಶನಿವಾರ ಅಮರೇಶ್ವರ ಜಾತ್ರೆಯಲ್ಲಿ ಭಾಗವಹಿಸಿ ಮನೆಗೆ ಹೋದ ನಂತರ ಎದೆಯಲ್ಲಿ ನೋವು ಕಾಣಿಸಿಕೊಂಡಿತು. ತಕ್ಷಣವೇ ನೆರೆಯ ಮಹಾರಾಷ್ಟ್ರದ ಉದಗೀರ್ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಕೊಂಡು ಅಲ್ಲಿಯ ವೈದ್ಯರ ಸಲಹೆ ಮೇರೆಗೆ ಮುಂಬೈ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು. ಬಿಸಿಲಿನ ಝಳವೂ ಅವರ ಅನಾರೋಗ್ಯ ಕಾರಣವಾಗಿದೆ. ಈಗ ಅವರು ಪೂರ್ಣ ಗುಣಮುಖರಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ಅವರು ತಾಲ್ಲೂಕಿಗೆ ವಾಪಸ್ ಬರಲಿದ್ದಾರೆ ಎಂದು ಶಾಸಕರ ಆಪ್ತರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಹಾಲಿ ಬೀದರ್ ಸಂಸದರೂ ಆದ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಟಿಕೆಟ್ ಘೋಷಣೆಯಾದ ದಿನವೇ ಆರೋಗ್ಯದಲ್ಲಿ ಏರುಪೇರಾಗಿತ್ತು. ಖೂಬಾ ಅವರಿಗೆ ಟಿಕೆಟ್ ನೀಡದಂತೆ ಒತ್ತಾಯಿಸುತ್ತ ಬಂದವರಲ್ಲಿ ಪ್ರಭು ಚವಾಣ್ ಪ್ರಮುಖರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.