ADVERTISEMENT

ಟಿಪ್ಪು ಪಾಠ ಓದಿ ಮಕ್ಕಳು ದೇಶಭಕ್ತಿ ಬೆಳೆಸಿಕೊಳ್ಳಲು ಸಾಧ್ಯವೇ?: ಪ್ರಭು ಚೌಹಾಣ್

​ಪ್ರಜಾವಾಣಿ ವಾರ್ತೆ
Published 16 ಜೂನ್ 2023, 14:25 IST
Last Updated 16 ಜೂನ್ 2023, 14:25 IST
   

ಬೀದರ್‌: ‘ಮತಾಂಧ ಟಿಪ್ಪು ಸುಲ್ತಾನ್‌ ಕುರಿತ ಪಾಠವನ್ನು ಓದಿ ಮಕ್ಕಳು ದೇಶಭಕ್ತಿ ಬೆಳೆಸಿಕೊಳ್ಳಲು ಸಾಧ್ಯವೇ?’ ಮಕ್ಕಳು ದೇಶಭಕ್ತಿಯ ಪಾಠ ಕಲಿಯುವುದು ಕಾಂಗ್ರೆಸ್‌ ಸರ್ಕಾರಕ್ಕೆ ಬೇಡವಾಗಿದೆ’ ಎಂದು ಮಾಜಿ ಸಚಿವರೂ ಆದ ಔರಾದ್‌ ಬಿಜೆಪಿ ಶಾಸಕ ಪ್ರಭು ಚವಾಣ್‌ ಆರೋಪಿಸಿದ್ದಾರೆ.

ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಅಸ್ಥಿರತೆ ಸೃಷ್ಟಿಸಲು ಬೇಕಾದ ಎಲ್ಲ ಕೆಲಸಗಳಿಗೆ ಮುನ್ನುಡಿ ಬರೆಯುತ್ತಿದೆ. ಬಿಜೆಪಿ ಸರ್ಕಾರ ಜನಹಿತಕ್ಕಾಗಿ ಜಾರಿಗೊಳಿಸಿದ ಮತಾಂತರ ನಿಷೇಧ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಪಠ್ಯಪುಸ್ತಕ ಪರಿಷ್ಕರಣೆಯನ್ನು ಕೈಬಿಡಲು ಹೊರಟಿರುವುದು ದ್ವೇಷ ರಾಜಕಾರಣವಲ್ಲದೆ ಮತ್ತೇನೂ? ಎಂದು ಶುಕ್ರವಾರ ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ತಿಂಗಳು ಪೂರೈಸುತಿದ್ದಂತೆ ಸಮುದಾಯಗಳ ನಡುವೆ ಒಡಕು ಮೂಡಿಸಿ ದ್ವೇಷದ ರಾಜಕಾರಣದ ಮೂಲಕ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ಘೋಷಿಸಿದ ಗ್ಯಾರೆಂಟಿಗಳು ಈಗಾಗಲೇ ಜನರಲ್ಲಿ ದೊಡ್ಡ ಮಟ್ಟಿನ ಗೊಂದಲಕ್ಕೆ ಎಡೆ ಮಾಡಿದೆ. ಸರ್ಕಾರ ಬಂದ 24 ಗಂಟೆಯಲ್ಲೇ ಗ್ಯಾರಂಟಿ ಜಾರಿಗೆ ಮಾಡುತ್ತೇವೆ ಎಂದು ಘೊಷಣೆ ಮಾಡಿದ್ದರು. ಆದರೆ, ಇದೀಗ ಷರತ್ತುಗಳ ಮೇಲೆ ಷರತ್ತುಗಳನ್ನು ವಿಧಿಸುತ್ತ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ADVERTISEMENT

ಕಾಂಗ್ರೆಸ್ ಜನರನ್ನು ಮರಳು ಮಾಡಿ ಅಧಿಕಾರಕ್ಕೇರಿರುವುದು ಇದೀಗ ಸ್ಪಷ್ಟವಾಗಿದೆ. ಈಗಾಲಾದರೂ ಎಚ್ಚೆತ್ತುಕೊಂಡು ದ್ವೇಷ ರಾಜಕಾರಣ ಮಾಡುವುದರ ಬದಲು ಜನರ ತಿರ್ಪನ್ನು ಗೌರವಿಸಿ ಒಳ್ಳೆಯ ಆಡಳಿತ ನೀಡಬೇಕು. ರಾಜ್ಯದೆಲ್ಲೆಡೆ ವಿದ್ಯುತ್ ಬಿಲ್ ಪಾವತಿಗೆ ಜನ ಕೆಲವೆಡೆ ತಗಾದೆ ತೆಗೆದು ಮೀಟರ್ ರೀಡಿಂಗ್‍ಗೆ ಬಂದ ಸಿಬ್ಬಂದಿಯೊಂದಿಗೆ ವಾದ ನಡೆಸುತ್ತಿರುವ ಪ್ರಕರಣಗಳೂ ಅಲ್ಲಲ್ಲಿ ವರದಿಯಾಗುತ್ತಿವೆ. ಯಾವುದೇ ಸ್ಪಷ್ಟತೆ ಇಲ್ಲದೆ ಯೋಜನೆ ಘೋಷಿಸಿದ್ದರ ಪರಿಣಾಮ ಇದು. ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಆರಂಭದಿಂದಲೂ ಗೊಂದಲಮಯವಾಗಿದೆ. ಗ್ಯಾರಂಟಿಗೆ ಕಂಡೀಶನ್ ಯಾಕೆ? ಗ್ಯಾರಂಟಿ ಯೋಜನೆ ನಿಮಗೂ ಇದೆ. ನಮಗೂ ಇದೆ ಎಂದು ಚುನಾವಣೆ ಭಾಷಣದಲ್ಲಿ ಸಿದ್ದರಾಮಯ್ಯ, ಡಿಕೆಶಿ ಘೋಷಿಸಿದ್ದರು. ಆದರೆ ಈಗೇಕೇ ಷರತ್ತು ಹಾಕುತ್ತಿದ್ದಾರೆ ಎಂದು ಕೇಳಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.