ADVERTISEMENT

ಸ್ವಾತಂತ್ರ್ಯ ಹೋರಾಟ, ತ್ರಿವರ್ಣ ಧ್ವಜವನ್ನೇ ಬಿಜೆಪಿ ಒಪ್ಪಿಲ್ಲ: ಹರಿಪ್ರಸಾದ್‌

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2024, 16:31 IST
Last Updated 29 ಏಪ್ರಿಲ್ 2024, 16:31 IST
<div class="paragraphs"><p>ಬಿ.ಕೆ.ಹರಿಪ್ರಸಾದ್‌ </p></div>

ಬಿ.ಕೆ.ಹರಿಪ್ರಸಾದ್‌

   

ಬೀದರ್‌: ‘ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯವರು ಈ ದೇಶದ ಸ್ವಾತಂತ್ರ್ಯ ಹೋರಾಟ, ತ್ರಿವರ್ಣ ಧ್ವಜವನ್ನೇ ಒಪ್ಪಿಕೊಂಡಿಲ್ಲ. ಧ್ವಜದಲ್ಲಿರುವ ಮೂರು ಬಣ್ಣಗಳು ಅಶುಭ ಎಂದು ಒಪ್ಪಿಲ್ಲ. ಇನ್ನು ಸಂವಿಧಾನವೆಲ್ಲಿ ಒಪ್ಪುತ್ತಾರೆ. ಈಗ ಚುನಾವಣೆ ಸಂದರ್ಭ ಇರುವುದರಿಂದ ಸಂವಿಧಾನ ಪರ ಮಾತುಗಳನ್ನು ಆಡುತ್ತಿದ್ದಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಹೇಳಿದರು.

ಸಂವಿಧಾನ ಬದಲಿಸುವುದು ಬಿಜೆಪಿಯ ಗುಪ್ತ ಕಾರ್ಯಸೂಚಿ. ರಾಜಸ್ತಾನದಲ್ಲಿ ಅವರ ಪಕ್ಷದ ಸಂಸದರೇ ಅದರ ಬಗ್ಗೆ ಹೇಳಿದ್ದಾರೆ. ಚುನಾವಣೆಯಲ್ಲಿ 400 ಸೀಟು ಗೆದ್ದರೆ ಸಂವಿಧಾನ ಬದಲಿಸುತ್ತೇವೆ ಅಂದಿದ್ದಾರೆ. ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು 2015ರಲ್ಲಿ ಮೀಸಲಾತಿ ಹೋಗಬೇಕೆಂದು ಹೇಳಿದ್ದರು. ಆದರೆ, ಬಿಹಾರದ ಚುನಾವಣೆಯಲ್ಲಿ ಪಾಠ ಕಲಿತು ಈಗ ತಿದ್ದಿಕೊಂಡಿರುವುದು ಬಹಳ ಸಂತೋಷ ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ವೀರ ಸಾವರ್ಕರ್‌, ಗೋಳ್ವಾಳ್ಕರ್‌ ಅವರು ಸಂವಿಧಾನದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಕಾಣಿಸುತ್ತಿದೆ ಎಂದಿದ್ದಾರೆ. ಸಂವಿಧಾನದ ಬಗೆಗಿನ ಅವರ ಮನಃಸ್ಥಿತಿ ತೋರಿಸುತ್ತದೆ. ದೇಶದಲ್ಲಿ ತಾಲಿಬಾನ್‌ ಸರ್ಕಾರ ಇಲ್ಲ. ಅಫ್ಘಾನಿಸ್ತಾನ ಸುಧಾರಣೆ ಆಗುತ್ತಿದೆ. ಈ ಬಿಜೆಪಿಯವರು ಯಾವಾಗ ಸುಧಾರಣೆ ಆಗುತ್ತಾರೋ ಗೊತ್ತಿಲ್ಲ’ ಎಂದು ಟೀಕಿಸಿದರು.

ಮೋದಿಯವರು ತನ್ನನ್ನು ಯಾವಾಗಲೂ ವಿಶ್ವಗುರು ಎಂದು ಹೇಳಿಕೊಳ್ಳುತ್ತಾರೆ. ಆದರೆ, ಮೀನು, ಮುಸಲ್ಮಾನ, ಪಾಕಿಸ್ತಾನ ಇದನ್ನು ಮಾತಾಡುತ್ತಿದ್ಧಾರೆ. 140 ಕೋಟಿ ಜನ ಧರ್ಮ, ಜಾತಿ, ಭಾಷೆ ಬೇರೆ ಬೇರೆಯಿದ್ದರೂ ಎಲ್ಲರೂ ಸಮಾನರು. ಸೌಹಾರ್ದತೆಯಿಂದ ಎಲ್ಲರೂ ಬದುಕುತ್ತಿದ್ದಾರೆ. ಹಿಂದಿನ ಹತ್ತು ವರ್ಷಗಳಲ್ಲಿ ಏನು ಮಾಡಿದ್ದೇವೆ. ಮುಂದಿನ ಐದು ವರ್ಷಗಳಲ್ಲಿ ಏನು ಮಾಡುತ್ತೇವೆ ಎಂದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಲ್ಲ. ಇವರ ಅಮೃತಕಾಲಕ್ಕಾಗಿ ಯುವಕರು 23 ವರ್ಷ ಕಾಯಬೇಕಾ? ಎಂದು ಪ್ರಶ್ನಿಸಿದರು.

‘2014ರಲ್ಲಿ ಅಚ್ಛೆ ದಿನ್‌, ಕೌಶಲ ಭಾರತ, ಮೇಕ್‌ ಇನ್‌ ಇಂಡಿಯಾ ಅಂತ ಹೇಳಿದ್ರು. ಅದರಿಂದ ಯಾರಿಗೆ ಅನುಕೂಲ ಆಗಿದೆ ಎಂದು ಹೇಳುತ್ತಿಲ್ಲ. ಈ ದೇಶದ ಜನರಿಗೆ ವಿಶ್ವಾಸದ್ರೋಹ ಮಾಡಿರುವುದು ಗೊತ್ತಾಗಿದೆ. ಭಯೋತ್ಪಾದನೆ ಸಂಪೂರ್ಣ ನಿರ್ಮೂಲನೆ ಮಾಡುತ್ತೇವೆ. ಭ್ರಷ್ಟಾಚಾರ ತೊಲಗಿಸುತ್ತೇನೆ ಎಂದು ಹೇಳಿದ್ದರು. ಆದರೆ, ಭ್ರಷ್ಟಾಚಾರದ ಅಕ್ರಮವನ್ನು ಸಕ್ರಮಗೊಳಿಸಿದ್ದಾರೆ. ಅದು ಚುನಾವಣಾ ಬಾಂಡ್‌ ಮೂಲಕ. ಯಾರು ದೇಣಿಗೆ ಕೊಟ್ಟಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಾಗಿದೆ’ ಎಂದರು.

‘ಉದ್ಯೋಗ ಸಿಗದೆ, ರೈತರಿಗೆ ಬೆಲೆ ಸಿಗದೆ ಗಂಟೆಗೊಬ್ಬ ಯುವಕ, ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ’ ಎಂದು ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಮತ್ತಿತರರು ಹಾಜರಿದ್ದರು.

ಕರ್ನಾಟಕದ ರಾಜಕೀಯ ಈ ಮಟ್ಟಕ್ಕೆ ಇಳಿಯುತ್ತದೆ ಅಂತ ಯಾರು ಅಂದುಕೊಂಡಿರಲಿಲ್ಲ. ಕಾಲ ಅದನ್ನು ಸರಿಪಡಿಸುತ್ತದೆ. ಪೆನ್‌ಡ್ರೈವ್‌, ಸಿಡಿ, ಟೇಪ್‌ ಬರುತ್ತೆ.
ಬಿ.ಕೆ. ಹರಿಪ್ರಸಾದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.