ಬೀದರ್: ಜಿಲ್ಲೆಯಲ್ಲಿ ಮಾಂಜ್ರಾ ನದಿ ತುಂಬಿ ಹರಿಯುತ್ತಿದೆ. ಕಾರಂಜಾ ಜಲಾಶಯವೂ ಭರ್ತಿಯಾಗಿದೆ. ದಿನದ 24 ಗಂಟೆ ನೀರು ಪೂರೈಸುವ ಯೋಜನೆ ಯಶ ಕಂಡಿಲ್ಲ. ಜನರಿಗೆ ನೀರಿನ ಚಿಂತೆಯೂ ತಪ್ಪಿಲ್ಲ. ನಲ್ಲಿಗಳಲ್ಲಿ ಸಕಾಲದಲ್ಲಿ ಸಮರ್ಪಕ ನೀರು ಬರದ ಕಾರಣ ಜನ ಕೊಳವೆ ಬಾವಿಗಳನ್ನು ಕೊರೆಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಲೂಟಿಗೆ ನಿಂತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ. ಅಭಿವೃದ್ಧಿಗಿಂತ ಅಕ್ರಮ ವ್ಯವಹಾರ ಹಾಗೂ ಲೂಟಿಯೇ ಪ್ರಾಧಾನ್ಯತೆ ಪಡೆದುಕೊಂಡಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಅಧಿಕಾರ ಇದ್ದರೂ, ಜಿಲ್ಲಾ ಉಸ್ತುವಾರಿ ಸಚಿವರು ಅವರು ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಧ್ವಜ ಹಾರಿಸಲಿಕ್ಕೂ ಬರಲಿಲ್ಲ. ಹಿರಿಯ ಅಧಿಕಾರಿಗಳು ಸರಿಯಾಗಿ ಪ್ರಗತಿ ಪರಿಶೀಲನೆ ಹಾಗೂ ಮೇಲ್ವಿಚಾರಣೆ ನಡೆಸದಿರುವುದು ಕೆಳ ಹಂತದ ಅಧಿಕಾರಿಗಳು ವಾಮಮಾರ್ಗದಲ್ಲಿ ಸಾಗುವುದಕ್ಕೆ ದಾರಿ ಮಾಡಿಕೊಟ್ಟಿದೆ.
ಅಕ್ರಮ ವ್ಯವಹಾರದಲ್ಲಿ ಬೀದರ್ ನಗರಸಭೆ ಮುಂಚೂಣಿಯಲ್ಲಿದೆ. ಹಣ ಇಲ್ಲದಿದ್ದರೆ ಇಲ್ಲಿ ಯಾವ ಕೆಲಸಗಳೂ ಆಗುವುದಿಲ್ಲ. ಕೊಳವೆಬಾವಿ ಕೊರೆಸಲು ಬೇಕಿರುವ ಅನುಮತಿ ಕೊಡಲು ಅಧಿಕಾರಿಗಳು ಸಾವಿರಾರು ರೂಪಾಯಿ ಲಂಚ ಪಡೆಯುತ್ತಿದ್ದಾರೆ. ಕೊಳವೆಬಾವಿ ಕೊರೆಯುವ ಯಂತ್ರದ ವಾಹನಗಳ ಮಾಲೀಕರೂ ನಿರ್ದಿಷ್ಟ ಹಣ ಕೊಡಲೇ ಬೇಕಾದ ಸ್ಥಿತಿ ಇದೆ.
ಖಾಸಗಿಯವರು ಕೊಳವೆಬಾವಿ ಕೊರೆಸಬೇಕಾದರೆ ಯಾರು ಅನುಮತಿ ಕೊಡಬೇಕು ಎನ್ನುವ ಸರಿಯಾದ ಮಾಹಿತಿ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೂ ಇಲ್ಲ. ಅದು ಜಿಲ್ಲಾಧಿಕಾರಿ ಕಚೇರಿಗೆ ಸಂಬಂಧಪಟ್ಟ ವಿಷಯ ಎಂದು ಹೇಳಿದರೆ, ಜಿಲ್ಲಾ ಮಟ್ಟದ ಅಧಿಕಾರಿಗಳು ನಗರ ಸ್ಥಳೀಯ ಸಂಸ್ಥೆಗಳೇ ಅನುಮತಿ ಕೊಡಬೇಕು ಎಂದು ಸಮಜಾಯಿಸಿ ನೀಡುತ್ತಾರೆ. ಈ ಗೊಂದಲದಲ್ಲಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳು ದಾಖಲೆಗಳನ್ನೇ ಇಟ್ಟುಕೊಂಡಿಲ್ಲ.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಖಾಸಗಿಯವರು ಕೊಳವೆಬಾವಿ ಕೊರೆಸುತ್ತಿದ್ದರೆ ಸ್ಥಳೀಯ ಆಡಳಿತದಿಂದ ಅದಕ್ಕೆ ಅನುಮತಿ ಅಗತ್ಯ. ಪೌರಾಯುಕ್ತರು ಹಾಗೂ ಮುಖ್ಯಾಧಿಕಾರಿಗಳು ಸಂಬಂಧಪಟ್ಟ ದಾಖಲೆಗಳನ್ನು ಇಟ್ಟುಕೊಳ್ಳಬೇಕು ಎಂದು ಬೀದರ್ ನಗರ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮೋತಿಲಾಲ್ ಲಮಾಣಿ ಸ್ಟಷ್ಟಪಡಿಸುತ್ತಾರೆ.
ಜಿಲ್ಲೆಯಲ್ಲಿ ಒಟ್ಟು 20 ಕೊಳವೆಬಾವಿ ಕೊರೆಯುವ ಯಂತ್ರದ ವಾಹನಗಳಿವೆ. ಬೀದರ್ ನಗರದಲ್ಲಿ ಐದು ಕೊಳವೆಬಾವಿ ಕೊರೆಯುವ ಏಜೆನ್ಸಿಗಳು ಇದ್ದವು. ಅಧಿಕಾರಿಗಳ ಕಿರಿಕಿರಿಗೆ ಈಗಾಗಲೇ ಮೂರು ಏಜೆನ್ಸಿಗಳು ಬಾಗಿಲು ಮುಚ್ಚಿವೆ. ಎರಡು ಏಜೆನ್ಸಿಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಅವು ಸಹ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಅಧಿಕಾರಿಗಳಿಗೆ ಮಾಮುಲು ಕೊಡುತ್ತಿವೆ ಎಂದು ಏಜೆನ್ಸಿಯ ಸಿಬ್ಬಂದಿ ಹೇಳುತ್ತಾರೆ.
ಕೊಳವೆಬಾವಿಗೆ ಅನುಮತಿ ಕೊಡಲು ನಗರಸಭೆಗೆ ₹ 5,300 ಶುಲ್ಕ ಪಾವತಿಸಬೇಕು. ಆದರೆ, ₹ 12 ಸಾವಿರದಿಂದ ₹ 15 ಸಾವಿರ ಕೊಡುವವರೆಗೂ ಅಧಿಕಾರಿಗಳು ಅನುಮತಿ ಕೊಡುವುದೇ ಇಲ್ಲ. ಸರ್ಕಾರ ನಿಗದಿ ಪಡಿಸಿದ ಶುಲ್ಕ ಹೊರತು ಪಡಿಸಿ ಉಳಿದ ಹಣವನ್ನು ಕಚೇರಿ ಸಿಬ್ಬಂದಿ ಹಾಗೂ ಅಧಿಕಾರಿಗಳು ಹಂಚಿಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಇನ್ನು ಅನುಮತಿ ಪಡೆಯದೇ ಕೊಳವೆಬಾವಿ ಕೊರೆಯುವ ಏಜಿನ್ಸಿಗಳಿಗೆ ದಂಡ ವಿಧಿಸಿದ್ದನ್ನು ಕೇಳಿದರೆ ಎಂಥವರಿಗೂ ಅಚ್ಚರಿಯಾಗುತ್ತದೆ. ಅನುಮತಿ ಇಲ್ಲದೇ ಕೊಳವೆಬಾವಿ ಕೊರೆಯುವಾಗ ನಗರಸಭೆ ಅಧಿಕಾರಿಗಳು ದಾಳಿ ಮಾಡಿ, ವಾಹವ ಜಪ್ತಿ ಮಾಡಿ ದೊಡ್ಡ ಪ್ರಮಾಣದ ದಂಡ ವಿಧಿಸುತ್ತಾರೆ. ಆದರೆ, ದಂಡದ ಮೊತ್ತವನ್ನು ಸರ್ಕಾರಕ್ಕೆ ಪಾವತಿಸುತ್ತಿಲ್ಲ ಎನ್ನುವ ದೂರುಗಳಿವೆ.
ಜಪ್ತಿ ಮಾಡಿದ ವಾಹನ ಬಿಡಿಸಿಕೊಳ್ಳಲು ₹ 75 ಸಾವಿರ ನಗದು ದಂಡ ತುಂಬುವಂತೆ ಸೂಚಿಸಿದರು. ಹಣ ಪಾವತಿಸಿದ ನಂತರ ₹ 25 ಸಾವಿರ ಮೊತ್ತದ ರಸೀದಿ ಕೊಟ್ಟರು. ಉಳಿದ ₹ 50 ಸಾವಿರ ಅವರೇ ಇಟ್ಟುಕೊಂಡರು. ರಸೀದಿಯನ್ನೂ ಕೊಡಲಿಲ್ಲ ಎಂದು ಕೊಳವೆಬಾವಿ ಏಜೆನ್ಸಿಯ ಮಾಲೀಕರೊಬ್ಬರು ತಮ್ಮ ಅಳಲು ತೋಡಿಕೊಂಡರು.
‘ನಗರಸಭೆ ಅಧಿಕಾರಿಗಳು ಕೊಳವೆಬಾವಿ ಕೊರೆಸಲು ನಿಗದಿಪಡಿಸಿದ್ದಕಿಂತ ಹೆಚ್ಚಿನ ಹಣ ಪಡೆಯುತ್ತಿದ್ದಾರೆ. ದಂಡದ ಮೂರು ಪಟ್ಟು ಹಣ ಪಡೆದು ಎರಡು ಪಟ್ಟು ತಾವೇ ಇಟ್ಟುಕೊಳ್ಳುತ್ತಿದ್ದಾರೆ. ಹೊಸದಾಗಿ ಅರ್ಜಿ ಹಾಕಿದರೆ ತಿಂಗಳು ಗಟ್ಟಲೇ ಕಚೇರಿಗೆ ಅಲೆದಾಡಬೇಕಾದ ಸ್ಥಿತಿ ಇದೆ. ಹಣ ಕೊಟ್ಟರೆ 20 ದಿನಗಳ ನಂತರ ಅನುಮತಿ ಕೊಡುತ್ತಾರೆ’ ಎಂದು ಕೊಳವೆಬಾವಿ ಕೊರೆಯುವ ಯಂತ್ರ ಸಾಗಿಸುವ ವಾಹನದ ಮಾಲೀಕ ಮಹಾದೇವ ಕುಮಾರ ದೂರುತ್ತಾರೆ.
ಹಳ್ಳ ಹಿಡಿದ ನಿರಂತರ ನೀರು ಯೋಜನೆ
ಬೀದರ್ ನಗರದಲ್ಲಿ ಪ್ರಸ್ತುತ 34,495 ಮನೆಗಳಿವೆ. ಪ್ರಸ್ತುತ 29,380 ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಇನ್ನೂ ಅನೇಕ ಮನೆಗಳಿಗೆ ಸಂಪರ್ಕ ಕಲ್ಪಿಸಿಲ್ಲ. ನಿರಂತರ ನೀರು ಪೂರೈಕೆ ಯೋಜನೆ ಹಳ್ಳ ಹಿಡಿದಿದೆ.
ಜಲ ಮಂಡಳಿ ಯೋಜನೆ ಅನುಷ್ಠಾನಗೊಳಿಸಿದ ಬಹುತೇಕ ಕಡೆ ನೀರು ಪೂರೈಕೆಯಾಗುತ್ತಿಲ್ಲ. ಮುಲ್ತಾನಿ ಕಾಲೊನಿ, ಲೇಬರ್ ಕಾಲೊನಿ, ನಾವದಗೇರಿ, ಕೋಟೆ, ಚೌಬಾರಾ, ಮಂಗಲಪೇಟೆ, ಬಸವನಗರ, ಮೋಹನ್ ಮಾರ್ಕೆಟ್, ಅಂಬೇಡ್ಕರ್ ಕಾಲೊನಿ, ಶಿವನಗರ, ಕೆಎಚ್‌ಬಿ ಕಾಲೊನಿ, ಪ್ರತಾಪನಗರ, ಗಾಂಧಿ ಗಂಜ್, ಲಿಡಕರ್ ಕಾಲೊನಿ, ಚಿದ್ರಿ ಹಾಗೂ ಮೈಲೂರಲ್ಲಿ ಜನ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ನಿರಂತರ ನೀರು ಯೋಜನೆಯ ಸಹವಾಸವೇ ಬೇಡ ಎಂದು ಬಹಳಷ್ಟು ಜನ ಕೊಳವೆಬಾವಿ ಕೊರೆಸುತ್ತಿದ್ದಾರೆ.
ಬೀದರ್ ನಗರದಲ್ಲಿ ಕೊಳವೆಬಾವಿ ನಿಷೇಧಿಸಲು ಏನು ಕಾರಣ?
ಬೀದರ್ ನಗರ ಗುಡ್ಡದ ಮೇಲಿದೆ. ಬಹಮನಿ ಸುಲ್ತಾನರ ಕಾಲದಲ್ಲಿ ಕೋಟೆಯೊಳಗೆ ನೀರು ಸರಬರಾಜು ಮಾಡಲು ಭೂಕಾಲುವೆ ನಿರ್ಮಿಸಲಾಗಿದೆ. ಭೂಕಾಲುವೆಯಲ್ಲಿ ಈಗಲೂ ನೀರು ಹರಿಯುತ್ತಿದೆ. ಮೊದಲು ಬಹುತೇಕ ಎಲ್ಲ ಮನೆಗಳ ಮುಂದೆ ಚಿಕ್ಕದಾದ ಬಾವಿಗಳು ಇದ್ದವು. ನಿರಂತರ ನೀರು ಯೋಜನೆಯ ಭರವಸೆ ಮೇಲೆ ಮನೆ ಕಟ್ಟಿಕೊಂಡವರು ತಮ್ಮ ಮನೆ ಮುಂದಿನ ಬಾವಿಗಳನ್ನು ಮುಚ್ಚಿ ಈಗ ಕಂಗಾಲಾಗಿದ್ದಾರೆ. ಅಂಥವರು ಈಗ ಕೊಳವೆಬಾವಿ ಕೊರೆಸುತ್ತಿದ್ದಾರೆ.
ಪರಂಪರೆ ನಗರದಲ್ಲಿರುವ ಐತಿಹಾಸಿಕ ಭೂಕಾಲುವೆಗೆ ಧಕ್ಕೆಯಾಗಲಿದೆ ಹಾಗೂ ಬೇಕಾಬಿಟ್ಟಿಯಾಗಿ ಕೊಳವೆಬಾವಿ ಕೊರೆದ ನಂತರ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿಯಲಿದೆ ಎನ್ನುವ ಕಾರಣಕ್ಕೆ ನಗರದಲ್ಲಿ ಕೊಳವೆಬಾವಿ ಕೊರೆಯುವುದನ್ನು ನಿಷೇಧಿಸಲಾಗಿತ್ತು.
ರಾಜಕಾರಣಿಗಳು ಸರ್ಕಾರದ ಮೇಲೆ ಒತ್ತಡ ಹಾಕಿ ಮತ್ತೆ ನಿಷೇಧ ತೆರವುಗೊಳಿಸುವಂತೆ ಮಾಡಿದ್ದಾರೆ. ಆದರೆ, ನಗರದಲ್ಲಿ ನಿಷೇಧ ಇರಲಿ, ಬಿಡಲಿ ಕೊಳವೆಬಾವಿ ಕೊರೆಯುವುದು ನಿರಂತರವಾಗಿ ನಡೆದಿದೆ. ನಿಷೇಧ ಇದ್ದಾಗಲೂ ಅಧಿಕಾರಿಗಳು ಹಣ ಪಡೆದು ರಾತ್ರಿ 10 ಗಂಟೆ ನಂತರ ಕೊಳವೆಬಾವಿ ಕೊರೆಸುವಂತೆ ಸೂಚಿಸಿ ತಮ್ಮ ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿ ನಿದ್ರಿಸುತ್ತಿದ್ದರು. ಬೆಳಗಾಗುವುದರಲ್ಲಿ ಎಲ್ಲವೂ ಮುಗಿದಿರುತ್ತಿತ್ತು. ಸಾರ್ವಜನಿಕರು ದೂರು ಕೊಟ್ಟರೂ ಪ್ರಯೋಜನ ಆಗುತ್ತಿರಲಿಲ್ಲ. ಈಗಂತೂ ‘ಕಾಂಚಾಣಂ ಕಾರ್ಯಸಿದ್ಧಿ’ಯೇ ಮಹತ್ವ ಪಡೆದುಕೊಂಡಿದೆ.
ಹೊಸ ಮನೆ ಕಟ್ಟುವ ಮೊದಲು ಕೊಳವೆಬಾವಿ ಕೊರೆತ
ಬಸವಕಲ್ಯಾಣ: ನಗರದ ಬೆಳವಣಿಗೆ ಭರದಿಂದ ಸಾಗಿದ್ದು ಹೊಸ ಮನೆ ಕಟ್ಟುವ ಮೊದಲು ಕೊಳವೆಬಾವಿ ಕೊರೆಯುವುದು ರೂಢಿಯಾಗಿದೆ. ಚುಳಕಿನಾಲಾ ಜಲಾಶಯದಲ್ಲಿ ಸಾಕಷ್ಟು ನೀರಿರುವ ಕಾರಣ ನಗರಸಭೆ ಕೊಳವೆಬಾವಿ ಕೊರೆಸಿಲ್ಲ. ಆದರೆ ಖಾಸಗಿಯವರಿಂದ ಕೊಳವೆ ಬಾವಿ ಕೊರೆಸುವುದು ನಿಂತಿಲ್ಲ.
ಎಲ್ಲೆಡೆ ನಳದ ನೀರು ಸರಬರಾಜು ಇದ್ದರೂ ಹೊಸ ಬಡಾವಣೆಯಲ್ಲಿ ಮನೆಗೊಂದು ಕೊಳವೆಬಾವಿ ಇವೆ. ಒಂದು ವರ್ಷ ಎಂಟು ತಿಂಗಳ ಅವಧಿಯಲ್ಲಿ 200 ಕೊಳವೆಬಾವಿ ಕೊರೆಸಿರುವ ಮಾಹಿತಿ ಇದೆ. ಅಧಿಕಾರಿಗಳಿಗೆ ಹಣ ತಲುಪಿಸಿದರೆ ಸಾಕು ಅನುಮತಿಯ ಅಗತ್ಯವಿಲ್ಲ ಎನ್ನುವುದು ಇಲ್ಲಿ ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ ಎಂದು ಸಾರ್ವಜನಿಕರು ಬಹಿರಂಗವಾಗಿಯೇ ಆಡಿಕೊಳ್ಳುತ್ತಾರೆ.
ಅನುಮತಿ ಇಲ್ಲದೆ ಕೊಳವೆಬಾವಿ ಕೊರೆಯದಿರಲು ಸೂಚನೆ
ಭಾಲ್ಕಿ ಪಟ್ಟಣದಲ್ಲಿ ಪುರಸಭೆ ಅನುಮತಿ ಇಲ್ಲದೆ ಕೊಳವೆಬಾವಿ ಕೊರೆಯಬಾರದು ಎಂದು ತಿಳಿಸಿ ರಾಜಕುಮಾರ ಬೋರ್‌ವೆಲ್ಸ್, ರವಿ ಬೋರವೆಲ್ಸ್ ಏಜೆನ್ಸಿ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಶರಣನಗರದಲ್ಲಿ ಅನುಮತಿ ಇಲ್ಲದೆ ಕೊಳವೆಬಾವಿ ಕೊರೆಯುತ್ತಿರುವುದು ಗಮನಕ್ಕೆ ಬಂದಿತ್ತು. ಕೂಡಲೇ ಸ್ಥಳಕ್ಕೆ ತೆರಳಿ ತಡೆಯಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸ್ವಾಮಿದಾಸ್ ಹೇಳುತ್ತಾರೆ.
ಅನುಮತಿ ಇಲ್ಲದೆ ಕೊಳವೆಬಾವಿ ಕೊರೆತ
ಔರಾದ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅನಧಿಕೃತ ಕೊಳವೆಬಾವಿ ಕೊರೆತ ನಿರಂತರವಾಗಿದೆ. ಪಟ್ಟಣ ಪಂಚಾಯಿತಿ ಅನುಮತಿ ಇಲ್ಲದೆ ವರ್ಷಕ್ಕೆ ನೂರಾರು ಕೊಳವೆಬಾವಿ ಕೊರೆಸಲಾಗುತ್ತದೆ. ಆದರೆ, ಯಾರೂ ಕೇಳುವವರಿಲ್ಲ ಎಂದು ಪರಿಸರ ಪ್ರೇಮಿಗಳು ದೂರುತ್ತಾರೆ.
ಕೊಳವೆಬಾವಿ ಕೊರೆಯಲು ಎನ್ಒಸಿ ತೆಗೆದುಕೊಳ್ಳಬೇಕು ಎಂಬ ನಿಯಮ ಇದೆ. ಇದನ್ನು ಯಾರೂ ಪಾಲಿಸುವುದಿಲ್ಲ. ಈ ಬಗ್ಗೆ ಮೇಲಾಧಿಕಾರಿ ಗಮನಕ್ಕೆ ತಂದು ಎನ್ಒಸಿ ಕಡ್ಡಾಯ ಮಾಡಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಿವಕುಮಾರ ಘಾಟೆ ತಿಳಿಸುತ್ತಾರೆ.
ಕೊಳವೆಬಾವಿ ಕೊರೆಸಲು ಪುರಸಭೆಯಿಂದ ಅನುಮತಿ ಪಡೆಯಬೇಕು ಎನ್ನುವ ಆದೇಶ ಇಲ್ಲ. ಹೀಗಾಗಿ ನಾಗರಿಕರು ಅನುಮತಿ ಕೋರಿ ಪುರಸಭೆ ಬರುವುದಿಲ್ಲ. ಈ ಸಂಬಂಧ ದಾಲೆಗಳನ್ನೂ ಇಟ್ಟಿಲ್ಲ ಎಂದು ಚಿಟಗುಪ್ಪ ಪುರಸಭೆ
ಮುಖ್ಯಾಧಿಕಾರಿ ಹುಸಾಮೋದ್ದೀನ್ ಹೇಳುತ್ತಾರೆ.
ಸಹಕಾರ: ಮಾಣಿಕ ಭೂರೆ, ಮನ್ಮಥ ಸ್ವಾಮಿ, ಬಸವರಾಜ ಪ್ರಭಾ, ಗುಂಡು ಅತಿವಾಳ, ವೀರೇಶ ಮಠಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.