ADVERTISEMENT

ಹುಮನಾಬಾದ್: ಬೋತಗಿ ಗ್ರಾಮದಲ್ಲಿ ಮೂಲಸೌಕರ್ಯ ಕೊರತೆ

ಸೂಕ್ತ ನಿರ್ವಹಣೆ ಇಲ್ಲದೆ ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ

ಪರಶುರಾಮ ಹೊಸಮನಿ
Published 22 ಸೆಪ್ಟೆಂಬರ್ 2020, 1:17 IST
Last Updated 22 ಸೆಪ್ಟೆಂಬರ್ 2020, 1:17 IST
ಹುಮನಾಬಾದ್‍ ತಾಲ್ಲೂಕಿನ ಬೋತಗಿ ಗ್ರಾಮದಲ್ಲಿ ಕೆಟ್ಟು ನಿಂತ್ತಿರುವ ಶುದ್ಧ ಕುಡಿಯುವ ನೀರಿನ ಘಟಕ (ಎಡಚಿತ್ರ) ಬೋತಗಿ ಗ್ರಾಮದಿಂದ ಅಲ್ಲೂರು ಗ್ರಾಮಕ್ಕೆ ಹೋಗುವ ರಸ್ತೆ ಹದಗೆಟ್ಟಿದೆ
ಹುಮನಾಬಾದ್‍ ತಾಲ್ಲೂಕಿನ ಬೋತಗಿ ಗ್ರಾಮದಲ್ಲಿ ಕೆಟ್ಟು ನಿಂತ್ತಿರುವ ಶುದ್ಧ ಕುಡಿಯುವ ನೀರಿನ ಘಟಕ (ಎಡಚಿತ್ರ) ಬೋತಗಿ ಗ್ರಾಮದಿಂದ ಅಲ್ಲೂರು ಗ್ರಾಮಕ್ಕೆ ಹೋಗುವ ರಸ್ತೆ ಹದಗೆಟ್ಟಿದೆ   

ಹುಮನಾಬಾದ್: ತಾಲ್ಲೂಕಿನ ಸೀತಾಳಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೋತಗಿ ಗ್ರಾಮದಲ್ಲಿ ಮೂಲಸೌಕರ್ಯ ಇಲ್ಲದೆ ಗ್ರಾಮಸ್ಥರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮದ ಕೆಲ ಬಡಾವಣೆಗಳಲ್ಲಿ ಸಮಪರ್ಕವಾದ ಸಿ.ಸಿ ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಲಿನ ನೀರು ಮುಖ್ಯ ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಲ್ಲದೇ, ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಜನರು ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಹುಮನಾಬಾದ್ ಪಟ್ಟಣದಿಂದ ಸುಮಾರು 20 ಕಿಲೋ ಮೀಟರ್ ಅಂತರದಲ್ಲಿರುವ ಬೋತಗಿ ಗ್ರಾಮದಲ್ಲಿ ಸುಮಾರು 120 ಮನೆಗಳಿದ್ದು, 3 ಸಾವಿರ ಜನ ವಾಸ ಮಾಡುತ್ತಿದ್ದಾರೆ. ಬೋತಗಿ ಗ್ರಾಮದಿಂದ ಸೀತಾಳಗೇರಾ, ನಿಂಬೂರು, ಅಲ್ಲೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಮಳೆಗಾಲದಲ್ಲಿ ನಡೆದಾಡಲು ಮತ್ತು ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.

ADVERTISEMENT

ಕೆಲ ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಗ್ರಾಮದಲ್ಲಿರುವ ಹನುಮಾನ ದೇವಸ್ಥಾನದ ಕಟ್ಟಡದಲ್ಲಿ ಬಿರುಕು ಬಿಟ್ಟಿದೆ. ಇದರಿಂದ ಭಕ್ತರು ದೇವಸ್ಥಾನದ ಹೊರಗಡೆ ನಿಂತು ದರ್ಶನ ಪಡೆಯುವಂತಾಗಿದೆ. ಗ್ರಾಮದಿಂದ ರೈತರ ಜಮೀನಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಮಳೆ ನೀರು ನಿಂತಿರುವುದರಿಂದ ರೈತರಿಗೆ ತೊಂದರೆ ಉಂಟಾಗುತ್ತಿದೆ.

ಬೋತಗಿ ಗ್ರಾಮದಿಂದ ಹಳಕ್ಕೆ ಹೋಗುವ ಮಾರ್ಗದಲ್ಲಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್‌) ದಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ. ಆದರೆ ಅದು ಕೂಡ ಕಳೆದ 1 ವರ್ಷದಿಂದ ಕೆಟ್ಟು ಹೋಗಿರುವುದರಿಂದ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.

ಸಂಬಂಧಪಟ್ಟ ಅಧಿಕಾರಿಗಳು ಶುದ್ಧ ಕುಡಿಯುವ ನೀರಿನ ಘಟಕದುರಸ್ತಿ ಮಾಡಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಸಿಗುವಂತೆ ಮಾಡಬೇಕು ಎಂದು ಗ್ರಾಮಸ್ಥ ಶಿವಪುತ್ರ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.