ಬೀದರ್: ‘ಲಂಚ ಪ್ರಕರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಅಧ್ಯಕ್ಷ ಹಾಗೂ ಸದಸ್ಯರ ಪಾಲಿದೆ ಎಂದು ರಿಯಲ್ ಎಸ್ಟೇಟ್ ಉದ್ಯಮಿ ಸತೀಶ ನೌಬಾದೆ ಅವರು ಮಾಡಿರುವ ಆರೋಪ ನಿರಾಧಾರ ಹಾಗೂ ಸತ್ಯಕ್ಕೆ ದೂರವಾದದ್ದು’ ಎಂದು ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ತಿಳಿಸಿದ್ದಾರೆ.
‘ಸತೀಶ ನೌಬಾದೆ ಅವರು ಅವರ ಲೇಔಟ್ ಕುರಿತು ನನ್ನೊಂದಿಗೆ ಚರ್ಚಿಸಿಲ್ಲ. ಆಯುಕ್ತರು ಕೂಡ ಈ ವಿಷಯ ನನಗೆ ತಿಳಿಸಿರಲಿಲ್ಲ. ನೌಬಾದೆ ಅವರ ಲೇಔಟ್‌ಗೆ ಸಂಬಂಧಿಸಿದ ಕಡತ ನನ್ನ ಬಳಿ ಬಂದಿಲ್ಲ’ ಎಂದು ಭಾನುವಾರ ಪ್ರಕಟಣೆ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.
‘ಬೇರೆ ಇಲಾಖೆಯಿಂದ ಬಂದಿರುವ ಆಯುಕ್ತರಿಗೆ ಇದರ ಬಗ್ಗೆ ಹೆಚ್ಚಿನ ಜ್ಞಾನವಿಲ್ಲ. ಬುಡಾ ಅಧ್ಯಕ್ಷರಿಗೆ ಇದರೊಂದಿಗೆ ಯಾವುದೇ ಸಂಬಂಧವಿಲ್ಲವೆಂದು ಸತೀಶ ಹೇಳಿದ್ದರು. ನಂತರ ಸಚಿವರು, ಅಧ್ಯಕ್ಷರು, ಸದಸ್ಯರ ಪಾಲಿದೆ ಎಂದು ಆರೋಪಿಸಿದ್ದಾರೆ. ಇದು ಸತ್ಯಕ್ಕೆ ದೂರವಾದುದು’ ಎಂದು ತಿಳಿಸಿದ್ದಾರೆ.
‘ಕೃಷಿಯೇತರ ಜಮೀನಿನ (ಎನ್‌ಎ) ವಿನ್ಯಾಸಕ್ಕಾಗಿ ನನ್ನ ಬಳಿ ₹1 ಕೋಟಿ ಬೇಡಿಕೆ ಇಟ್ಟಿದ್ದರು. ಅಷ್ಟೊಂದು ಹಣ ನನ್ನ ಬಳಿಯಿಲ್ಲ ಎಂದು ತಿಳಿಸಿದಾಗ ₹50 ಲಕ್ಷ ಕೇಳಿದ್ದರು. ಅಷ್ಟೊಂದು ಹಣವೇಕೆ ಎಂದು ನಾನು ಕೇಳಿದಾಗ, ‘ಜಿಲ್ಲಾ ಉಸ್ತುವಾರಿ ಸಚಿವರು, ಬೆಂಗಳೂರಿನ ಕೇಂದ್ರ ಕಚೇರಿ ಅಧಿಕಾರಿಗಳಿಗೆ ಅದರಲ್ಲಿ ಪಾಲು ಕೊಡಬೇಕಾಗುತ್ತದೆ’ ಎಂದು ಹೇಳಿದ್ದರು. ಇದರಿಂದ ಬೇಸತ್ತು ನಾನು ಲೋಕಾಯುಕ್ತ ಪೊಲೀಸರಿಗೆ ದೂರು ಕೊಟ್ಟಿದ್ದೆ. ಈ ಭ್ರಷ್ಟಾಚಾರ ಪ್ರಕರಣವನ್ನು ಸಿಬಿಐಗೆ ವಹಿಸಬೇಕು’ ಎಂದು ಸತೀಶ ನೌಬಾದೆ ಶನಿವಾರ ಆಗ್ರಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.