ಬೀದರ್: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗುರುವಾರ ಮಂಡಿಸಿರುವ ಬಜೆಟ್‌ನಲ್ಲಿ ರೈತರ ಹಿತದೃಷ್ಟಿಯಿಂದ ಕನಿಷ್ಠ ಕಾರ್ಯಕ್ರಮಗಳನ್ನು ಘೋಷಿಸಿದರೂ ಜಿಲ್ಲೆಗೆ ಹೊಸ ಯೋಜನೆಗಳನ್ನು ಪ್ರಕಟಿಸದಿರುವುದು ಜಿಲ್ಲೆಯ ಜನರಲ್ಲಿ ನಿರಾಶೆ ಉಂಟು ಮಾಡಿದೆ.
ಬೇಲೂರು, ಹಂಪಿ ಹಾಗೂ ವಿಜಯಪುರದಲ್ಲಿ ವಿವಿಧ ಭಾಷೆಗಳಲ್ಲಿ ಪ್ರವಾಸಿ ಮಾರ್ಗದರ್ಶಿಗಳಾಗಿ ಕೆಲಸ ಮಾಡಲು ಯುವಕ ಯುವತಿಯರಿಗೆ ಎರಡು ವರ್ಷದ ಡಿಪ್ಲೊಮಾ ತರಬೇತಿ ನೀಡಲು ಸರ್ಕಾರ ಖಾಸಗಿ ಸಂಸ್ಥೆಗಳಿಗೆ ₹ 60 ಲಕ್ಷ ಷೇರು ಬಂಡವಾಳ ರೂಪದಲ್ಲಿ ಒದಗಿಸಲು ಉದ್ದೇಶಿಸಿದೆ. ಆದರೆ, ಅನೇಕ ರಾಜ ಮನೆತನಗಳು ಆಳಿಹೋದ ಬೀದರ್ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳದಿರುವುದು ಇತಿಹಾಸ ಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ.
ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಸ್ಥಳದ ವಿವರಣೆ ನೀಡಲು ಮಾರ್ಗದರ್ಶಿಗಳ ಅವಶ್ಯಕತೆ ಇರುವುದನ್ನು ಮನಗಂಡು ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಡಾ. ಪಿ.ಸಿ.ಜಾಫರ್ ಅವರು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ರಾಜ್ಯ ಪುರಾತತ್ವ ಇಲಾಖೆಯ ಸಹಯೋಗದೊಂದಿಗೆ 50 ಯುವಕರಿಗೆ ತರಬೇತಿ ಕೊಡಿಸಿದ್ದರು. ರಾಜ್ಯ ಸರ್ಕಾರ ಇದಕ್ಕೆ ಪೂರಕವಾಗಿ ಸೌಲಭ್ಯಗಳನ್ನು ಒದಗಿಸದ ಕಾರಣ ಯೋಜನೆ ಮೂಲೆ ಗುಂಪಾಯಿತು.
ಪ್ರವಾಸಿ ಕೇಂದ್ರಗಳಲ್ಲಿ ಪರಿಸರ ಹಾಗೂ ಆಹಾರ ಶುದ್ಧತೆ ಕಾಪಾಡುವ ಉದ್ದೇಶದಿಂದ ಸ್ಥಳೀಯ ಸಂಸ್ಥೆಗಳಿಗೆ ₹ 20 ಕೋಟಿ ಅನುದಾನ ಮೀಸಲಿರಿಸಿದೆ. ಬೀದರ್ ಜಿಲ್ಲೆಗೆ ದೇಶ, ವಿದೇಶಗಳಿಂದ ಪ್ರವಾಸಿಗರು ಭೇಟಿ ಕೊಡುತ್ತಿದ್ದರೂ ಜಿಲ್ಲಾ ಕೇಂದ್ರದಲ್ಲಿ ಒಂದು ಸ್ಟಾರ್ ಹೋಟೆಲ್ ಇಲ್ಲ. ಸರ್ವಿಸ್ ಅಪಾರ್ಟ್‌ಮೆಂಟ್‌ಗಳ ವಿಷಯದಲ್ಲೂ ಜಿಲ್ಲೆಯನ್ನು ಕಡೆಗಣಿಸಲಾಗಿದೆ.
ವಿದೇಶಗಳಿಂದ ಬರುವ ಪ್ರವಾಸಿಗರು ಹೈದರಾಬಾದ್‌ನಲ್ಲಿ ಉಳಿದುಕೊಳ್ಳುತ್ತಾರೆ. ಅಲ್ಲಿಂದ ಬಾಡಿಗೆ ವಾಹನಗಳನ್ನು ಮಾಡಿಕೊಂಡು ಬೀದರ್‌ನ ಸ್ಮಾರಕಗಳ ವೀಕ್ಷಣೆಗೆ ಬರುತ್ತಾರೆ. ಲಾತೂರ್ ಜಿಲ್ಲೆಯ ನಳದುರ್ಗದ ವರೆಗೂ ಹೋಗಿ ಅಲ್ಲಿಂದ ನೇರವಾಗಿ ಹೈದರಾಬಾದ್‌ಗೆ ಮರಳುತ್ತಾರೆ. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಒಂದು ಹೋಟೆಲ್ ಇದ್ದರೂ ಪ್ರವಾಸಿಗರಿಗೆ ಅನುಕೂಲವಾಗಿಲ್ಲ. ಅದು ಬಾರ್ ಆ್ಯಂಡ್ ರೆಸ್ಟೋರಂಟ್ ಆಗಿದೆ.
‘ಪ್ರವಾಸಿಗರು ಕುಟುಂಬ ಸಹಿತ ಇಲ್ಲಿ ವಾಸ್ತವ್ಯ ಮಾಡಿ ಪ್ರವಾಸಿ ತಾಣಗಳನ್ನು ವೀಕ್ಷಿಸಿ ಹೋಗುವಂಥ ವ್ಯವಸ್ಥೆಗಳು ಆಗಿಲ್ಲ. ಬೀದರ್‌ನಲ್ಲಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಇನ್ನೊಂದು ಹೋಟೆಲ್ ನಿರ್ಮಾಣವಾಗಬೇಕು. ಇದರಿಂದ ಪ್ರವಾಸಿಗರಿಗೆ ಅನುಕೂಲವಾಗಲಿದೆ’ ಎಂದು ಬೀದರ್ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಶೆಟಕಾರ್ ಹೇಳಿದರು.
‘ಅಪರೂಪದ ಐತಿಹಾಸಿಕ ತಾಣಗಳು ಜಿಲ್ಲೆಯಲ್ಲಿ ಇವೆ. ಮಹತ್ವದ ಸ್ಮಾರಕಗಳನ್ನು ಯುನೆಸ್ಕೊ ಪಟ್ಟಿಗೆ ಸೇರಿಸುವ ಪ್ರಯತ್ನಗಳು ನಡೆದಿವೆ. ಆದರೆ, ಜಿಲ್ಲೆಯ ಪ್ರವಾಸೋದ್ಯಮದ ಬೆಳವಣಿಗೆಗೆ ರಾಜ್ಯ ಸರ್ಕಾರ ಪ್ರಾಮುಖ್ಯ ನೀಡದಿರುವುದು ಬೇಸರ ಉಂಟು ಮಾಡಿದೆ’ ಎನ್ನುತ್ತಾರೆ ಟೀಮ್ ಯುವಾ ಸಂಚಾಲಕ ವಿನಯ್ ಮಾಳಗೆ.
‘ಬಸವಕಲ್ಯಾಣದ ಅಭಿವೃದ್ಧಿಗೆ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ 18ರಂದು ಘೋಷಣೆ ಮಾಡಿದ ಯೋಜನೆಗಳನ್ನು ಯಥಾವತ್ತಾಗಿ ಮುಂದುವರಿಸಲು ನಿರ್ಧರಿಸಲಾಗಿದೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.