ಬೀದರ್: ಚಟಪಟ ಪಟಾಕಿಗಳ ಸದ್ದಿಲ್ಲದೇ ದೀಪಾವಳಿ ಹಬ್ಬ ಅಪೂರ್ಣ. ಹಬ್ಬಕ್ಕೆ ಪೂಜೆ ಮಾಡಿ, ಪಟಾಕಿ ಸಿಡಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ, ಈ ಆಚರಣೆಯು ವಾತಾವರಣದಲ್ಲಿ ಏರುಪೇರಿಗೂ ಕಾರಣವಾಗುತ್ತಿದೆ.
ದೀಪಾವಳಿ ಹಬ್ಬಕ್ಕೂ ಎರಡು ದಿನಗಳ ಮುಂಚೆ ಬರುವ ನೀರು ತುಂಬುವ ಆಚರಣೆಯ ದಿನದಿಂದ ಪೂಜೆ, ಪುನಸ್ಕಾರಗಳು ಆರಂಭಗೊಳ್ಳುತ್ತವೆ. ಪ್ರತಿಯೊಂದು ಮನೆ, ಮಳಿಗೆ, ವಾಹನ, ಕೃಷಿ ಪರಿಕರ ಹೀಗೆ ಪ್ರತಿಯೊಂದು ವಸ್ತುಗಳನ್ನು ಮೂರೂ ದಿನವೂ ಪೂಜಿಸಲಾಗುತ್ತದೆ. ಪೂಜೆಯ ನಂತರ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತದೆ. ಹೀಗೆ ಎಲ್ಲೆಡೆ ನಡೆಯುವುದರಿಂದ ವಾತಾವರಣದಲ್ಲಿ ಏರುಪೇರಾಗುತ್ತಿದೆ.
ಮಾಲಿನ್ಯ ನಿಯಂತ್ರಣ ಮಂಡಳಿಯೇ ಹೇಳುವ ಪ್ರಕಾರ, ಸಹಜ ದಿನಗಳಿಗಿಂತಲೂ ದೀಪಾವಳಿ ಸಂದರ್ಭದಲ್ಲಿ ಪರಿಸರ ಮಾಲಿನ್ಯ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತದೆ. ಅದರಲ್ಲೂ ವಾಯು ಮಾಲಿನ್ಯ ಅಧಿಕವಾಗಿರುತ್ತದೆ.
ಸುಡುವ ಪಟಾಕಿಯಿಂದ ಉಂಟಾಗುವ ಮಾಲಿನ್ಯದ ಪ್ರಮಾಣ ಎಷ್ಟಿರುತ್ತದೆಂದರೆ, ಒಂದು ಸಾಮಾನ್ಯ ಸುರು ಸುರು ಬತ್ತಿ ಪಟಾಕಿ ಸುಟ್ಟರೆ, ಅದು 50 ಸಿಗರೇಟ್‌ಗಳಿಂದ ಹೊರಹೊಮ್ಮುವಷ್ಟು ಹೊಗೆ ಹೊರಸೂಸುತ್ತದೆ. ದೀಪಾವಳಿಗಂತೂ ಬಗೆಬಗೆಯ ಪಟಾಕಿಗಳನ್ನು ಸುಡಲಾಗುತ್ತದೆ. ಎಷ್ಟರಮಟ್ಟಿಗೆ ಗಾಳಿಯಲ್ಲಿ ವಿಷ ಸೇರುತ್ತದೆ ಎಂದು ಇದರಿಂದಲೇ ಅಂದಾಜಿಸಬಹುದು.
ಇದರಿಂದ ಉಸಿರಾಟದ ಸಮಸ್ಯೆ ಇರುವವರು, ಹೃದಯ ಕಾಯಿಲೆ ಹಾಗೂ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ವೈದ್ಯರು. ಈ ಕಾರಣಕ್ಕಾಗಿಯೇ ಮಾಲಿನ್ಯ ನಿಯಂತ್ರಣ ಮಂಡಳಿಯು, ಪರಿಸರಸ್ನೇಹಿ ಹಸಿರು ಪಟಾಕಿಗಳನ್ನಷ್ಟೇ ಮಾರಾಟ ಮಾಡಬೇಕು. ಇಲ್ಲವಾದರೆ ಮಳಿಗೆಗಳ ಅನುಮತಿ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ಅವುಗಳನ್ನು ಸಿಡಿಸಬೇಕೆಂದು ಜನರಿಗೂ ಸಲಹೆ ನೀಡಿದೆ. ಆದರೆ, ವಾಸ್ತವದಲ್ಲಿ ಇದನ್ನು ಪಾಲಿಸಲಾಗುತ್ತಿದೆಯೇ?
ಈ ಪ್ರಶ್ನೆಗೆ ಸರಳ ಉತ್ತರವೆಂದರೆ ಇಲ್ಲ. ಏಕೆಂದರೆ ಎಲ್ಲೂ ಇದರ ಪಾಲನೆ ಆಗುತ್ತಿಲ್ಲ. ಇದನ್ನು ತಿಳಿದುಕೊಳ್ಳಲೆಂದೇ ‘ಪ್ರಜಾವಾಣಿ’ ಪಟಾಕಿ ಮಳಿಗೆಗಳಿಗೆ ಭೇಟಿ ಕೊಟ್ಟು ಪರಿಶೀಲಿಸಿದಾಗ, ಹಸಿರು ಪಟಾಕಿಗಳಿಗಿಂತ ಅನ್ಯ ಪಟಾಕಿಗಳನ್ನೇ ಹೆಚ್ಚಿನ ಪ್ರಮಾಣದಲ್ಲಿ ಮಾರಾಟಕ್ಕಿಟ್ಟಿರುವುದು ಕಂಡು ಬಂತು. ಕೆಲ ಮಳಿಗೆಗಳ ಮಾಲೀಕರಿಗೆ ಹಸಿರು ಪಟಾಕಿಯ ಜ್ಞಾನವೇ ಇಲ್ಲ.
‘ನಮ್ಮ ಮಳಿಗೆಯಲ್ಲಿ ಎಲ್ಲ ತರಹದ ಪಟಾಕಿ ಸಿಗುತ್ತದೆ. ನಿಮಗೆ ಯಾವ ತರಹದ ಪಟಾಕಿ ಬೇಕು ಹೇಳಿ. ಸರ್ಕಾರದವರು ಹೇಳಿದಂತೆ ಹಸಿರು ಪಟಾಕಿ ಮಾರಾಟ ಮಾಡಿದರೆ ವ್ಯಾಪಾರವೇ ಆಗುವುದಿಲ್ಲ’ ಎಂದು ವ್ಯಾಪಾರಿಯೊಬ್ಬರು ಹೇಳಿದರು.
‘ತಮಿಳುನಾಡಿನ ಶಿವಕಾಶಿಯಲ್ಲಿ ಇತ್ತೀಚಿನ ದಿನಗಳಲ್ಲಿ ಹಸಿರು ಪಟಾಕಿಗಳನ್ನೇ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಚೀನಾ ಸೇರಿದಂತೆ ಇತರೆ ಕೆಲ ದೇಶಗಳಿಂದ ಬರುವ ಪಟಾಕಿಗಳು ಹಸಿರು ಪಟಾಕಿ ಆಗಿರುವುದಿಲ್ಲ. ಯಾವುದೇ ಪಟಾಕಿ ಸುಟ್ಟರೂ ಹೊಗೆ ಬರುವುದಂತೂ ಖಚಿತ’ ಎಂದು ಇನ್ನೊಬ್ಬ ವ್ಯಾಪಾರಿ ಹೇಳಿದರು.
‘ವರ್ಷದಲ್ಲಿ ಒಮ್ಮೆ ಮಾತ್ರ ಹಬ್ಬ ಬರುತ್ತದೆ. ಇದು ಮೊದಲಿನಿಂದಲೂ ನಡೆದುಬಂದ ಸಂಪ್ರದಾಯ. ವರ್ಷದಲ್ಲಿ ಒಮ್ಮೆ ಪಟಾಕಿ ಸಿಡಿಸುವುದರಿಂದ ಹೆಚ್ಚಿನ ವ್ಯತ್ಯಾಸ ಆಗುವುದಿಲ್ಲ. ನಿರಂತರವಾಗಿದ್ದರೆ ಕಷ್ಟ’ ಎನ್ನುತ್ತಾರೆ ರಾಂಪೂರೆ ಕಾಲೊನಿ ನಿವಾಸಿ ಬಸವರಾಜ.
ಈ ಸಂಬಂಧ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.
‘ನಮ್ಮ ದೇಶದಲ್ಲಿ ದೀಪಾವಳಿ ಸಂದರ್ಭದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಪಟಾಕಿಗಳನ್ನು ಸಿಡಿಸಲಾಗುತ್ತದೆ. ಇದು ಬಿಟ್ಟರೆ ಹೊಸ ವರ್ಷಾಚರಣೆಯ ಸಂದರ್ಭದಲ್ಲೂ ಸುಡುತ್ತಾರೆ. ಆದರೆ ದೀಪಾವಳಿಯಷ್ಟು ಪ್ರಮಾಣ ಇರುವುದಿಲ್ಲ. ಇದರಿಂದಾಗಿ ಗಾಳಿ ಹೆಚ್ಚಿನ ಪ್ರಮಾಣದಲ್ಲಿ ಕಲುಷಿತಗೊಳ್ಳುತ್ತದೆ. ಎರಡು ವಾರ ಶಬ್ದ ಮತ್ತು ಗಾಳಿ ಮೇಲೆ ನಿಗಾ ವಹಿಸುತ್ತೇವೆ’ ಎಂದು ಹೆಸರು ಹೇಳಲಿಚ್ಛಿಸದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ‘ವಾಯು ಮಾಲಿನ್ಯ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತದೆ. ದೊಡ್ಡ ಪ್ರಮಾಣದಲ್ಲಿ ಪಟಾಕಿ ಸಿಡಿಸುವುದರಿಂದ ಬೀದರ್‌ನಂಥ ನಗರದ ಗಾಳಿ ಸಹಜ ಸ್ಥಿತಿಗೆ ಬರಲು ಕನಿಷ್ಠ ಒಂದು ವಾರವಾದರೂ ಬೇಕಾಗುತ್ತದೆ’ ಎಂದು ಹೇಳಿದ್ದಾರೆ.
ಕಳೆದ ಐದು ದಿನಗಳಲ್ಲಿ ಬೀದರ್‌ನ ಪಟಾಕಿ ಮಳಿಗೆಗಳಲ್ಲಿ ಸುಮಾರು ₹50 ಲಕ್ಷ ವಹಿವಾಟು ನಡೆದಿದೆ. ಪ್ರತಿ ಸಲ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಮಳಿಗೆಗಳನ್ನು ಹಾಕಲಾಗುತ್ತದೆ. ಈ ಸಲ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ 34 ಪಟಾಕಿ ಮಳಿಗೆಗಳನ್ನು ಹಾಕಲಾಗಿತ್ತು. ‘ಹೋದ ವರ್ಷ ಬಿವಿಬಿ ಕಾಲೇಜು ಮೈದಾನದಲ್ಲಿ ಪಟಾಕಿ ಮಳಿಗೆಗಳನ್ನು ಹಾಕಲಾಗಿತ್ತು. ಸುಮಾರು ₹1 ಕೋಟಿ ವರೆಗೆ ವಹಿವಾಟು ನಡೆದಿತ್ತು. ಈ ಸಲ ಕೊನೆಯ ಕ್ಷಣದಲ್ಲಿ ನ್ಯಾಷನಲ್ ಮೈದಾನದಲ್ಲಿ ಜಾಗ ಕೊಡಲಾಗಿತ್ತು. ಹೆಚ್ಚಿನವರಿಗೆ ವಿಳಾಸ ಗೊತ್ತಾಗಲಿಲ್ಲ. ಇದರಿಂದಾಗಿ ವ್ಯಾಪಾರ ಹೇಳಿಕೊಳ್ಳುವಷ್ಟು ಆಗಲಿಲ್ಲ’ ಎಂದು ವ್ಯಾಪಾರಿಯೊಬ್ಬರು ಗೋಳು ತೋಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.