ಹುಲಸೂರ: ತಾಲ್ಲೂಕಿನ ವಿವಿಧೆಡೆ ಇರುವ ಬಸ್ ನಿಲ್ದಾಣಗಳು ಪಾಳು ಬಿದ್ದಿದ್ದರೆ ಇನ್ನೂ ಹಲವೆಡೆ ಬಸ್ ನಿಲ್ದಾಣಗಳೇ ಇಲ್ಲ. ಬಸ್ ನಿಲ್ದಾಣಗಳ ನಿರ್ವಹಣೆ ಮತ್ತು ನಿರ್ಮಾಣದಲ್ಲಿ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯ ಹೆಚ್ಚಿದೆ ಎಂದು ಜನರು, ಪ್ರಯಾಣಿಕರು ದೂರಿದ್ದಾರೆ.
ತಾಲ್ಲೂಕಿನ ಗಡಿಗೌಡಗಾಂವ, ಬೇಲೂರ ಸೇರಿ ಅನೇಕ ಗ್ರಾಮಗಳಲ್ಲಿ ಸುಮಾರು ವರ್ಷಗಳ ಹಿಂದೆ ನಿರ್ಮಿಸಿರುವ ಮಿನಿ ಬಸ್ ನಿಲ್ದಾಣಗಳು ಸಮರ್ಪಕ ನಿರ್ವಹಣೆ ಇಲ್ಲದೇ ಪಾಳು ಬಿದ್ದು ಜಾನುವಾರುಗಳ ವಾಸ ಸ್ಥಾನವಾಗಿವೆ. ಅಲ್ಲಲ್ಲಿ ಸಿಮೆಂಟ್ ಹಾಗೂ ಕಲ್ಲುಗಳು ಕಿತ್ತುಹೋಗಿದೆ. ಚಾವಣಿ ಕೂಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಅಲ್ಲಲ್ಲಿ ಗೋಡೆಗಳು ಬಿರುಕು ಬಿಟ್ಟಿವೆ.
ಹಲವು ನಿಲ್ದಾಣಗಳಲ್ಲಿ ಆಸನದ ವ್ಯವಸ್ಥೆ ಇಲ್ಲ. ಸ್ವಚ್ಛತೆಯಂತೂ ಇಲ್ಲವೇ ಇಲ್ಲ. ಹೀಗಾಗಿ ಪ‍್ರಯಾಣಿಕರು ನಿಲ್ದಾಣದ ಹೊರಗೆ ನಿಂತು ಕಾಯುವ ಸ್ಥಿತಿ ಇದೆ.
ಈ ಹಿಂದೆ ಮಿನಿ ತಂಗುದಾಣಗಳ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆಯಿಂದ ಮಾಡಲಾಗುತ್ತಿತ್ತು. ಈಗ ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ಹೊಣೆ ನೀಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಎದ್ದು ಕಾಣುತ್ತಿದೆ.
ತಾಲ್ಲೂಕಿನ ತೊಗಲುರ, ಗೋರಟಾ, ಮುಚಳಂಬ, ಮೀರಖಲ ಗ್ರಾಮ ಪಂಚಾಯಿತಿ ಸೇರಿದಂತೆ ಕೆಲವೆಡೆ ಸುಸಜ್ಜಿತ ಬಸ್ ತಂಗುದಾಣಗಳಿಗೆ ಬೇಡಿಕೆಯಿದೆ. ಅಗತ್ಯವಿರುವ ಕಡೆಯಲ್ಲಿ ತಂಗುದಾಣ ನಿರ್ಮಿಸಿಕೊಡಿ ಎಂಬ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ.
ಜನರು ಅಂಗಡಿ ಕಟ್ಟೆಗಳ ಮೇಲೆ ಕುಳಿತುಕೊಳ್ಳುವುದು, ಮರದ ನೆರಳಿನಡಿ ನಿಂತು ಬಸ್‌ಗಳಿಗಾಗಿ ಕಾಯುತ್ತಿರುತ್ತಾರೆ. ನಿತ್ಯವೂ ನೂರಾರು ವಿದ್ಯಾರ್ಥಿಗಳು ಈ ಊರಿಂದ ತೆರಳುತ್ತಾರೆ. ಬಸ್ ನಿಲ್ದಾಣದ ಬೇಡಿಕೆಗೆ ಸೂಕ್ತವಾಗಿ ಸ್ಪಂದನೆ ಸಿಗುತ್ತಿಲ್ಲ ಎಂದು ಗೋರಟಾ ಗ್ರಾಮಸ್ಥ ಮಹೇಶ ಪಟ್ನೆ ಹೇಳುತ್ತಾರೆ.
ರಸ್ತೆ ವಿಸ್ತರಣೆ ಸಂಧರ್ಭದಲ್ಲಿ ಬಸ್ ನಿಲ್ದಾಣವನ್ನು ತೆರವುಗೊಳಿಸಿದ್ದಾರೆ . ಇಲಾಖೆ ಅಧಿಕಾರಿಗಳು ನೂತನ ನಿಲ್ದಾನ ನಿರ್ಮಾಣಕ್ಕೆ ಮುಂದಾಗಬೇಕು
-ಮಹೇಶ ಪಟ್ನೆ ಗೋರಟಾ ಗ್ರಾಮದ ನಿವಾಸಿ
ಗ್ರಾಮ ಪಂಚಾಯಿತಿ ವತಿಯಿಂದ ದುರಸ್ತಿ ಮಾಡಲು ಸಾಧ್ಯವಿರುವ ಬಸ್ ನಿಲ್ದಾಣಗಳನ್ನು ದುರಸ್ತಿ ಮಾಡಲಾಗುವುದು
-ಮಹದೇವ ಬಾಬಳಗಿ ಇಓ ಹುಲಸೂರ ತಾ.ಪಂ
ತಾಲ್ಲೂಕಿನ ಬಹುತೇಕ ಗ್ರಾಮದಲ್ಲಿ ಮಿನಿ ಬಸ್ ನಿಲ್ದಾಣ ಇಲ್ಲದೇ ಜನರು ಮಳೆ ಬಿಸಿಲು ಎನ್ನದೇ ಬಸ್‌ಗಾಗಿ ಕಾತಯವುದು ಅನಿವಾರ್ಯವಾಗಿದೆ. ಅಗತ್ಯವಿರುವ ಕಡೆಯಲ್ಲಿ ತಂಗುದಾಣ ನಿರ್ಮಿಸಿಕೊಡಬೇಕು ಎಂ.ಜಿ.ರಾಜೊಳೆ
-ಸಂಚಾಲಕ ಹುಲಸೂರ ತಾಲ್ಲೂಕ ಹೋರಾಟ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.