ADVERTISEMENT

Cabinet Reshuffle| ಅದೃಷ್ಟಶಾಲಿ ರಾಜಕಾರಣಿ ಭಗವಂತ ಖೂಬಾ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 2:14 IST
Last Updated 8 ಜುಲೈ 2021, 2:14 IST
ಭಗವಂತ ಖೂಬಾ
ಭಗವಂತ ಖೂಬಾ   

ಬೀದರ್: ಬೀದರ್‌ ಕ್ಷೇತ್ರದಿಂದ ಎರಡನೇ ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಭಗವಂತ ಖೂಬಾ (54) ಅವರಿಗೆ ಕೇಂದ್ರ ಸಚಿವ ಸ್ಥಾನ ಒಲಿದು ಬಂದಿದೆ.

ಖೂಬಾ ಅವರು 2014ರ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅವರನ್ನು ಸೋಲಿಸಿ ಮೊದಲ ಬಾರಿಗೆ ಲೋಕಸಭೆ ಮೆಟ್ಟಿಲು ಹತ್ತಿದ್ದರು. ಎರಡನೇ ಬಾರಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರನ್ನು ಪರಾಭವಗೊಳಿಸಿ ಗೆದ್ದಿದ್ದಾರೆ.

ಜಿಲ್ಲೆಯ ರಾಜಕಾರಣದಲ್ಲಿ ಖೂಬಾ ‘ಅದೃಷ್ಟಶಾಲಿ ರಾಜಕಾರಣಿ’ ಎಂದೇ ಗುರುತಿಸಿಕೊಂಡಿದ್ದಾರೆ. ನೇರವಾಗಿ ಲೋಕಸಭೆ ಚುನಾವಣೆಗೇ ಸ್ಪರ್ಧಿಸಿ ಆಯ್ಕೆಯಾದ ಹಿರಿಮೆ ಅವರದ್ದು. ಇದೀಗ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದ ಜಿಲ್ಲೆಯ ಮೊದಲಿಗ ಎನ್ನುವ ಗೌರವವನ್ನೂ ಮುಡಿಗೇರಿಸಿಕೊಂಡಿದ್ದಾರೆ. ಅವರ ಪತ್ನಿ, ಮೂವರು ಮಕ್ಕಳಿದ್ದಾರೆ.

ADVERTISEMENT

ಔರಾದ್‍ನ ಮಹಾದೇವಿ ಹಾಗೂ ಗುರುಬಸಪ್ಪ ಖೂಬಾ ಅವರ ಪುತ್ರರಾಗಿ1968ರ ಜೂನ್ 1ರಂದು ಜನಿಸಿದ ಭಗವಂತ ಖೂಬಾ, ತುಮಕೂರಿನ ಸಿದ್ಧಗಂಗಾ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೆಕ್ಯಾನಿಕಲ್‌ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಗುತ್ತಿಗೆದಾರರಾಗಿದ್ದ ಅವರು, 1991ರಲ್ಲಿ ಲಾಲಕೃಷ್ಣ ಅಡ್ವಾಣಿ ಅವರು ಬೀದರ್‌ಗೆ ಬಂದಿದ್ದ ವೇಳೆ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು.

ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯ ಪರಿಣಾಮಕಾರಿ ಅನುಷ್ಠಾನ, ಹಲವು ಹೊಸ ರೈಲುಗಳು, ರಾಷ್ಟ್ರೀಯ ಹೆದ್ದಾರಿಗಳ ಮಂಜೂರಾತಿ ಪಡೆಯವುದು ಸೇರಿದಂತೆ ವಿವಿಧ ಕಾರ್ಯಗಳ ಮೂಲಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ಕೊಟ್ಟಿದ್ದಾರೆ. ಈಚೆಗೆ ನಡೆದ ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ, ಪಕ್ಷದ ಅಭ್ಯರ್ಥಿಯಾಗಿದ್ದ ಶರಣು ಸಲಗರ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.