ADVERTISEMENT

ಬೀದರ್ | ಕೋಮು ಸೌಹಾರ್ದತೆಗೆ ಧಕ್ಕೆ ತಂದರೆ ಕ್ರಮ: ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ

ಕೇಬಲ್‌ ಟಿ.ವಿ. ಮಾಲೀಕರು ನಿಗದಿತ ಹಣ ಪಡೆಯಲಿ–ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2024, 13:02 IST
Last Updated 8 ಫೆಬ್ರುವರಿ 2024, 13:02 IST
ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ನೇತೃತ್ವದಲ್ಲಿ ಬೀದರ್‌ನಲ್ಲಿ ಗುರುವಾರ ಜಿಲ್ಲಾಮಟ್ಟದ ಕೇಬಲ್ ಟೆಲಿವಿಷನ್ ನಿರ್ವಹಣಾ ಸಮಿತಿ ಸಭೆ ನಡೆಯಿತು
ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ನೇತೃತ್ವದಲ್ಲಿ ಬೀದರ್‌ನಲ್ಲಿ ಗುರುವಾರ ಜಿಲ್ಲಾಮಟ್ಟದ ಕೇಬಲ್ ಟೆಲಿವಿಷನ್ ನಿರ್ವಹಣಾ ಸಮಿತಿ ಸಭೆ ನಡೆಯಿತು   

ಬೀದರ್‌: ‘ಕೇಬಲ್‌ ಟಿ.ವಿ. ಚಾನಲ್‌ನವರು ಗ್ರಾಹಕರಿಂದ ನಿಗದಿಪಡಿಸಿದ ಹಣವಷ್ಟೇ ಪಡೆಯಬೇಕು. ನಿಗದಿಗಿಂತ ಹೆಚ್ಚಿಗೆ ಪಡೆದರೆ ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ದಾರೆ. 

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾಮಟ್ಟದ ಕೇಬಲ್ ಟೆಲಿವಿಷನ್ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಫ್ರೀ ಟು ಏರ್ ಉಚಿತ ಚಾನಲ್‌ಗಳಿಗೆ ಹಣ ಪಡೆಯದೆ ಪ್ರಸಾರ ಮಾಡಬೇಕು. ಸ್ಥಳೀಯ ಕೇಬಲ್‌ ಟೆಲಿವಿಷನ್‌ಗೆ ಸಂಬಂದಿಸಿದ ಯಾವುದೇ ದೂರುಗಳು ಬಂದರೆ ತಕ್ಷಣ ಕ್ರಮ ವಹಿಸಬೇಕೆಂದು ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಸುರೇಶ ಅವರಿಗೆ ಸೂಚಿಸಿದರು.

ಕೇಬಲ್‌ ಟೆಲಿವಿಷನ್ ಚಾನಲ್‌ಗಳಲ್ಲಿ ಸ್ಥಳೀಯ ಸುದ್ದಿಗಳನ್ನು ಮಾತ್ರ ಪ್ರಸಾರ ಮಾಡಬೇಕು. ಯಾವುದೇ ಸಮುದಾಯಕ್ಕೆ ಭಂಗವನ್ನುಂಟು ಮಾಡುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬಾರದು. ಉತ್ತಮವಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಕು. ಯಾವುದೇ ಅಶ್ಲೀಲ ಚಿತ್ರಗಳು, ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬಾರದು. ಉಲ್ಲಂಘಿಸಿದಲ್ಲಿ ಕೇಬಲ್‌ ಟೆಲಿವಿಷನ್ ನೆಟವರ್ಕ್ ಅಧಿನಿಯಮ 1995ರ ಪ್ರಕಾರ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

ADVERTISEMENT

ಜಿಲ್ಲೆಯಲ್ಲಿ ಯಾವುದೇ ನಕಲಿ ಕೇಬಲ್‌ ಟಿ.ವಿ.ಗಳ ಪ್ರಸಾರ ಕುರಿತು ಸಾರ್ವಜನಿಕರಿಂದ ದೂರುಗಳು ಬಂದರೆ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಕೇಬಲ್‌ ಟೆಲಿವಿಷನ್‌ ಚಾನಲ್‌ಗಳಿಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದಲ್ಲಿ ಸಾರ್ವಜನಿಕರು ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸಲ್ಲಿಸಬಹುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಮಾತನಾಡಿ, ಇತ್ತೀಚೆಗೆ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಪೊಲೀಸ್ ಇಲಾಖೆಯಿಂದ ಹಮ್ಮಿಕೊಳ್ಳುವ ಹಲವಾರು ಜಾಗೃತಿ ಕಾರ್ಯಕ್ರಮಗಳನ್ಮು ಸ್ಥಳೀಯ ಚಾನಲ್‌ಗಳಲ್ಲಿ ಪ್ರಸಾರ ಮಾಡಬೇಕು. ಇದರಿಂದ ಜನರಲ್ಲಿ ಜಾಗೃತಿ ಉಂಟಾಗುತ್ತದೆ ಎಂದು ಹೇಳಿದರು.

ಕರ್ನಲ್ ಶರಣಪ್ಪ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಮನೋಜಕುಮಾರ, ಶಂಭುಲಿಂಗ ವಾಲದೊಡ್ಡಿ, ಡಾನ್‌ ಬಾಸ್ಕೊ ಸಂಸ್ಥೆಯ ಫಾದರ್‌ ಜಾರ್ಜ್, ನವೀನ್‌ ಪಬ್ಲಿಕ್ ಶಾಲೆಯ ಮುಖ್ಯಸ್ಥೆ ರತ್ನ ಪಾಟೀಲ, ಮನಃಶಾಸ್ತ್ರಜ್ಞ ಮಲ್ಲಿಕಾರ್ಜುನ ಎಸ್. ಗುಡ್ಡೆ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಸುರೇಶ, ವಿಜಯ ಕೃಷ್ಣ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.