ADVERTISEMENT

ಬೀದರ್ | ₹2 ಕೋಟಿ ಮೌಲ್ಯದ ಗಾಂಜಾ ವಶ: ಆರೋಪಿ ಬಂಧನ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 15:18 IST
Last Updated 7 ಅಕ್ಟೋಬರ್ 2024, 15:18 IST
ಬೀದರ್‌ನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಬಸವಕಲ್ಯಾಣ ತಾಲ್ಲೂಕಿನ ಉಜಳಂಬದಲ್ಲಿ ವಶಪಡಿಸಿಕೊಳ್ಳಲಾದ ಗಾಂಜಾ ಗಿಡಗಳನ್ನು ಪರಿಶೀಲಿಸಿದರು
ಬೀದರ್‌ನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಬಸವಕಲ್ಯಾಣ ತಾಲ್ಲೂಕಿನ ಉಜಳಂಬದಲ್ಲಿ ವಶಪಡಿಸಿಕೊಳ್ಳಲಾದ ಗಾಂಜಾ ಗಿಡಗಳನ್ನು ಪರಿಶೀಲಿಸಿದರು   

ಬೀದರ್: ಬಸವಕಲ್ಯಾಣ ತಾಲ್ಲೂಕಿನ ಉಜಳಂಬ ಗ್ರಾಮದ ಹೊಲವೊಂದರಲ್ಲಿ ಗಾಂಜಾ ಬೆಳೆದಿದ್ದ ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ ಉಮರ್ಗಾ ತಾಲ್ಲೂಕಿನ ಹಿಪ್ಪರಗಾರಾವ್‍ವಾಡಿ ಗ್ರಾಮದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಹೇಳಿದರು.

ಆರೋಪಿ ತೊಗರಿ ಬೆಳೆ ಮಧ್ಯೆ ಬೆಳೆದಿದ್ದ ₹2 ಕೋಟಿ ಮೌಲ್ಯದ 40 ಕೆ.ಜಿ. ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಕರಣ ಭೇದಿಸಿದ ಮಂಠಾಳ ಠಾಣೆ ಪೊಲೀಸ್ ಸಬ್‌ಇನ್‍ಸ್ಪೆಕ್ಟರ್ ಸುವರ್ಣ ಮಲಶೆಟ್ಟಿ ಅವರಿಗೆ ₹10 ಸಾವಿರ ನಗದು ಬಹುಮಾನ ನೀಡಲಾಗುವುದು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಪ್ರಶಂಸಾ ಪತ್ರ ಕೊಡಲಾಗುವುದು ಎಂದು ಪ್ರಕಟಿಸಿದರು.

ADVERTISEMENT

ಜಿಲ್ಲೆಗೆ ಹೊಂದಿಕೊಂಡ ತೆಲಂಗಾಣ ಹಾಗೂ ಮಹಾರಾಷ್ಟ್ರ ಗಡಿಯಲ್ಲಿ ಗಾಂಜಾ ಸಾಗಣೆ ಚಟುವಟಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿರುವ ಕಾರಣ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬೀಟ್ ಪೊಲೀಸ್ ತಂಡ ಇಲ್ಲಿ ಕಾರ್ಯಾಚರಣೆಯಲ್ಲಿದೆ. ಜಿಲ್ಲೆಯನ್ನು ನಶೆಮುಕ್ತಗೊಳಿಸುವ ದಿಸೆಯಲ್ಲಿ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕೆಲವರು ತೊಗರಿ ಬೆಳೆಯಲ್ಲಿ ಗಾಂಜಾ ಬೆಳೆಸುತ್ತಿರುವ ಮಾಹಿತಿ ಇದೆ. ಯಾರಾದರೂ ಗಾಂಜಾ ಬೆಳೆಯುತ್ತಿರುವುದು ಗೊತ್ತಾದಲ್ಲಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬೇಕು. ಬೆಳೆದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಆರೋಪಿ ಬಂಧನ: ಹುಮನಾಬಾದ್ ಪಟ್ಟಣದ ಥೇರ್ ಮೈದಾನದಲ್ಲಿ ಅಕ್ಟೋಬರ್ 2 ರಂದು ನಡೆದಿದ್ದ ಕೊಲೆ ಪ್ರಕರಣದ ಆರೋಪಿಯನ್ನು ನಾಲ್ಕು ದಿನಗಳಲ್ಲೇ ಬಂಧಿಸಲಾಗಿದೆ ಎಂದು ತಿಳಿಸಿದರು.

ಧುಮ್ಮನಸೂರದ ಅರ್ಜುನ ಏಣಕೂರನನ್ನು ಕೊಲೆ ಮಾಡಿದ ಹುಮನಾಬಾದ್ ಪಟ್ಟಣದ ಜೇರಪೇಟ್ ನಿವಾಸಿಯನ್ನು ಬಂಧಿಸಿ, ಆತ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟುಕೊಂಡಿದ್ದ ಐದು ತಲ್ವಾರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಮೇಘಣ್ಣನವರ್, ಚಂದ್ರಕಾಂತ ಪೂಜಾರಿ, ಡಿವೈಎಸ್‍ಪಿಗಳಾದ ಜೆ.ಎಸ್. ನ್ಯಾಮೆಗೌಡ, ಶಿವನಗೌಡ ಪಾಟೀಲ ಇದ್ದರು.

ಶಾಂತಿಯುತ ವಿಜಯದಶಮಿಗೆ ಕ್ರಮ: ವಿಜಯದಶಮಿಯನ್ನು ಜಿಲ್ಲೆಯಲ್ಲಿ ಶಾಂತಿಯುವಾಗಿ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದರು.

ಹಿಂದೆ ವಿಜಯದಶಮಿ ಸಂದರ್ಭದಲ್ಲಿ ಗಲಾಟೆ ನಡೆದಿದ್ದ ಕಾರಣ ಈ ಬಾರಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಈಗಾಗಲೇ ಎರಡು ಸಮುದಾಯಗಳ ಮುಖಂಡರೊಂದಿಗೆ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.