ಬೀದರ್: ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಹಾತೊರೆಯುವ ವಿದ್ಯಾರ್ಥಿಗಳ ಸಂಖ್ಯೆ ಅಧಿಕ. ಕಾರಣ ಪದವಿ ಪೂರೈಸಿದ ನಂತರ ಅವರ ಸಂಪಾದನೆಯೂ ಅಧಿಕ. ಇವುಗಳನ್ನು ಹೊರತು ಪಡಿಸಿಯೂ ಆದಾಯ ತರುವ ಕೋರ್ಸ್‌ಗಳಿವೆ. ಅವುಗಳೆಂದರೆ ಪಶು ವೈದ್ಯಕೀಯ, ಹೈನುಗಾರಿಕೆ ಹಾಗೂ ಮೀನುಗಾರಿಕೆ ಶಿಕ್ಷಣ.
ಹಳ್ಳಿಯವರ ಹಿತವನ್ನು ಗಮನದಲ್ಲಿಟ್ಟುಕೊಂಡು ಈ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ಪಶು ವೈದ್ಯಕೀಯ ಹಾಗೂ ಪಶು ಸಂಗೋಪನೆ ಪದವಿ ಶಿಕ್ಷಣಕ್ಕೆ ಜಾಗತಿಕ ಮಟ್ಟದಲ್ಲೂ ಬೇಡಿಕೆ ಹೆಚ್ಚಿದೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪಾಸಾದ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ಗಳಿಗೆ ತಡಕಾಡುವ ಬದಲು ಸಾರ್ವಕಾಲಿಕ ಮಹತ್ವ ಪಡೆದಿರುವ ಪಶು ವೈದ್ಯಕೀಯ ಶಿಕ್ಷಣ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು.
ಈ ಕ್ಷೇತ್ರವನ್ನೇ ಏಕೆ ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದಕ್ಕೆ ಇಲ್ಲಿದೆ ಉತ್ತರ. ಪಿಯುಸಿ ಶಿಕ್ಷಣದ ನಂತರ ಪಶು ವೈದ್ಯಕೀಯ ಪದವಿಗೂ ಬಹಳಷ್ಟು ಬೇಡಿಕೆ ಇದೆ. ಪಶು ಸಂಗೋಪನೆಯಲ್ಲೂ ಹಲವು ಕೋರ್ಸ್‌ಗಳಿವೆ.
ಪಶು ವೈದ್ಯಕೀಯ ಹಾಗೂ ಪಶು ಸಂಗೋಪನೆ ಪದವಿ ಶಿಕ್ಷಣವು ಐದೂವರೆ ವರ್ಷದ ಅವಧಿಯ ಕೋರ್ಸ್ ಆಗಿದೆ. ಈ ಪದವಿ ಹೊಂದಿದ ವಿದ್ಯಾರ್ಥಿಯು ಪಶು ವೈದ್ಯಾಧಿಕಾರಿಯಾಗಬಹುದು. ಹಾಲು ಮಹಾಮಂಡಳದ ಪಶು ವೈದ್ಯಾಧಿಕಾರಿಯಾಗಿಯೂ ಸೇವೆ ಸಲ್ಲಿಸಬಹುದು.
‘ಪಶು ವೈದ್ಯಾಧಿಕಾರಿಗೆ ₹ 52,652 ರಿಂದ ₹ 91,700 ಹಾಗೂ ಸಹಾಯಕ ಪ್ರಾಧ್ಯಾಪಕರಿಗೆ ₹ 82 ಸಾವಿರ ಆರಂಭಿಕ ವೇತನ ಇದೆ. ಪಶು ವೈದ್ಯಕೀಯ ಪದವಿ ಮುಗಿಸಿದ ಅಭ್ಯರ್ಥಿಗಳು ಈಗಾಗಲೇ ಭಾರತೀಯ ಆಡಳಿತಸೇವೆ ಹಾಗೂ ಕರ್ನಾಟಕ ಆಡಳಿತಸೇವೆ ಪರೀಕ್ಷೆಗಳಲ್ಲಿಯೂ ತೇರ್ಗಡೆ ಹೊಂದಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ’ ಎಂದು ಹೇಳುತ್ತಾರೆ ಪಶು ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಬಿ.ವಿ.ಶಿವಪ್ರಕಾಶ.
ಭಾರತೀಯ ಕೃಷಿ ಅನುಸಂಧಾನ ಸಂಸ್ಥೆಯ ಅಧೀನದಲ್ಲಿರುವ ಹಲವಾರು ಸಂಸ್ಥೆಗಳಲ್ಲಿ ವಿಜ್ಞಾನಿ, ಭಾರತೀಯ ಸೇನೆಯ ರಿಮೌಂಟ್ ವೆಟರ್ನರಿ ಕಾರ್ಪ್ಸ್‌ನಲ್ಲಿ ಸೈನ್ಯಾಧಿಕಾರಿ, ಗಡಿ ಭದ್ರತಾ ಪಡೆಯಲ್ಲಿ ಅಸಿಸ್ಟಂಟ್ ಕಮಾಂಡೆಂಟ್ ಆಗಿ ಹಾಗೂ ಮೀನುಗಾರಿಕೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಲು ಅವಕಾಶ ಇದೆ.
ಪಶು ಸಂಗೋಪನೆಯ ಅಂತರರಾಷ್ಟ್ರೀಯ ಕಂಪನಿಗಳು ವಾರ್ಷಿಕ ₹ 20 ಲಕ್ಷದವರೆಗೂ ಪ್ಯಾಕೇಜ್ ಕೊಡುತ್ತಿವೆ. ಖಾಸಗಿ ವೈದ್ಯರಾಗಿ ಕಾರ್ಯ ನಿರ್ವಹಿಸಿದರೂ ತಿಂಗಳಿಗೆ ₹80 ಸಾವಿರವರೆಗೆ ಆದಾಯ ಪಡೆಯಬಹುದಾಗಿದೆ. ಭಾರತ ಅಪಾರ ಜಾನುವಾರು ಸಂಪತ್ತು ಹೊಂದಿದೆ. ಪಶು ವೈದ್ಯಕೀಯ ಶಿಕ್ಷಣ ಪಡೆದವರ ಅವಶ್ಯಕತೆ ಹಿಂದಿಗಿಂತಲೂ ಅಧಿಕ ಇದೆ. ಇಲ್ಲಿ ವಿಪುಲ ಅವಕಾಶಗಳೂ ಇವೆ.
ಬೀದರ್, ಬೆಂಗಳೂರು, ಶಿವಮೊಗ್ಗ ಮತ್ತು ಹಾಸನದ ಪಶು ವೈದ್ಯಕೀಯ ಕಾಲೇಜುಗಳಲ್ಲಿ ಪಶು ವೈದ್ಯಕೀಯ ಹಾಗೂ ಪಶು ಸಂಗೋಪನೆ ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆಯಬಹುದು. ಇದಲ್ಲದೆ ಭಾರತೀಯ ಪಶು ವೈದ್ಯಕೀಯ ಪರಿಷತ್ ಆಯೋಜಿಸುವ ಪ್ರವೇಶ ಪರೀಕ್ಷೆಯ ಮೂಲಕ ಹೊರ ರಾಜ್ಯಗಳ ಒಟ್ಟು 36 ವಿದ್ಯಾರ್ಥಿಗಳಿಗೆ ಸೀಟು ಪಡೆಯಲು ಅವಕಾಶ ಇದೆ. ಕೃಷಿಕರ ಮಕ್ಕಳಿಗಾಗಿ ಶೇ 40ರಷ್ಟು ಸೀಟುಗಳು ಮೀಸಲಿವೆ.
ಪಶು ವೈದ್ಯಕೀಯ ಪದವಿಗೆ ಪ್ರವೇಶ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಪರೀಕ್ಷೆ ಎದುರಿಸಬೇಕು. ಸಿಇಟಿ ಮತ್ತು ಪ್ರಾಯೋಗಿಕ ಪರೀಕ್ಷೆಯಲ್ಲಿ ತೆಗೆದುಕೊಂಡ ಶೇ 50ರಷ್ಟು ಅಂಕಗಳನ್ನು ಒಟ್ಟುಗೂಡಿಸಿ ರ‍್ಯಾಂಕ್ ಪಟ್ಟಿ ಮಾಡಲಾಗುತ್ತದೆ. ರ‍್ಯಾಂಕ್‌ಗೆ ಅನುಸಾರವಾಗಿ ಪ್ರವೇಶ ಲಭ್ಯವಿರುತ್ತದೆ.
ಪಿಯುಸಿ ತೇರ್ಗಡೆಯಾದ ವಿದ್ಯಾರ್ಥಿಗಳು ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಪಶು ವೈದ್ಯಕೀಯ ಶಿಕ್ಷಣ ಅಲ್ಲದೆ ನಾಲ್ಕು ವರ್ಷಗಳ ಅವಧಿಯ ಹೈನು ವಿಜ್ಞಾನ ಮತ್ತು ಮೀನು ವಿಜ್ಞಾನ ಕೋರ್ಸ್‌ಗಳಲ್ಲೂ ಪ್ರವೇಶ ಪಡೆಯಬಹುದು. ಈ ಪದವಿಗಳ ಪ್ರವೇಶಕ್ಕೂ ಸಿಇಟಿ ಪರೀಕ್ಷೆ ಬರೆಯುವುದು ಕಡ್ಡಾಯ. ಈ ಕೋರ್ಸ್‌ಗಳಲ್ಲೂ ಕೃಷಿಕರ ಮಕ್ಕಳಿಗೆ ಶೇ 40 ರಷ್ಟು ಸೀಟುಗಳು ಮೀಸಲಿವೆ.
ಹೈನು ವಿಜ್ಞಾನ ಮಹಾವಿದ್ಯಾಲಯಗಳು ಬೆಂಗಳೂರು ಹಾಗೂ ಕಲಬುರ್ಗಿ ಸಮೀಪದ ಮಹಾಗಾಂವನಲ್ಲಿ ಇವೆ. ಮೀನುಗಾರಿಕೆ ವಿಜ್ಞಾನ ಮಹಾವಿದ್ಯಾಲಯ ಮಂಗಳೂರಿನಲ್ಲಿದೆ. ಇಲ್ಲಿ ಸಿಇಟಿ ರ‍್ಯಾಂಕ್‌ಗೆ ಅನುಸಾರವಾಗಿ ಪ್ರವೇಶ ಪಡೆಯಬಹುದಾಗಿದೆ.
ಎಸ್ಸೆಸ್ಸೆಲ್ಸಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೂ ಪಶು ವೈದ್ಯಕೀಯ ವಿಶ್ವವಿದ್ಯಾಲಯವು 2 ವರ್ಷದ ಪಶು ಸಂಗೋಪನೆ ಡಿಪ್ಲೊಮಾ ಪಡೆಯುವ ಅವಕಾಶ ಕಲ್ಪಿಸಿದೆ. ರಾಜ್ಯ ಮಟ್ಟದಲ್ಲಿ ಮೆರಿಟ್ ಆಧಾರದ ಮೇಲೆ ಪ್ರವೇಶ ನೀಡಲಾಗುತ್ತದೆ. ಆದರೆ ವಿದ್ಯಾರ್ಥಿಗಳು ಕಡ್ಡಾಯವಾಗಿ 1 ರಿಂದ 10ನೇ ತರಗತಿವರೆಗೆ ಹಳ್ಳಿಯಲ್ಲಿಯೇ ವ್ಯಾಸಂಗ ಮಾಡಿರಬೇಕು. 2 ವರ್ಷದ ಡಿಪ್ಲೊಮಾ ಅವಧಿಯಲ್ಲಿ ಪ್ರತಿ ತಿಂಗಳು ₹ 1,000 ಶಿಷ್ಯವೇತನ ನೀಡಲಾಗುತ್ತದೆ. ಈ ಡಿಪ್ಲೊಮಾ ಕಾಲೇಜು ಶಿಗ್ಗಾಂವಿ ಮತ್ತು ತಿಪಟೂರು ಸಮೀಪದ ಕೊನೆಹಳ್ಳಿಯಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.