ADVERTISEMENT

ಹುಮನಾಬಾದ್ | ರಸ್ತೆ ಮಧ್ಯದಲ್ಲೇ ಮಲಗುವ ದನಗಳು: ಸಂಚಾರಕ್ಕೆ ತೊಂದರೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 5:29 IST
Last Updated 18 ಜುಲೈ 2024, 5:29 IST
ಹುಮನಾಬಾದ್ ಪಟ್ಟಣದ ಪೊಲೀಸ್ ಠಾಣೆಯ ಎದುರುಗಡೆಯ ರಸ್ತೆ ಮಧ್ಯದಲ್ಲೇ ಮಲಗಿರುವ ದನಗಳು
ಹುಮನಾಬಾದ್ ಪಟ್ಟಣದ ಪೊಲೀಸ್ ಠಾಣೆಯ ಎದುರುಗಡೆಯ ರಸ್ತೆ ಮಧ್ಯದಲ್ಲೇ ಮಲಗಿರುವ ದನಗಳು   

ಹುಮನಾಬಾದ್: ‌ಪಟ್ಟಣದ ಪ್ರಮುಖ ರಸ್ತೆಗಳು ಸೇರಿದಂತೆ ರಾಷ್ಟ್ರೀಯ ಹೆದ್ದಾರಿಯಲ್ಲೂ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು ವಾಹನ ಸವಾರರು ಹೈರಾಣಾಗಿದ್ದಾರೆ. ಸಂಚಾರ ದಟ್ಟಣೆಯೂ ಉಂಟಾಗುತ್ತಿದೆ.

ಹಸುಗಳನ್ನು ಸಾಕಣೆ ಮಾಡುವವರು ತಮ್ಮ ಜಾನುವಾರುಗಳನ್ನು ಬೇಕಾಬಿಟ್ಟಿಯಾಗಿ ಹೊರಗೆ ಬಿಟ್ಟಿದ್ದರಿಂದ ತೊಂದರೆಯಾಗುತ್ತಿದೆ. ಬೆಳಿಗ್ಗೆಯಿಂದ ಸಂಜೆಯವರೆಗೂ ರಸ್ತೆಯಲ್ಲೇ ಬೀಡು ಓಡಾಡಿ, ಮಲಗಿ, ಗುದ್ದಾಡಿ ಸಂಜೆ ವೇಳೆ ಮನೆಗೆ ತೆರಳುತ್ತವೆ.

ಹಸುಗಳ ಮಾಲೀಕರು ಹಾಲು ಕರೆದ ಬಳಿಕ ದನಗಳನ್ನು ಮೇಯಲು ಹೊರಗೆ ಬಿಡುತ್ತಾರೆ. ಕೆಲ ದನಗಳಿಗೆ ಹಗ್ಗ, ಮೂಗುದಾರ ಏನೂ ಇರುವುದಿಲ್ಲ. ವಾಹನಗಳ ಶಬ್ದಕ್ಕೂ ಬೆದರದೇ ರಸ್ತೆಯಲ್ಲೇ ಮಲಗುತ್ತವೆ. ಇದು ಸಂಚಾರ ದಟ್ಟಣೆಗೆ ಕಾರಣವಾಗುತ್ತಿದೆ.

ADVERTISEMENT

ಇಲ್ಲಿಯ ಪ್ರವಾಸಿ ಮಂದಿರ, ಡಾ‌.ಬಿ.ಆರ್.ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಹಳೇ ತಹಶೀಲ್ದಾರ್ ಕಚೇರಿ, ಕಲ್ಲೂರ್ ರಸ್ತೆಗಳಲ್ಲಿ ಸದಾ ಜನರಿಂದ ತುಂಬಿರುವ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ ವಿಪರೀತವಾಗಿದೆ.

ರಾಷ್ಟ್ರೀಯ ಹೆದ್ದಾರಿಯಿಂದ ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸಾವಿರಾರು ಬಸ್‌ಗಳು ಪ್ರವೇಶಿಸುವ ಮುಖ್ಯರಸ್ತೆಯಲ್ಲೂ ದನಗಳ ಹಾವಳಿ ಇದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ಇಲ್ಲಿಯ ರಾಷ್ಟ್ರೀಯ ಹೆದ್ದಾರಿಯಲ್ಲಿನ ಡಿವೈಡರ್‌ನಲ್ಲಿ ಬೆಳೆದಿರುವ ಹುಲ್ಲು, ಗಿಡಗಳನ್ನು ತಿನ್ನುತ್ತಾ ನಿಲ್ಲುವ ದನಗಳು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿವೆ‌ ಎನ್ನುತ್ತಾರೆ ವಾಹನ ಸವಾರರು.‌

ಬೀದಿಯಲ್ಲಿ ಓಡಾಡುವ ದಿನಗಳಿಂದ ಜನರಿಗೆ ತೊಂದರೆಯಾಗುತ್ತಿದ್ದರೂ ಅದರ ಬಗ್ಗೆ ಪುರಸಭೆ ಅಧಿಕಾರಿಗಳು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ವಾಹನ ಸವಾರ ಗಣಪತಿ ತಿಳಿಸಿದರು.

ದನಗಳ ಮಾಲೀಕರು ಯಾರು ಎನ್ನುವುದನ್ನು ಪತ್ತೆ ಹಚ್ಚಿ ಎಚ್ಚರಿಕೆ ನೀಡಬೇಕು. ಆದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನಿರ್ಲಕ್ಷ ತೋರುತ್ತಿರುವುದು ಸರಿಯಲ್ಲ
ಕೈಲಾಸ್ ಮೇಟಿ ಸಂಚಾಲ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)
ದನಗಳು ಗುಂಪುಗುಂಪಾಗಿ ರಸ್ತೆಯ ಮೇಲೆ ನಿಲ್ಲುತ್ತಿರುವುದರಿಂದ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ದನಗಳಿಗೆ ಮಾಲೀಕರು ಇಲ್ಲದಿದ್ದರೆ ಗೋ ಶಾಲೆಗಳಲ್ಲಿ ಬಿಡಬೇಕು
ಮನೋಜಕುಮಾರ್ ಸಿತಾಳೆ ಮುಖಂಡ
ರಸ್ತೆಯಲ್ಲಿ ದನಗಳು ಬೀಡುಬಿಟ್ಟಿರುವ ಕಾರಣ ಅಪಘಾತಗಳು ಸಂಭವಿಸಿವೆ. ಅಧಿಕಾರಿಗಳು ಮುತುವರ್ಜಿ ವಹಿಸಿ ದನಗಳು ರಸ್ತೆಯ ಮೇಲೆ ನಿಲ್ಲದಂತೆ ನೋಡಿಕೊಳ್ಳಬೇಕು
ಗೌತಮಪ್ರಸಾದ ಕರ್ನಾಟಕ ಭೀಮ್ ಸೇನಾ ರಾಜ್ಯ ಕಾರ್ಯಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.