ಬೀದರ್: ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ವಿವಾದಿತ ಸಿ.ಡಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೊಬೈಲ್ ಕರೆಗಳ ಜಾಡು ಹಿಡಿದು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಭಾಲ್ಕಿ ಪಟ್ಟಣದ ಇಬ್ಬರು ಯುವಕರು ಹಾಗೂ ಕಮಲನಗರ ತಾಲ್ಲೂಕಿನ ಠಾಣಾಕುಶನೂರಿನ ಒಬ್ಬರನ್ನು ವಿಚಾರಣೆ ನಡೆಸಿದ್ದಾರೆ.
ಸಿ.ಡಿ ಪ್ರಕರಣ ಸದ್ದು ಮಾಡುತ್ತಿದ್ದಂತೆಯೇ ಯುವಕರು ಊರಿಗೆ ಮರಳಿದ್ದರು. ಸಿ.ಡಿಯಲ್ಲಿರುವ ಯುವತಿಯು ಈ ಯುವಕರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ದಿನೇಶ್ ಕಲ್ಲಹಳ್ಳಿ ದೂರು ದಾಖಲಿಸಿದ ದಿನವೇ ಪೊಲೀಸರು ಮೊಬೈಲ್ ಕರೆಗಳನ್ನು ಪರಿಶೀಲಿಸಿದ್ದರು. ಅದರಲ್ಲಿ ಕೆಲ ವ್ಯಕ್ತಿಗಳು ಬೆಂಗಳೂರಿನಿಂದ ಭಾಲ್ಕಿಯ ಅಭಿಷೇಕ್‌ಗೆ ಕರೆ ಮಾಡಿರುವ ಕುರುಹುಗಳು ದೊರಕಿವೆ ಎನ್ನಲಾಗಿದೆ.
ಅಭಿಷೇಕ್ ಮಾರ್ಚ್ 11ರಂದು ಮಧ್ಯಾಹ್ನ 2.30ಕ್ಕೆ ಮನೆಯಿಂದ ಹೊರಗೆ ಹೋದವರು ಶುಕ್ರವಾರ ಮಧ್ಯಾಹ್ನದ ವರೆಗೂ ಮನೆಗೆ ಮರಳಿರಲಿಲ್ಲ. ಹೀಗಾಗಿ ಅವರ ಮನೆಯವರು ಸಂಬಂಧಿಕರು ಹಾಗೂ ಗೆಳೆಯರ ಮನೆಗಳಿಗೆ ತೆರಳಿದ ನಂತರ ವಾಲಿಗಲ್ಲಿಯಲ್ಲಿರುವ ಅಂಗಡಿಗಳ ಸಿ.ಸಿ ಟಿವಿ ಕ್ಯಾಮೆರಾ ಪರಿಶೀಲಿಸಿದ್ದರು. ಅದರಲ್ಲಿ ಅಪರಿಚಿತ ವ್ಯಕ್ತಿಗಳು ಅಭಿಷೇಕ್‌ರನ್ನು ಹಿಡಿದುಕೊಂಡು ಹೋಗುತ್ತಿದ್ದ ದೃಶ್ಯ ಸೆರೆಯಾಗಿತ್ತು.
‘ಅಪರಿಚಿತರು ನನ್ನ ಅಣ್ಣನ ಮಗ ಅಭಿಷೇಕ್ ಜಿಂದೆಯನ್ನು ಅಪಹರಿಸಿದ್ದಾರೆ. ಅವನನ್ನು ಹುಡುಕಿ ಕೊಡಬೇಕು’ ಎಂದು ಯುವಕನ ಚಿಕ್ಕಪ್ಪ, ವಕೀಲ ಅರವಿಂದ ಜಿಂದೆ ದೂರು ನೀಡಿದ್ದರು. ನಂತರ ಎಸ್‌ಐಟಿ ಅಧಿಕಾರಿಗಳು ವಿಚಾರಣೆಗೆ ಕರೆದೊಯ್ದದ್ದು ಖಚಿತವಾಗಿದೆ. ಅಭಿಷೇಕ್ ಜಿಂದೆಯನ್ನು ವಿಚಾರಣೆಗೆ ಕರೆದಾಗ ಬಂದು ಹಾಜರಾಗುವ ಷರತ್ತಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಎಸ್‌ಐಟಿ ಅಧಿಕಾರಿಗಳು ಭಾಲ್ಕಿಯ ಇನ್ನೊಬ್ಬ ಯುವಕ ಆಕಾಶ ಹಾಗೂ ಕಮಲನಗರ ತಾಲ್ಲೂಕಿನ ಠಾಣಾಕುಶನೂರಿನ ಸಾಗರ ಶಿಂಧೆ ಎನ್ನುವವರ ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.