ADVERTISEMENT

ಚಳಕಾಪುರ ಜಾತಿ ಸಂಘರ್ಷ | ಶಾಂತಿ, ಸೌಹಾರ್ದತೆಯಿಂದ ಎಲ್ಲರೂ ಕೂಡಿ ಬಾಳಿ: DC

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 15:18 IST
Last Updated 6 ನವೆಂಬರ್ 2024, 15:18 IST
<div class="paragraphs"><p>ಜಿಲ್ಲಾಡಳಿತದಿಂದ ಬುಧವಾರ ಶಾಂತಿ ಸಭೆ</p></div>

ಜಿಲ್ಲಾಡಳಿತದಿಂದ ಬುಧವಾರ ಶಾಂತಿ ಸಭೆ

   

– ಪ್ರಜಾವಾಣಿ

ಚಳಕಾಪುರ (ಬೀದರ್‌): ಹನುಮಾನ ದೇವರ ಜಾತ್ರಾ ಮಹೋತ್ಸವದ ಮೆರವಣಿಗೆ ಸಂದರ್ಭದಲ್ಲಿ ಲಿಂಗಾಯತರು ಹಾಗೂ ಪರಿಶಿಷ್ಟ ಜಾತಿಯವರ ನಡೆದ ಘರ್ಷಣೆಯಿಂದ ಉದ್ವಿಗ್ನಗೊಂಡಿರುವ ಭಾಲ್ಕಿ ತಾಲ್ಲೂಕಿನ ಚಳಕಾಪುರ ಗ್ರಾಮದಲ್ಲಿ ಜಿಲ್ಲಾಡಳಿತದಿಂದ ಬುಧವಾರ ಶಾಂತಿ ಸಭೆ ನಡೆಸಲಾಯಿತು.

ADVERTISEMENT

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಮಹೇಶ ಮೇಘಣ್ಣನವರ, ಚಂದ್ರಕಾಂತ ಪೂಜಾರಿ, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಸಿಂಧು, ಭಾಲ್ಕಿ ತಹಶೀಲ್ದಾರ್‌ ಮಲ್ಲಿಕಾರ್ಜುನ ವಡ್ಡನಕೇರೆ ಅವರ ಸಮ್ಮುಖದಲ್ಲಿ ಶಾಂತಿ ಸಭೆ ಜರುಗಿತು.

ಪರಿಶಿಷ್ಟ ಜಾತಿ ಹಾಗೂ ಲಿಂಗಾಯತ ಸಮುದಾಯದ ಮುಖಂಡರ ಪ್ರತ್ಯೇಕ ಸಭೆ ನಡೆಸಿದ ಅಧಿಕಾರಿಗಳು, ಆನಂತರ ಇಬ್ಬರನ್ನೂ ಒಂದೇ ಕಡೆ ಸೇರಿಸಿ ಸಭೆ ನಡೆಸಿ ಎರಡೂ ಕಡೆಯವರ ಅಹವಾಲು ಆಲಿಸಿದರು.

ಚಳಕಾಪುರ ಗ್ರಾಮವು ರಾಜ್ಯದಲ್ಲಿಯೇ ಸುಪ್ರಸಿದ್ಧ ತಾಣವಾಗಿದೆ. ಎಲ್ಲ ಸಮುದಾಯದವರು ಶಾಂತಿ, ಸೌಹಾರ್ದತೆಯಿಂದ ಬೆರೆಯುವ ಭಾವೈಕ್ಯತೆಯ ತಾಣಕ್ಕೆ ಹೆಸರಾಗಿದೆ. ಎಲ್ಲರೂ ವೈಮನಸ್ಸು ಮರೆತು ಕೂಡಿ ಬಾಳಬೇಕು. ತಪ್ಪಿ ಮಾಡಿದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು. ಅಮಾಯಕರು, ಮುಗ್ಧರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದರು.

ಕಣ್ಣೀರು ಹಾಕಿದ ಮಹಿಳೆಯರು

‘ಗುಂಪಿನಲ್ಲಿ ಬಂದು ಮನೆಗೆ ನುಗ್ಗಿ, ಕಟ್ಟಿಗೆ, ಲಾಂಗು, ಮಚ್ಚು ಹಿಡಿದು ನಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ. ಮನುಷ್ಯರಂತೆ ನೋಡದೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ’ ಎಂದು ಶಾಂತಿಸಭೆಯಲ್ಲಿ ತಮಗಾದ ನೋವನ್ನು ಮಹಿಳೆಯರು ಕಣ್ಣಿರು ಹಾಕುತ್ತಲೇ ಹೇಳಿದರು.

ಸಭೆಯಲ್ಲಿ ಯಾರು? ಏನೆಂದರು?

ನಮ್ಮ ಸಮುದಾಯದ ಕೆಲ ಯುವಕರು ಹಾಗೂ ದಲಿತ ಸಮುದಾಯದ ಕೆಲ ಯುವಕರು ಸ್ವಪ್ರತಿಷ್ಠೆಗೆ ಮೆರವಣಿಗೆಯಲ್ಲಿ ಜಗಳವಾಡಿದ್ದಾರೆ. ಇದರಿಂದ ಇಡೀ ಸಮುದಾಯದವರೇ ತಲೆತಗ್ಗಿಸುವಂತಾಗಿದೆ. ಇದೀಗ ಎಲ್ಲರಿಗೂ ತಪ್ಪಿನ ಅರಿವಾಗಿದೆ. ಮುಂದಿನ ದಿನಗಳಲ್ಲಿ ಹೀಗಾಗದಂತೆ ಯುವಕರಿಗೆ ತಿಳಿ ಹೇಳುತ್ತೇವೆ.
ಕಿಶೋರ ಕುಲಕರ್ಣಿ, ಚಳಕಾಪೂರ ನಿವಾಸಿ
ಜಾತ್ರೆಯ ಮೆರವಣಿಗೆಯಲ್ಲಿ ನಮ್ಮ ಸಮುದಾಯದ ಯುವಕರು ಡಿಜೆ ಹಾಡಿಗೆ ಕುಣಿಯದಂತೆ ತಡೆದಿದ್ದಾರೆ. ಇದರಿಂದ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ನಂತರ ಲಿಂಗಾಯತರು ನಮ್ಮ ಸಮುದಾಯದ ಕೆಲವರ ಮನೆಗೆ ನುಗ್ಗಿ ಮಹಿಳೆಯರು, ಹಿರಿಯರು ಎನ್ನದೇ ಎಲ್ಲರನ್ನೂ ಹೊಡೆದಿದ್ದಾರೆ. ಆದಕಾರಣ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
–ಪ್ರದೀಪ, ದಲಿತ ಸಮುದಾಯದ ಮುಖಂಡ
ಎರಡು ಸಮುದಾಯದ ಯುವಕರು ಡಿಜೆ ಹಾಡಿಗಾಗಿ ಜಗಳವಾಡಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಡಿಜೆಗೆ ಅವಕಾಶವೇ ನೀಡಬಾರದು.
–ಭೀಮಶ್ಯಾ, ಚಳಕಾಪುರ ನಿವಾಸಿ
ಲಿಂಗಾಯತ ಯುವಕರು ನಮ್ಮ ಮನೆಗೆ ನುಗ್ಗಿ ಕಟ್ಟಿಗೆ, ಕಬ್ಬಿಣದ ರಾಡ್‌ ಸೇರಿದಂತೆ ಇನ್ನಿತರ ವಸ್ತುಗಳನ್ನು ತೆಗೆದುಕೊಂಡು ನಮಗೆ ಮನಬಂದಂತೆ ಥಳಿಸಿದ್ದಾರೆ. ಇದರಿಂದ ನಮಗೆ ಜೀವ ಭಯ ಉಂಟಾಗಿದೆ.
–ಮಹಾದೇವಿ ಚಂದ್ರಕಾಂತ, ದಲಿತ ಮಹಿಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.