ಚಳಕಾಪೂರ (ಖಟಕಚಿಂಚೋಳಿ): ನ.4 ರಿಂದ ಮೂರು ದಿನಗಳ ಕಾಲ ನಡೆಯುವ ಐತಿಹಾಸಿಕ ಆಂಜನೇಯ ಸ್ವಾಮಿ ಜಾತ್ರೆಗೆ ಭಾಲ್ಕಿ ತಾಲ್ಲೂಕಿನ ಚಳಕಾಪೂರ ಸಜ್ಜುಗೊಂಡಿದೆ.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾತ್ರೆಗೆ ಸ್ವಾಗತ ಕೋರುವ ಕಟೌಟ್, ಬ್ಯಾನರ್‌ಗಳು ರಾರಾಜಿಸುತ್ತಿವೆ. ಗ್ರಾಮದ ಪ್ರತಿ ಮನೆಗಳಲ್ಲೂ ಸಂಭ್ರಮ ಮನೆ ಮಾಡಿದೆ.
ದೇವಸ್ಥಾನಕ್ಕೆ ಸುಣ್ಣ, ಬಣ್ಣ ಬಳಿಯಲಾಗಿದೆ. ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ.
ದೀಪಾವಳಿ ಸಂದರ್ಭದಲ್ಲಿ ನಡೆಯುವ ಜಾತ್ರೆಗೆ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಭಕ್ತರು ಬರುತ್ತಾರೆ. ಅನೇಕರು ಹರಕೆ ತೀರಿಸಿ ಕೃತಾರ್ಥರಾಗುತ್ತಾರೆ.
ತೆಂಗಿನ ಕಾಯಿ ಪವಾಡ: ಇಲ್ಲಿಯ ಹನುಮಾನ ದೇವರು ತೆಂಗಿನಕಾಯಿ ಪವಾಡಕ್ಕೆ ಹೆಸರುವಾಸಿಯಾಗಿದ್ದಾರೆ. ಈ ದೇವಾಲಯಕ್ಕೆ ಬಂದ ಭಕ್ತಾದಿಗಳು ತಮ್ಮ ಕಷ್ಟವನ್ನು ಹೇಳಿಕೊಂಡು ತೆಂಗಿನಕಾಯಿಯನ್ನು ಕಟ್ಟುತ್ತಾರೆ. ಕಷ್ಟ ಪರಿಹಾರ ಆದನಂತರ ಕಟ್ಟಿದ ತೆಂಗಿನಕಾಯಿಯನ್ನು ಬಿಚ್ಚಿಕೊಂಡು ತೆರಳುತ್ತಾರೆ. ಅದರಲ್ಲೂ ಮಕ್ಕಳಾಗದ ಮಹಿಳೆಯರು ಈ ದೇವಾಲಯಕ್ಕೆ ಬಂದು ದೇವಾಲಯದ ಗೋಡೆಗೆ ತೆಂಗಿನಕಾಯಿಯನ್ನು ಕಟ್ಟಿದರೆ ಮಕ್ಕಳಾಗುತ್ತದೆ ಎಂದು ಭಕ್ತರು ನಂಬಿದ್ದಾರೆ.
ಶಾಸಕ ಈಶ್ವರ ಖಂಡ್ರೆಗೆ ಆಹ್ವಾನ: ಗ್ರಾಮದ ಮುಖಂಡರು ಈಚೆಗೆ ಶಾಸಕ ಈಶ್ವರ ಖಂಡ್ರೆ ನಿವಾಸಕ್ಕೆ ತೆರಳಿ ನ.4ರಿಂದ ನಡೆಯಲಿರುವ ಜಾತ್ರಾ ಮಹೋತ್ಸವದ ಧ್ವಜಾರೋಹಣ ನೆರವೇರಿಸಿ ಕೋಡಬೇಕೆಂದು ತಾಂಬೂಲ ನೀಡಿ ಆಹ್ವಾನಿಸಿದರು. ಕೋವಿಡ್ ಹರಡುವಿಕೆಯ ಕಾರಣ ಈ ವರ್ಷದ ಜಾತ್ರೆಯು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಅಲ್ಲದೆ, ಜಾತ್ರೆಯಲ್ಲಿ ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.